ಗಣೇಶ ವಿಸರ್ಜನೆ ವೇಳೆ ಚೂರಿ ಇರಿತ: 7 ಜನರಿಗೆ ಗಾಯ

KannadaprabhaNewsNetwork | Published : Sep 25, 2024 1:00 AM

ಸಾರಾಂಶ

ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭ ಎರಡು ಯುವಕರ ಗುಂಪಿನ ಮಧ್ಯ ಸಂಭವಿಸಿದ ಘರ್ಷಣೆ ಹಾಗೂ ಚೂರಿ ಇರಿತದಲ್ಲಿ 7 ಜನರು ಗಾಯಗೊಂಡಿದ್ದು, ಅದರಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ.

ಓರ್ವ ಗಂಭೀರ । 9 ಜನರ ಮೇಲೆ ಪ್ರಕರಣ ದಾಖಲು, ಮೂವರ ಬಂಧನ

ಕನ್ನಡಪ್ರಭ ವಾರ್ತೆ ಗಂಗಾವತಿ

ಗಣೇಶ ವಿಸರ್ಜನೆ ಮೆರವಣಿಗೆ ಸಂದರ್ಭ ಎರಡು ಯುವಕರ ಗುಂಪಿನ ಮಧ್ಯ ಸಂಭವಿಸಿದ ಘರ್ಷಣೆ ಹಾಗೂ ಚೂರಿ ಇರಿತದಲ್ಲಿ 7 ಜನರು ಗಾಯಗೊಂಡಿದ್ದು, ಅದರಲ್ಲಿ ಓರ್ವ ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ತಡರಾತ್ರಿ ಸಂಭವಿಸಿದೆ.

ಚೂರಿ ಇರಿತದಿಂದ ಗಣೇಶ, ಶ್ರೀನಿವಾಸ, ಮಂಜು, ಶಂಕ್ರಪ್ಪ, ಸಾಗರ, ಮನೋಹರ ಎಂಬವರು ಗಾಯಗೊಂಡಿದ್ದು, ಗಂಗಾವತಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಶಿವು ದುರಗಪ್ಪ ಮಾದಿಗ ಗಂಭೀರವಾಗಿ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್‌ಗೆ ದಾಖಲಿಸಲಾಗಿದೆ.

ಘಟನೆ ಹಿನ್ನೆಲೆ:

ನಗರದ ಗುಂಡಮ್ಮ ಕ್ಯಾಂಪಿನಲ್ಲಿ ಗಜಾನನ ಯುವಕ ಸಂಘದವರು ಗಣೇಶನನ್ನು ಪ್ರತಿಷ್ಠಾಪಿಸಿ 17ನೇ ದಿನವಾದ ಸೋಮವಾರ ರಾತ್ರಿ ಡಿಜೆ ಮೂಲಕ ವಿಸರ್ಜನೆ ಮೆರವಣಿಗೆ ಹಮ್ಮಿಕೊಂಡಿದ್ದರು. ಮೆರವಣಿಗೆ ಯಶೋದಾ ಆಸ್ಪತ್ರೆ ಬಳಿ ಬರುತ್ತಿದ್ದಂತೆ ಎರಡು ಯುವಕರ ಗುಂಪಿನ ಮದ್ಯ ಮಾರಾಮಾರಿ ನಡೆದು ಹಲ್ಲೆ ಪ್ರತಿ ಹಲ್ಲೆಯು ಜರುಗಿತು. ಈ ಸಂದರ್ಭ ಚೂರಿ ಹಿಡಿದು ಬಂದ ಕೆಲವರು 7 ಜನರ ಮೇಲೆ ಚೂರಿ ಇರಿದಿದ್ದರಿಂದ ಗಾಯಗೊಂಡಿದ್ದಾರೆ. ಹೊರಗಿನ ಯುವಕರು ಗುಂಪು ಡಿಜೆ ಬಳಿ ಬಂದು ಡ್ಯಾನ್ಸ್ ಮಾಡಿದ್ದೇ ಈ ಘಟನೆಗೆ ಕಾರಣ ಎನ್ನಲಾಗುತ್ತಿದೆ. ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬಿಗಿ ಭದ್ರತೆ:

ನಗರದ ಕೆಲ ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ಗುಂಡಮ್ಮ ಕ್ಯಾಂಪ್ ಬಳಿ ಪೊಲೀಸರು ನಿಗಾವಹಿಸಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ 9 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ ಎಂದು ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ತಿಳಿಸಿದ್ದಾರೆ.ಕೋಮು ಗಲಭೆ ಅಲ್ಲ: ಐಜಿಪಿ

ಗಂಗಾವತಿ ನಗರದಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಚೂರಿ ಇರಿತ ಪ್ರಕರಣವು ಕೋಮು ಗಲಭೆ ಅಲ್ಲ. ಅದು ಯುವಕರ ವೈಷ್ಯಮ್ಯವಾಗಿದೆ ಎಂದು ಬಳ್ಳಾರಿ ವಲಯ ಐಜಿಪಿ ಬಿ.ಎಸ್. ಲೋಕೇಶಕುಮಾರ ಹೇಳಿದರು.

ನಗರದ ಡಿವೈಎಸ್ಪಿ ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಎರಡು ಗುಂಪಿನ ಯುವಕರು ಒಬ್ಬರಿಗೊಬ್ಬರು ಸ್ನೇಹಿತರಾಗಿದ್ದಾರೆ. ಆದರೆ ಡಿಜೆ ಮೆರವಣಿಗೆ ಸಂದರ್ಭದಲ್ಲಿ ಡ್ಯಾನ್ಸ್ ಮಾಡುವ ಕಾರಣಕ್ಕೆ ಜಗಳ ಪ್ರಾರಂಭವಾಗಿ ಚೂರಿ ಇರಿತಕ್ಕೆ ಕಾರಣವಾಗಿದೆ ಎಂದರು.

ನಗರದಲ್ಲಿ ಶಾಂತಿ ಕಾಪಾಡುವುದು ಎಲ್ಲರ ಕರ್ತವ್ಯವಾಗಿದೆ. ಕಾನೂನು ವಿರುದ್ಧವಾಗಿ ನಡೆದುಕೊಂಡರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು. ನಗರದಲ್ಲಿ ಬಿಗಿ ಪೊಲೀಸ್‌ ಭದ್ರತೆ ಕೈಗೊಳ್ಳಲಾಗಿದೆ ಎಂದರು.

ಈ ಸಂದರ್ಭದಲ್ಲಿ ಎಸ್ಪಿ ರಾಮ ಎಲ್. ಅರಸಿದ್ದಿ, ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ ಇದ್ದರು.

Share this article