ಕಾರಟಗಿ:
ಶೈಕ್ಷಣಿಕವಾಗಿ ಹಿಂದುಳಿದ ತಾಲೂಕು ಕೇಂದ್ರವಾಗಿರುವ ಕಾರಟಗಿಯಲ್ಲಿ ಸರ್ಕಾರಿ ಪದವಿ ಕಾಲೇಜು, ಬಾಲಕಿಯರ ಪ್ರೌಢಶಾಲೆ, ರೈಸ್ ಪಾರ್ಕ್‌ನಲ್ಲಿ ಬಿ.ಟೆಕ್ ಫುಡ್ ವಿಶೇಷ ಕಾಲೇಜು ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳ ಆರಂಭಕ್ಕೆ ಸಚಿವ ಶಿವರಾಜ ತಂಗಡಗಿ ಪ್ರಯತ್ನಿಸಬೇಕೆಂದು ಜಾಗೃತ ಯುವಕ ಸಂಘದ ಪದಾಧಿಕಾರಿಗಳು ಒತ್ತಾಯಿಸಿದ್ದಾರೆ.ಪಟ್ಟಣದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಬಸವರಾಜ ಶೆಟ್ಟರ್, ಗುಣಮಟ್ಟದ ಭತ್ತ, ಅಕ್ಕಿಯಿಂದ ದೇಶ-ವಿದೇಶದಲ್ಲಿ ಖ್ಯಾತಿ ಪಡೆದಿರುವ ಕಾರಟಗಿ ಆರ್ಥಿಕ ಹಾಗೂ ಔದ್ಯೋಗಿಕವಾಗಿ ಶ್ರೀಮಂತವಾಗಿದೆ. ಆದರೆ, ರಾಜ್ಯದ ಶೈಕ್ಷಣಿಕ ಸೂಚ್ಯಂಕದಲ್ಲಿ ಕೊನೆಯ ಸ್ಥಾನದಲ್ಲಿರುವುದು ವಿಪರ್ಯಾಸ. ಕೂಡಲೇ ಸಚಿವರು ವಿಶೇಷ ಪ್ರಯತ್ನ ಮಾಡಿ ಸರ್ಕಾರಿ ಪದವಿ ಕಾಲೇಜು ಮತ್ತು ಬಾಲಕಿಯರ ಪ್ರೌಢಶಾಲೆ ಆರಂಭಿಸಿ ಈ ಭಾಗದ ಬಡ ವಿದ್ಯಾರ್ಥಿಗಳ ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿದರು.
ಸಂಘದ ಗೌರವಾಧ್ಯಕ್ಷ ಶರಣಪ್ಪ ಕೋಟ್ಯಾಳ ಮಾತನಾಡಿ, ಶ್ರೀಮಂತರು ಉನ್ನತ ಶಿಕ್ಷಣಕ್ಕಾಗಿ ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಧಾರವಾಡ, ಬಳ್ಳಾರಿಗೆ ವಲಸೆ ಹೋಗುತ್ತಾರೆ. ಆದರೆ, ಬಡವರಿಗೆ ಆಗದು. ಆದರಿಂದ ಸಚಿವರು, ಕಾರಟಗಿಯಲ್ಲೂ ಕೂಡಾ ಎಂಜಿನಿಯರಿಂಗ್ ಕಾಲೇಜು ಸ್ಥಾಪಿಸಬೇಕು. ಅದರಲ್ಲೂ ರಾಯಚೂರು ಕೃಷಿ ವಿಶ್ವವಿದ್ಯಾಲಯದಡಿ ಇಲ್ಲಿನ ೩೦೦ ಎಕರೆಗೂ ಹೆಚ್ಚು ಭೂಮಿ ಹೊಂದಿರುವ ರೈಸ್ ಪಾರ್ಕ್‌ನಲ್ಲಿ ಬಿ.ಟೆಕ್ ಫುಡ್ ವಿಶೇಷ ಕಾಲೇಜು ಆರಂಭಿಸುವ ಮೂಲಕ ಈ ಭಾಗದಲ್ಲೂ ಕೂಡಾ ವೃತ್ತಿಪರ, ತಾಂತ್ರಿಕ ಶಿಕ್ಷಣ ಹೊಂದಲು ಅವಕಾಶ ಮಾಡಿಕೊಡಬೇಕು ಎಂದರು.ಮಾಜಿ ಅಧ್ಯಕ್ಷ ಪ್ರಹ್ಲಾದ ಜೋಶಿ, ತಾಯಪ್ಪ ಕೋಟ್ಯಾಳ ಮತ್ತು ಅಯ್ಯಪ್ಪ ಉಪ್ಪಾರ ಮಾತನಾಡಿ, ತಾಲೂಕಿನಲ್ಲಿರುವ ಸರ್ಕಾರ ಜಾಗೆಯಲ್ಲಿ ತಾಲೂಕು ಕ್ರೀಡಾಂಗಣ, ಇಲಾಖೆ ಕಚೇರಿ, ವಸತಿ ಶಾಲೆ ಆರಂಭಿಸಬೇಕೆಂದು ಒತ್ತಾಯಿಸಿದರು.
ಪಟ್ಟಣದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದ್ದು ವಾಹನ ದಟ್ಟಣೆ ಏರಿಕೆಯಾಗಿರುವುದರಿಂದ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಇದರಿಂದ ಅಪಘಾತ ಸಂಭವಿಸಿ ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಆದರಿಂದ ಸಚಿವರು ಪಟ್ಟಣದಲ್ಲಿರುವ ರಾಜ್ಯ ಹೆದ್ದಾರಿ ಅಗಲೀಕರಣ ಮಾಡಿ ಡಿವೈಡರ್ ಅಳವಡಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಪೊಲೀಸ್ ಸಿಬ್ಬಂದಿ ಇಲ್ಲದೆ ಅಕ್ರಮ ಚಟುವಟಿಕೆಗೆ ಕಡಿವಾಣ ಹಾಕಲು ಕಾನೂನು ಸುವ್ಯವಸ್ಥೆ ಕಾಪಾಡಲು ತೊಂದರೆಯಾಗಿದೆ. ಆದರಿಂದ ತ್ವರಿತಗತಿಯಲ್ಲಿ ಕಾಲಮಿತಿಯಲ್ಲಿ ಸಿಬ್ಬಂದಿ ಹೆಚ್ಚಿಸಬೇಕು. ಇಲ್ಲದಿದ್ದರೆ ಸಂಘ-ಸಂಸ್ಥೆಗಳನ್ನು ಒಳಗೊಂಡು ಬೃಹತ್ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಸಚಿವರಿಗೆ ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಸಂಘದ ರುದ್ರೇಶ ಮಂಗಳೂರು, ಶರಣಪ್ಪ ಕಾಯಿಗಡ್ಡಿ, ರಾಜಶೇಖರ ಸಿರಿಗೇರಿ, ಎಂ. ಸಂದೀಪಗೌಡ, ವೀರೇಶ ಗದ್ದಿ ಮುದುಗಲ್, ನಾಗರಾಜ ಈಡಿಗೇರ, ಶಂಕ್ರಪ್ಪ ಸುರಪುರ, ಆನಂದ ಕುಲಕರ್ಣಿ, ನರೇಶ ಅಂಗಡಿ, ಶರಣಪ್ಪ ಬೆನಕನಾಳ, ಶರಣಯ್ಯಸ್ವಾಮಿ ಖಾನಾವಳಿ, ಮಂಜುನಾಥ ಹೊನಗುಡಿ, ವೀರೇಶ ಕೋಟ್ಯಾಳ, ಬಸನಗೌಡ ಬಸವೇಶ್ವರ ನಗರ, ಹುಚ್ಚಪ್ಪ ಕುರಿ, ರಜಬ್ ಅಲಿ ಇದ್ದರು.