ಕಾಲ್ತುಳಿತ ಗಾಯಾಳುಗಳಿಂದ ಡೀಸಿ ಮುಂದೆ ಹೇಳಿಕೆ ದಾಖಲು

KannadaprabhaNewsNetwork |  
Published : Jun 12, 2025, 12:56 AM IST
DC Office 4 | Kannada Prabha

ಸಾರಾಂಶ

ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲಾ ಮ್ಯಾಜಿಸ್ಟೇಟ್‌ ಆಗಿರುವ ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರು ಬುಧವಾರ 10ಕ್ಕೂ ಹೆಚ್ಚಿನ ಗಾಯಾಳುಗಳಿಂದ ಹೇಳಿಕೆ ದಾಖಲಿಸಿಕೊಂಡರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಬೆಂಗಳೂರು ನಗರ ಜಿಲ್ಲಾ ಮ್ಯಾಜಿಸ್ಟೇಟ್‌ ಆಗಿರುವ ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರು ಬುಧವಾರ 10ಕ್ಕೂ ಹೆಚ್ಚಿನ ಗಾಯಾಳುಗಳಿಂದ ಹೇಳಿಕೆ ದಾಖಲಿಸಿಕೊಂಡರು. ಹೇಳಿಕೆ ನೀಡುವ ಕುರಿತು ಈಗಾಗಲೇ 55 ಗಾಯಾಳುಗಳಿಗೆ ನೋಟಿಸ್‌ ನೀಡಲಾಗಿದ್ದು, ಅದರಲ್ಲಿ ಬುಧವಾರ ಸುಮಾರು 14 ಮಂದಿ ಕಂದಾಯ ಭವನದ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯಕ್ಕೆ ಹಾಜರಾಗಿ ಹೇಳಿಕೆ ನೀಡಿದರು. ವಿಡಿಯೋ ರೆಕಾರ್ಡಿಂಗ್‌ ಮೂಲಕ ಗಾಯಾಳುಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಯಿತು. ಉಳಿದ ಗಾಯಾಳುಗಳಲ್ಲಿ 10 ಮಂದಿಯ ಹೇಳಿಕೆಯನ್ನು ಈಗಾಗಲೇ ಆಸ್ಪತ್ರೆಯಲ್ಲೇ ದಾಖಲಿಸಲಾಗಿದೆ.

ಕುಂಟುತ್ತಾ ಬಂದ ಗಾಯಾಳುಗಳು:

ಹೇಳಿಕೆ ದಾಖಲಿಸಿರುವ ಗಾಯಾಳುಗಳ ಪೈಕಿ ಬಹುತೇಕರು ಕೈಗೆ, ಕಾಲಿಗೆ ಬ್ಯಾಂಡೇಜ್‌ ಕಟ್ಟಿಕೊಂಡೇ ಮ್ಯಾಜಿಸ್ಟ್ರೇಟ್‌ ಮುಂದೆ ಹಾಜರಾದರು. ಗಾಯಾಳು ರಾಹುಲ್‌ ಎಂಬುವವರು ಕುತ್ತಿಗೆಗೆ ಬೆಲ್ಟ್‌ ಹಾಕಿಕೊಂಡು, ನಡೆಯಲಾಗದ ಪರಿಸ್ಥಿತಿಯಲ್ಲಿದ್ದರೂ ಹೇಳಿಕೆ ದಾಖಲಿಸಲು ಬಂದಿದ್ದರು.

ಎಲ್ಲ ಗಾಯಾಳುಗಳು ಜೂನ್‌ 4ರಂದು ನಡೆದ ಘಟನೆ ಹಾಗೂ ತಾವು ಅನುಭವಿಸಿದ ಯಾತನೆಯನ್ನು ವಿವರಿಸಿದರು. ಜತೆಗೆ, ಕಾಲ್ತುಳಿತದಲ್ಲಿ ಸಿಲುಕಿದ ನಂತರ ಆಸ್ಪತ್ರೆಗೆ ಕೊಂಡೊಯ್ದಿದ್ದು, ಆಸ್ಪತ್ರೆಯಲ್ಲಿ ನೀಡಲಾದ ಚಿಕಿತ್ಸೆಗಳ ಕುರಿತಂತೆ ವಿವರಿಸಿದ್ದಾರೆ.

ಬಹುತೇಕ ಗಾಯಾಳುಗಳು ಚಿನ್ನಸ್ವಾಮಿ ಕ್ರೀಡಾಂಗಣ ಹೊರಭಾಗದಲ್ಲಿ ಜಮಾವಣೆಗೊಂಡಿದ್ದ ಜನರ ಸಂಖ್ಯೆಗೆ ತಕ್ಕಂತೆ ಪೊಲೀಸರು ನಿಯೋಜನೆಗೊಂಡಿರಲಿಲ್ಲ. ವಿಧಾನಸೌಧ ಕಾರ್ಯಕ್ರಮದಲ್ಲಿದ್ದ ಪ್ರಮಾಣದಲ್ಲಿ ಪೊಲೀಸರನ್ನು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಿಯೋಜಿಸಲಾಗಿರಲಿಲ್ಲ. ಹೀಗಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ಹೊರಭಾಗದಲ್ಲಿ ಜನರನ್ನು ನಿಯಂತ್ರಿಸಲು ಅಲ್ಲಿದ್ದ ಪೊಲೀಸರು ವಿಫಲರಾಗಿದ್ದಾರೆ ಎಂಬಂತಹ ಹೇಳಿಕೆಗಳನ್ನು ನೀಡಿದ್ದಾರೆ. ಕೆಲವರು ಆರ್‌ಸಿಬಿ ಗೆದ್ದ ಮರುದಿನವೇ ವಿಜಯೋತ್ಸವ ಕಾರ್ಯಕ್ರಮ ಆಯೋಜಿಸಿದ್ದೂ ದುರಂತಕ್ಕೆ ಕಾರಣ ಎಂದು ಅಭಿಪ್ರಾಯ ತಿಳಿಸಿದ್ದಾರೆ.

ಹಾಗೆಯೇ, ನೆರೆದಿದ್ದ ಜನರೂ ಅತಿರೇಕದಿಂದ ವರ್ತಿಸಿದ್ದಾರೆ. ಉಚಿತ ಟಿಕೆಟ್‌ ನೀಡಿದ್ದರಿಂದ ಜನರು ಹೆಚ್ಚಿನ ಪ್ರಮಾಣದಲ್ಲಿ ಬಂದಿದ್ದರು ಹಾಗೂ ಟಿಕೆಟ್‌ ನೀಡುವುದು ಮತ್ತು ಕ್ರೀಡಾಂಗಣದ ಒಳಭಾಗಕ್ಕೆ ಬಿಡುವಲ್ಲಿ ವಿಳಂಬ ಮಾಡಿದ್ದರಿಂದಲೂ ಕಾಲ್ತುಳಿತ ಸಂಭವಿಸಿದೆ ಎಂದು ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೋಟ್‌

ಜಿಲ್ಲಾ ಮ್ಯಾಜಿಸ್ಟ್ರೇಟ್‌ ಅವರ ಮುಂದೆ ದುರಂತದ ಕುರಿತಂತೆ ಹೇಳಿಕೆ ನೀಡಿದ್ದೇನೆ. ಆರ್‌ಸಿಬಿ ಗೆದ್ದ ನಂತರ ಎರಡು ದಿನ ಬಿಟ್ಟು ಕಾರ್ಯಕ್ರಮ ಆಯೋಜಿಸಿದ್ದರೆ ಅಷ್ಟು ಜನ ಸೇರುತ್ತಿರಲಿಲ್ಲ. ಹಾಗೆಯೇ, ದುರಂತ ನಡೆದ ದಿನದಂದು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜನರನ್ನು ನಿಯಂತ್ರಿಸುವಷ್ಟು ಪೊಲೀಸರನ್ನು ನಿಯೋಜಿಸಿರಲಿಲ್ಲ. ಇದೂ ಕೂಡ ಕಾಲ್ತುಳಿತ ಉಂಟಾಗಲು ಕಾರಣಗಳಲ್ಲೊಂದು.

- ಮೌನೀಶ್‌, ಗಾಯಾಳು

ಚಿನ್ನಸ್ವಾಮಿ ಕ್ರೀಡಾಂಗಣದ ಗೇಟ್‌ ತೆರೆದ ಕೂಡಲೇ ನೂಕುನುಗ್ಗಲು ಶುರುವಾಯಿತು. ಅದರಿಂದ ನನ್ನ ಕೈಗೆ ಗಂಭಿರ ಗಾಯವಾಗುವಂತಾಯಿತು. ಜನರನ್ನು ನಿಯಂತ್ರಿಸಬಹುದಿತ್ತು. ಆದರೆ, ಜನರ ಸಂಖ್ಯೆಗೆ ತಕ್ಕಂತೆ ವ್ಯವಸ್ಥೆಯಿರಲಿಲ್ಲ.

- ಸೈಯದ್ ಅಬು ಜಾಫರ್‌, ಗಾಯಾಳು

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ