ಹೂವಿನಹಡಗಲಿ: ನಾಡಿನ ಐತಿಹಾಸಿಕ ಮೈಲಾರಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಫೆ. 4 ರಥ ಸಪ್ತಮಿಯಂದು ಹಾಲು ಉಕ್ಕಿಸುವ ಮೂಲಕ 11 ದಿನಗಳ ಕಾಲ ಜರುಗುವ ಜಾತ್ರೆಗೆ ಚಾಲನೆ ನೀಡಲಾಯಿತು.
ಫೆ.14 ರಂದು ಐತಿಹಾಸಿಕ ಪ್ರಸಿದ್ಧ ಮೈಲಾರಲಿಂಗೇಶ್ವರನ ಕಾರ್ಣಿಕ ನೆರವೇರಲಿದ್ದು ಲಕ್ಷಾಂತರ ಭಕ್ತರು ಸೇರಲಿದ್ದಾರೆ.
ದೇವಸ್ಥಾನದ ರಂಗ ಮಂಟಪದಲ್ಲಿ ದೇವಸ್ಥಾನದ ವಂಶ ಪಾರಂಪರ್ಯ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್, ದೇವಸ್ಥಾನದ ಅರ್ಚಕ ಪ್ರಮೋದ್ ಭಟ್ ಉಪಸ್ಥಿತರಿದ್ದರು. ಕಾರ್ಣಿಕ ನುಡಿಯಲು ಗೊರವಪ್ಪ ಏರುವ ಐತಿಹಾಸಿಕ ಬಿಲ್ಲಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ದೇವಸ್ಥಾನದ ಬಾಬುದಾರರು, ಮೈಲಾರ ಗ್ರಾಮದ ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ಸಂಪ್ರದಾಯದ ಪ್ರಕಾರ ಕಾರ್ಣಿಕ ನುಡಿಯುವ ಗೊರವಯ್ಯ ರಥಸಪ್ತಮಿ ದಿನದಿಂದ 11 ದಿನಗಳ ಕಾಲ ಉಪವಾಸ ವ್ರತ ಮಾಡುತ್ತಾನೆ. ಜತೆಗೆ ಭಂಡಾರದ ನೀರು ಮಾತ್ರ ಸೇವಿಸುತ್ತಾನೆ. ಸ್ವಾಮಿಯ ಪಲ್ಲಕಿಯ ಮೌನ ಸವಾರಿ ಉತ್ಸವ ಡೆಂಕಣ ಮರಡಿಗೆ ತೆರಳಿ 11 ದಿನಗಳ ಕಾಲ ಅಲ್ಲಿಯೇ ಇಡಲಾಗುತ್ತಿದೆ. ನಿತ್ಯ ದೇವಸ್ಥಾನದ ಅರ್ಚಕರು, ಡೆಂಕಣ ಮರಡಿಗೆ ದಿನಕ್ಕೆರಡು ಬಾರಿ ಪೂಜೆ ಸಲ್ಲಿಸುತ್ತಾರೆ. ಸಂಪ್ರದಾಯದಂತೆ ದೇವಸ್ಥಾನದಲ್ಲಿ ಹಾಕಲಾಗಿರುವ ಗಂಟೆಗಳನ್ನು ತೆಗೆಯಲಾಗುತ್ತದೆ. ಜತೆಗೆ ದೇವಸ್ಥಾನದಲ್ಲಿ ಯಾವುದೇ ಪೂಜೆ ಜರುಗುವುದಿಲ್ಲ. ಡೆಂಕಣ ಮರಡಿಯನ್ನು ಹಗಲು ರಾತ್ರಿ ಕಾಯುವ ಕಾಯಕದಲ್ಲಿ ಹರಕೆ ತೀರಿಸುವ ಭಕ್ತರಿಗೆ ಅಂಬಲಿ ಮಜ್ಜಿಗೆ, ಬೆಲ್ಲದ ಪಾನಕವನ್ನು ನೀಡಲಾಗುತ್ತಿದೆ. ಇಂದಿನಿಂದ 11 ದಿನಗಳ ಕಾಲ ಉಪವಾಸ ವ್ರತ ಮಾಡುತ್ತೇವೆ ಎಂದು ದೇವಸ್ಥಾನದ ಧರ್ಮಕರ್ತ ಗುರು ವೆಂಕಪ್ಪಯ್ಯ ಒಡೆಯರ್ ಹೇಳಿದರು.ಫೆ. 4ರಂದು ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಸಂಪ್ರದಾಯದಂತೆ ಹಾಲು ಉಕ್ಕಿಸಲಾಯಿತು. ಈ ಧಾರ್ಮಿಕ ಕಾರ್ಯಕ್ಕೆ ಭಕ್ತರು ಅಕ್ಕಿ, ಬೆಲ್ಲ, ದವಸ, ಧ್ಯಾನಗಳನ್ನು ತಂದು ದೇವರಿಗೆ ಅರ್ಪಿಸುತ್ತಾರೆ. ಆಕಳು ಸಗಣಿಯಿಂದ ಮಾಡಿದ ಕುಳ್ಳುಗಳಿಂದ ದೇವರ ಸನ್ನಿಧಾನದಲ್ಲಿ ಹಾಲು ಕಾಯಿಸಲಾಯಿತು.
ಈ ಸಂದರ್ಭದಲ್ಲಿ ದೇವಸ್ಥಾನದ ವಂಶ ಪಾರಂಪರ್ಯ ಕಾರ್ಯಕರ್ತ ಗುರು ವೆಂಕಪ್ಪಯ್ಯ ಒಡೆಯರ್, ಕಾರ್ಣಿಕ ನುಡಿಯುವ ಗೊರವಯ್ಯ, ಕಾರ್ಣಿಕದ ರಾಮಣ್ಣ, ಅರ್ಚಕ ಪ್ರಮೋಧ ಭಟ್, ದೇವಸ್ಥಾನದ ಇಒ ಹನುಮಂತಪ್ಪ ದೇವಸ್ಥಾನದ ಬಾಬುದಾರರು, ಸಾವಿರಾರು ಭಕ್ತರು ಆಗಮಿಸಿದ್ದರು.