ನೂಲು ತೆಗೆಯುವ ಘಟಕದಲ್ಲಿ ಕ್ರೀಡಾಂಗಣ ನಿರ್ಮಿಸಲು ಬಿಡುವುದಿಲ್ಲ: ಪ್ರತಾಪ್‌ಸಿಂಹ

KannadaprabhaNewsNetwork |  
Published : Feb 26, 2026, 01:15 AM IST
58 | Kannada Prabha

ಸಾರಾಂಶ

ಬೇಡಿಕೆಗೆ ತಕ್ಕಂತೆ ರೇಷ್ಮೆ ಸೀರೆಗಳ ಉತ್ಪಾದನೆ ಆಗುತ್ತಿಲ್ಲ. ಗ್ರಾಹಕರು ರೇಷ್ಮೆ ಸೀರೆಗಾಗಿ ಟೋಕನ್ ಪಡೆಯುತ್ತಿದ್ದಾರೆ. ನೂಲಿನಂತೆ ಸೀರೆಯೆಂಬ ನಾಣ್ನುಡಿಯಂತೆ ಉತ್ತಮ ಗುಣಮಟ್ಟದ ಸೀರೆಗೆ ತಕ್ಕಂತೆ ಉತ್ಕೃಷ್ಟವಾದ ರೇಷ್ಮೆ ನೂಲನ್ನು ಇಲ್ಲಿನ ಕಾರ್ಖಾನೆಯಲ್ಲಿ ಉತ್ಪಾದಿಸಲಾಗುತ್ತಿದೆ. ಕ್ರೀಡಾಂಗಣ ನಿರ್ಮಾಣ ಮಾಡುವುದರಿಂದ ಉತ್ಪಾದನೆಯ ಮೇಲೆ ಅಡ್ಡ ಪರಿಣಾಮವಾಗಿ ಕಾರ್ಖಾನೆ ಮುಚ್ಚಬೇಕಾಗುತ್ತದೆ.

ಕನ್ನಡಪ್ರಭ ವಾರ್ತೆ ಟಿ.ನರಸೀಪುರ

ಪಟ್ಟಣದ ಪಾರಂಪರಿಕ ಕಾರ್ಖಾನೆಯಾಗಿ,ನಾಲ್ವಡಿ ಕೃಷ್ಣರಾಜ ಒಡೆಯರ್ ನಿರ್ಮಿಸಿರುವ ನೂಲು ತೆಗೆಯುವ ಘಟಕದಲ್ಲಿ ಕ್ರೀಡಾಂಗಣ ನಿರ್ಮಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ರಾಜ್ಯ ಸರ್ಕಾರಕ್ಕೆ ಸವಾಲೆಸೆದರು.

ಪಟ್ಟಣದ ಬೈರಾಪುರ ಗ್ರಾಮಕ್ಕೆ ಹೊಂದಿಕೊಂಡಂತಿರುವ ಕರ್ನಾಟಕ ರೇಷ್ಮೆ ಉದ್ಯಮಗಳ ನೂಲು ತೆಗೆಯುವ ಘಟಕ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ಉದ್ದೇಶದಿಂದ ಸ್ವಾದೀನ ಪಡಿಸಿಕೊಂಡು ಕ್ರೀಡಾ ಇಲಾಖೆಗೆ ಹಸ್ತಾಂತರಗೊಂಡಿರುವ 5 ಎಕರೆ ಜಾಗವನ್ನು ಬಿಜೆಪಿ ಮುಖಂಡರು ಕಾರ್ಮಿಕರ ಜೊತೆಗೂಡಿ ಪರಿಶೀಲಿಸಿ ಅವರು ಮಾತನಾಡಿದರು.

ಬೇಡಿಕೆಗೆ ತಕ್ಕಂತೆ ರೇಷ್ಮೆ ಸೀರೆಗಳ ಉತ್ಪಾದನೆ ಆಗುತ್ತಿಲ್ಲ. ಗ್ರಾಹಕರು ರೇಷ್ಮೆ ಸೀರೆಗಾಗಿ ಟೋಕನ್ ಪಡೆಯುತ್ತಿದ್ದಾರೆ. ನೂಲಿನಂತೆ ಸೀರೆಯೆಂಬ ನಾಣ್ನುಡಿಯಂತೆ ಉತ್ತಮ ಗುಣಮಟ್ಟದ ಸೀರೆಗೆ ತಕ್ಕಂತೆ ಉತ್ಕೃಷ್ಟವಾದ ರೇಷ್ಮೆ ನೂಲನ್ನು ಇಲ್ಲಿನ ಕಾರ್ಖಾನೆಯಲ್ಲಿ ಉತ್ಪಾದಿಸಲಾಗುತ್ತಿದೆ. ಕ್ರೀಡಾಂಗಣ ನಿರ್ಮಾಣ ಮಾಡುವುದರಿಂದ ಉತ್ಪಾದನೆಯ ಮೇಲೆ ಅಡ್ಡ ಪರಿಣಾಮವಾಗಿ ಕಾರ್ಖಾನೆ ಮುಚ್ಚಬೇಕಾಗುತ್ತದೆ. ಇದಕ್ಕೆ ಅವಕಾಶವನ್ನು ಕೊಡುವುದಿಲ್ಲ.

ನಾನು ಕೂಡ ಕ್ರೀಡಾ ಪ್ರೇಮಿಯೇ, ಕ್ರೀಡಾಂಗಣ ನಿರ್ಮಾಣಕ್ಕೆ ವಿರೋಧವಿಲ್ಲ. ಅದಕ್ಕಾಗಿ ರೇಷ್ಮೆ ಕಾರ್ಖಾನೆ, ನಿವೇಶನವನ್ನು ಆಯ್ಕೆ ಮಾಡಿಕೊಂಡಿದ್ದು ಸರಿಯಲ್ಲ. ಎರಡು ಅವಧಿಗೆ ಸಂಸದ ಆಗಿದ್ದಾಗ ಮೈಸೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಂಗಣ ನಿರ್ಮಾಣ ಮಾಡಬೇಕೆಂದು ಮೈಸೂರು ಹೊರವಲಯದಲ್ಲಿ ಆಯ್ಕೆ ಮಾಡಿದ ಮೊದಲ ನಿವೇಶನ ಸೂಕ್ತವಾಗಿಲ್ಲವೆಂದು. ಮತ್ತೊಂದು ನಿವೇಶನವನ್ನು ಹುಡುಕಾಟ ನಡೆಸಿ ಆಯ್ಕೆ ಮಾಡಿ, ಅಗತ್ಯವಿದ್ದ ಅನುದಾನವನ್ನು ಕೂಡ ಮಂಜೂರು ಮಾಡಿಸಿದ್ದೇನೆ. ಹಾಗಾಗಿ ರೇಷ್ಮೆ ಕಾರ್ಖಾನೆ ಆವರಣದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವ ನಿರ್ಧಾರವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕೆಂದು ಪ್ರತಾಪ್ ಸಿಂಹ ಒತ್ತಾಯಿಸಿದರು.

ಶ್ರಮಿಕ ವರ್ಗದ ನ್ಯಾಯಯುತ ಬೇಡಿಕೆಗಳು ಈಡೇರಬೇಕು:

ಸಂಸದ ಯದುವೀರ ಕೃಷ್ಣ ದತ್ತ ಒಡೆಯರ್ ಮಾತನಾಡಿ, ಮೈಸೂರು ರೇಷ್ಮೆ ಸೀರೆ ರಾಜ್ಯದಲ್ಲಿ ಬೇಡಿಕೆಯುಳ್ಳ ಉತ್ಪನ್ನವಾಗಿದ್ದು, ರಾಜಕಾರಣಿ, ಗಣ್ಯರು ಹಾಗೂ ಅಧಿಕಾರಿಗಳ ಕೈಗಷ್ಟೇ ಸಿಗುತ್ತಿದೆ. ಇಂತಹ ಸನ್ನಿವೇಶದಲ್ಲಿ ಸೀರೆಗೆ ರೇಷ್ಮೆ ನೂಲು ಪೂರೈಸುವ ಕಾರ್ಖಾನೆಯ ಪಕ್ಕದಲ್ಲಿ ಕ್ರೀಡಾಂಗಣ ನಿರ್ಮಾಣ ಮಾಡುವುದು ಸೂಕ್ತವಲ್ಲ. ಕಾರ್ಮಿಕರ ಪ್ರತಿರೋಧ ಈಗಾಗಲೇ ರಾಜ್ಯ ಸರ್ಕಾರದ ಗಮನಕ್ಕೂ ಹೋಗಿದೆ. ಕಾರ್ಖಾನೆಯನ್ನು ಉಳಿಸಿಕೊಂಡು, ಇಲ್ಲಿನ ಕಾರ್ಮಿಕರಿಗೆ ಹೆಚ್ಚಿನ ಮೂಲಸೌಕರ್ಯವನ್ನು ಕಲ್ಪಿಸಿ ಕೊಡಬೇಕಿರುವ ಬಗ್ಗೆ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆದಿದ್ದೇನೆ. ರಾಜ್ಯ ಸರ್ಕಾರ ಕಾರ್ಮಿಕರಿಗೆ ಅನುಕೂಲ ಕಲ್ಪಿಸಿಕೊಡುತ್ತದೆ ಎಂಬ ಭರವಸೆ ಇದೆ ಎಂದರು.

ಚಾಮುಂಡೇಶ್ವರಿ ದೇವಿಯ ಶ್ರೀ ರಕ್ಷೆ:

ಪುರಸಭೆ ಮಾಜಿ ಸದಸ್ಯ ಹಾಗೂ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಆರ್. ಅರ್ಜುನ್ ಮಾತನಾಡಿ, ರೇಷ್ಮೆ ಕಾರ್ಖಾನೆ ನಿವೇಶನವನ್ನು ಕ್ರೀಡಾಂಗಣ ನಿರ್ಮಾಣಕ್ಕೆ ಸ್ವಾಧೀನಪಡಿಸಿಕೊಂಡಿರುವ ಸರ್ಕಾರದ ಕ್ರಮವನ್ನು ಖಂಡಿಸಿ ಕಳೆದ ನಾಲ್ಕೈದು ದಿನಗಳಿಂದ ಕಾರ್ಮಿಕರು ನಡೆಸುತ್ತಿರುವ ಮುಷ್ಕರದ ಹೋರಾಟಕ್ಕೆ ಮೈಸೂರು ಅರಸರ ವಂಶಸ್ಥರಾದ ಸಂಸದ ಯದುವೀರ್ ಕೃಷ್ಣದತ್ತ ಒಡೆಯರ್ ಅವರೇ ಬೆಂಬಲ ಸೂಚಿಸಿ ಆಗಮಿಸಿರುವುದು ಅಧಿದೇವತೆ ಚಾಮುಂಡೇಶ್ವರಿ ದೇವಿಯ ಶ್ರೀ ರಕ್ಷೆ ಸಿಕ್ಕಂತಾಗಿದೆ ಎಂದರು. ನಾಡಿನಲ್ಲಿ ಜನಪರ ಧ್ವನಿಯೆತ್ತುತ್ತಿರುವ ಮಾಜಿ ಸಂಸದ ಪ್ರತಾಪ್ ಸಿಂಹ ಬೆಂಬಲ ನೀಡಿರುವುದು ಸಿಂಹ ಬಲ ಬಂದಂತಾಗಿದೆ ಎಂದರು.

ಹಿರಿಯ ವಕೀಲ ಎಸ್. ಅರುಣ್ ಕುಮಾರ್ ಮಾತನಾಡಿದರು. ಮುಖಂಡರಾದ ತೋಟದಪ್ಪ ಬಸವರಾಜು, ಹಿರಿಯ ಶಸ್ತ್ರಚಿಕಿತ್ಸಕ ಡಾ.ಎಂ. ರೇವಣ್ಣ, ವೀರಶೈವ ಲಿಂಗಾಯತ ಮಹಾಸಭಾ ಅಧ್ಯಕ್ಷ ಸಿ.ಎಂ. ಪ್ರಕಾಶ್, ನಿರ್ದೇಶಕ ಕುಮಾರ್, ಪುರಸಭೆ ಮಾಜಿ ಸದಸ್ಯ ಎಸ್.ಕೆ.ಕಿರಣ್, ಬಿಜೆಪಿ ಕ್ಷೇತ್ರ ಅಧ್ಯಕ್ಷ ಶಿವಕುಮಾರ್, ಪ್ರಧಾನ ಕಾರ್ಯದರ್ಶಿ ಟಿ.ಎಸ್. ಮಲ್ಲಿಕಾರ್ಜುನಸ್ವಾಮಿ, ಜಿಲ್ಲಾ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಂಜು, ಅಧ್ಯಕ್ಷ ಎಸ್. ಸಿದ್ದರಾಜು, ರೈತ ಮೋರ್ಚಾ ಅಧ್ಯಕ್ಷ ಸೋಮಶೇಖರಪ್ಪ, ಗ್ರಾಪಂ ಸದಸ್ಯ ಕಿರಗಸೂರು ಮಹದೇವಸ್ವಾಮಿ, ಯುವ ಮೋರ್ಚಾ ಅಧ್ಯಕ್ಷರಾದ ರಘು, ಜಯಕುಮಾರ್, ಮುಖಂಡರಾದ ಸುನಿಲ್ ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ರಾಮೀಣ ಮಹಿಳೆಯರಿಗೆ ಸವಲತ್ತು ಒದಗಿಸಿ ಆರ್ಥಿಕ ಶಕ್ತಿತುಂಬಿ: ಸುಜಾತಾ
ಮಕ್ಕಳಿಗೆ ಅಂಗನವಾಡಿಗಳೇ ಮೊದಲ ಪಾಠಶಾಲೆ