ಏಕನಾಥ ಮೆದಿಕೇರಿ ಹನುಮಸಾಗರ
ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಉಪ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಮುಂಭಾಗದ ತಂತಿ ಬೇಲಿ ಆಕ್ರಮಿಸಿಕೊಂಡು ಸುಮಾರು 33ಕ್ಕೂ ಹೆಚ್ಚು ಗೂಡಂಗಡಿ ತಲೆ ಎತ್ತಿವೆ. ಇದರಿಂದ ಮಾರುಕಟ್ಟೆಗೆ ಆಗಮಿಸುವ ರೈತರಿಗೆ ಮತ್ತು ಸಾರ್ವಜನಿಕರಿಗೆ ಒಳ ಹೋಗಲು ಹರಸಾಹಸ ಪಡುವಂತಾಗಿದೆ.
ಈ ಕುರಿತು ಎಪಿಎಂಸಿ ಆಡಳಿತ ಮಂಡಳಿ ಕಳೆದ ಐದು ತಿಂಗಳ ಹಿಂದೆಯೇ ತೆರವಿಗೆ ತಿಳಿವಳಿಕೆ ಪತ್ರ ನೀಡಿದ್ದರೂ ಗೂಡಂಗಡಿ ಮಾಲೀಕರು ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಅಧಿಕಾರಿಗಳ ಈ ಜಾಣ ಕುರುಡುತನ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.ಜನಪ್ರತಿನಿಧಿಗಳ ಶಕ್ತಿ ಪ್ರದರ್ಶನ?: ಅಂಗಡಿ ತೆರವುಗೊಳಿಸಲು ಅಧಿಕಾರಿಗಳು ಸನ್ನದ್ಧರಾದಾಗಲೆಲ್ಲ ಗೂಡಂಗಡಿ ಮಾಲೀಕರು ಜನಪ್ರತಿನಿಧಿಗಳ ಮೊರೆ ಹೋಗುತ್ತಿದ್ದಾರೆ. ರಾಜಕೀಯ ನಾಯಕರ ಮಧ್ಯ ಪ್ರವೇಶದಿಂದ ಅಧಿಕಾರಿಗಳು ಕಾರ್ಯಾಚರಣೆ ನಡೆಸಲಾಗದೆ ಅಸಹಾಯಕರಾಗಿದ್ದಾರೆ. ಇಲಾಖೆಗಳ ನಡುವೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದ್ದು, ಪಪಂ ಮತ್ತು ಪೊಲೀಸ್ ಇಲಾಖೆಯ ಸಹಕಾರ ಕೋರಿದ್ದರೂ ದಿನಾಂಕ ನಿಗದಿಯಾಗದ ನೆಪದಲ್ಲಿ ತೆರವು ಪ್ರಕ್ರಿಯೆ ವಿಳಂಬವಾಗುತ್ತಿದೆ.
ಎಪಿಎಂಸಿ ಮುಂದಿರುವ ಅನಧಿಕೃತ ಅಂಗಡಿಗಳಿಗೆ ಈಗಾಗಲೇ ಅಂತಿಮ ನೋಟಿಸ್ ನೀಡಲಾಗಿದೆ. ಪಪಂ ಮತ್ತು ಪೊಲೀಸ್ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಶೀಘ್ರ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು ಎಂದು ಕುಷ್ಟಗಿ ಎಪಿಎಂಸಿ ಕಾರ್ಯದರ್ಶಿ ಸುರೇಶ ತಂಗನೂರು ತಿಳಿಸಿದ್ದಾರೆ.