ಕಡಲೆ ಬೆಳೆ ಖರೀದಿ ಕೇಂದ್ರ ಆರಂಭಿಸಿ

KannadaprabhaNewsNetwork |  
Published : Dec 25, 2025, 02:30 AM IST
24ಕೆಕೆಆರ್1: ಕುಕನೂರಿನಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆವತಿಯಿಂದ ಶೀಘ್ರ ಕಡಲೆ ಬೆಳೆಗೆ ಬೆಂಬಲ ಬೆಲೆಯಡಿಯಲ್ಲಿ ಖರೀದಿ ಕೇಂದ್ರ ಆರಂಭಿಸಲು ತಹಶೀಲ್ದಾರ್ ಎಚ್.ಪ್ರಾಣೇಶ, ಎಪಿಎಂಸಿ ಕಾರ್ಯದರ್ಶಿ ಗುರುಸ್ವಾಮಿ ಗುಡಿ ಅವರಿಗೆ ಬುಧವಾರ ಮನವಿ ಸಲ್ಲಿಸಲಾಯಿತು.  | Kannada Prabha

ಸಾರಾಂಶ

ಸರಿಯಾದ ಸಮಯಕ್ಕೆ ಖರೀದಿ ಕೇಂದ್ರ ತೆರೆಯದೆ ರೈತರು ನಷ್ಟ ಅನುಭವಿಸುವಂತಾಗಿದೆ

ಕುಕನೂರು: ಕಡಲೆ ಬೆಳೆಗೆ ಕೂಡಲೇ ಬೆಂಬಲ ಬೆಲೆ ಘೋಷಿಸಿ, ಖರೀದಿ ಕೇಂದ್ರ ಆರಂಭಿಸಬೇಕು ಎಂದು ಒತ್ತಾಯಿಸಿ ಪಟ್ಟಣದಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಹಾಗೂ ರೈತರು ಪ್ರತಿಭಟಿಸಿ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.

ಪಟ್ಟಣದ ಅನ್ನದಾನೀಶ್ವರ ಶಾಖಾಮಠದಿಂದ ರೈತ ಬಳಗದೊಂದಿಗೆ ಪ್ರತಿಭಟನೆ ಆರಂಭವಾಯಿತು. ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣದ ಮೂಲಕ ವೀರಭದ್ರಪ್ಪ ವೃತ್ತದವರೆಗೆ ಕಡಲೆ ಬೆಳೆಗೆ ಶೀಘ್ರ ಬೆಂಬಲ ಬೆಲೆ ಅಡಿಯಲ್ಲಿ ಖರೀದಿ ಕೇಂದ್ರ ಪ್ರಾರಂಭಿಸುವಂತೆ ರೈತ ವರ್ಗದವರು ಪ್ರತಿಭಟನೆ ಮೂಲಕ ಆಗಮಿಸಿದರು.

ರೈತ ಸಂಘದ ಪ್ರಧಾನಕಾರ್ಯದರ್ಶಿ ಈಶಪ್ಪ ಸಬರದ್ ಮಾತನಾಡಿ, ಈ ಹಿಂದೆ ಮುಂಗಾರಿನಲ್ಲಿ ಬೆಳೆಯಲಾದ ಹೆಸರು ಬೆಳೆಗೆ ಬೆಂಬಲ ಬೆಲೆ ಘೋಷಣೆಯಡಿಯಲ್ಲಿ ಖರೀದಿ ಮಾಡಬೇಕು ಎಂದು ಮನವಿ ಮಾಡಿದ ಅವರು, ಸರಿಯಾದ ಸಮಯಕ್ಕೆ ಖರೀದಿ ಕೇಂದ್ರ ತೆರೆಯದೆ ರೈತರು ನಷ್ಟ ಅನುಭವಿಸುವಂತಾಗಿದೆ. ಅತಿಯಾದ ಮಳೆಯಿಂದ ಹೆಸರು ಬೆಳೆ ನಷ್ಟವಾಗಿದೆ. ಬೆಳೆನಷ್ಟದಿಂದ ಬೆಳೆ ಪರಿಹಾರ ಇದುವರೆಗೂ ಬಂದಿಲ್ಲ.ಕೂಡಲೆ ಬರ ಪರಿಹಾರ ಜಮಾ ಮಾಡಬೇಕು. ಕಡಲೆ ಬೆಳೆಗೆ ಖರೀದಿ ಕೇಂದ್ರ ಕೂಡಲೆ ತೆರೆಯಬೇಕು. ಎಪಿಎಂಸಿಯ ಆವರಣದಲ್ಲಿ ಟೆಂಡರ್ ಪ್ರಕ್ರಿಯೆ ಹಮ್ಮಿಕೊಳ್ಳಲು ಈಗಾಗಲೇ ಹಲವಾರು ಬಾರಿ ಮನವಿ ಪತ್ರ ಸಲ್ಲಿಸಿದ್ದೇವೆ. ಆದರೆ ಇನ್ನೂವರೆಗೂ ಯಾವುದೇ ರೀತಿಯಿಂದ ಟೆಂಡರ್ ಪ್ರಕ್ರಿಯೆ ನಡೆದಿಲ್ಲ. ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ರೈತರ ಬಗ್ಗೆ ಮಲತಾಯಿ ಧೋರಣೆ ಮುಂದುವರೆಸಿಕೊಂಡು ಬಂದಿದ್ದಾರೆ. ಬೆಳೆ ವಿಮೆ ಹಾಕುವಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ತಾಲೂಕಿನಲ್ಲಿ ನಡೆದಿದೆ. ಇನ್ನು ೧೫ ದಿನಗಳ ಒಳಗಾಗಿ ನಮ್ಮ ಬೇಡಿಕೆ ಈಡೇರಿಸದಿದ್ದರೆ ಕುಕನೂರು ಬಂದ್ ಮಾಡಿ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರುಳಿ ಮಾತನಾಡಿ, ರೈತರು ಬೆಳೆ ಬೆಳೆಯಲು ಕಷ್ಟ ಪಡುತ್ತಾರೆ. ಸಾಲ ಮಾಡಿ ಬಿತ್ತನೆ ಮಾಡಿ ಕಳೆ ತೆಗೆಯಿಸಿ ಔಷಧ ಸಿಂಪರಣೆ ಮಾಡುತ್ತಾರೆ. ಬೆಳೆ ಕಟಾವಿಗೂ ಸಹ ಖರ್ಚು ಮಾಡುತ್ತಾರೆ. ಸಾಲದ ಹೊರೆಯಿಂದ ತಪ್ಪಿಸಿಕೊಳ್ಳಲು ಅನಿವಾರ್ಯವಾಗಿ ದಲ್ಲಾಳಿಗಳಿಗೆ ಕಡಿಮೆ ಬೆಲೆಗೆ ತಮ್ಮ ಬೆಳೆ ಮಾರಿಕೊಳ್ಳುತ್ತಾರೆ. ಅದೇ ಸರ್ಕಾರ ರೈತರ ಬೆಳೆ ಕಟಾವಿನ ಮೊದಲೇ ಬೆಂಬಲ ಬೆಲೆ ಯೋಜನೆಯಲ್ಲಿ ಖರೀದಿ ಕೇಂದ್ರ ಆರಂಭಿಸಿ ಖರೀದಿಗೆ ಮುಂದಾದರೆ ರೈತರ ಸಮಸ್ಯೆಗೆ ಸ್ಪಂದನೆ ನೀಡಿದಂತಾಗುತ್ತದೆ. ಖರೀದಿ ಕೇಂದ್ರ ಆರಂಭಿಸಿ ರೈತರ ಬೆಳೆ ಖರೀದಿ ಆಗಿ ಎರಡು ಮೂರು ತಿಂಗಳಿಗೆ ರೈತರ ಬೆಳೆಯ ಹಣ ಬರುತ್ತದೆ. ಹಾಗಾಗಿ ಕೂಡಲೇ ಜಿಲ್ಲಾಡಳಿತ, ಸರ್ಕಾರ ಖರೀದಿ ಕೇಂದ್ರ ಆರಂಭಿಸಿದರೆ ರೈತರಿಗೂ ಸಹ ತಮ್ಮ ಬೆಳೆಯ ಹಣ ಬೇಗ ಕೈ ಸೇರಲು ಅನುಕೂಲವಾಗುತ್ತದೆ. ಸರ್ಕಾರ ನಿಧಾನಗತಿ ಮಾಡಿ ರೈತರನ್ನು ಮತ್ತಷ್ಟು ಕಷ್ಟಕ್ಕೆ ದೂಡುವ ಧೋರಣೆ ಕೈ ಬಿಟ್ಟು ತಕ್ಷಣ ರೈತರಿಗೆ ಸ್ಪಂದಿಸುವ ಕಾರ್ಯ ಮಾಡಬೇಕು ಎಂದು ಒತ್ತಾಯಿಸಿದರು.

ಕಡಲೆ ಬೆಳೆಯ ಬೆಂಬಲ ಬೆಲೆ ಯೋಜನೆಯಲ್ಲಿ ಶೀಘ್ರ ಖರೀದಿ ಕೇಂದ್ರ ತೆರಯಲು ತಹಸೀಲ್ದಾರ್ ಎಚ್.ಪ್ರಾಣೇಶ, ಎಪಿಎಂಸಿ ಕಾರ್ಯದರ್ಶಿ ಗುರುಸ್ವಾಮಿ ಗುಡಿ ಅವರಿಗೆ ಮನವಿ ಸಲ್ಲಿಸಿದರು.

ಸಂಘದ ರಾಜ್ಯ ಉಪಾಧ್ಯಕ್ಷ ಅಂದಪ್ಪ ಹುರುಳಿ,ತಾಲೂಕಾಧ್ಯಕ್ಷ ದೇವಪ್ಪ ಸೋಭಾನದ್, ಗೌ.ಅಧ್ಯಕ್ಷ ಶರಣಪ್ಪ ಚಂಡೂರು, ಪ್ರಮುಖರಾದ ಗವಿಸಿದ್ದಪ್ಪ ಜಿನಿನ್, ಮಲ್ಲಪ್ಪ ಚಳಮರದ್, ಬಸವರಾಜ ಸಬರದ್, ಉಪಾಧ್ಯಕ್ಷ ಹನಮಪ್ಪ ಮರಡಿ, ಉಮೇಶ ಬೆದವಟ್ಟಿ, ಈರಪ್ಪ ಈಬೇರಿ, ಶರಣಪ್ಪ ಯತ್ನಟ್ಟಿ, ಖಾಸಿಂಸಾಬ್‌ ಸಂಗಟಿ, ನಗರ ಘಟಕದ ಅಧ್ಯಕ್ಷ ಶಿವು ಬಂಗಿ, ಬಸಪ್ಪ ಲಾಳಗೊಂಡರ, ಹನಮಪ್ಪ ಗೊರ್ಲೆಕೊಪ್ಪ, ಶರಣಪ್ಪ ದೀವಟರ್, ಹುಚ್ಚಿರಪ್ಪ ಹಳ್ಳಿಕೇರಿ ಸೇರಿದಂತೆ ಅನೇಕರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಂಭ್ರಮದ ಕ್ರಿಸ್‌ಮಸ್‌ ಆಚರಣೆಗೆ ಕ್ಷಣಗಣನೆ
ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ತಡೆಯಲು ಶ್ರಮಿಸಲಿ: ಮಂಜುನಾಥ ಕಂಬಳಿ