ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡಿಯೇ ಕಾರ್ಖಾನೆ ಆರಂಭಿಸಿ

KannadaprabhaNewsNetwork |  
Published : Oct 27, 2025, 02:00 AM IST
ಮುಗಳಖೋಡ | Kannada Prabha

ಸಾರಾಂಶ

ಸಕ್ಕರೆ ಕಾರ್ಖಾನೆಗಳ ಮಾಲೀಕರು ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡಿಯೇ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಬೇಕು ಎಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಹೇಳಿದರು.

ಕನ್ನಡಪ್ರಭ ವಾರ್ತೆ ಮುಗಳಖೋಡ

ಸಕ್ಕರೆ ಕಾರ್ಖಾನೆಗಳ ಮಾಲೀಕರು ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡಿಯೇ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಬೇಕು. ರೈತರು ಬೆಳೆದ ಕಬ್ಬಿಗೆ ಯೋಗ್ಯ ಬೆಂಬಲ ಬೆಲೆ ನಿಗದಿ ಮಾಡಬೇಕು. ಅದು ಬಿಟ್ಟು ಕಾರ್ಖಾನೆಗಳ ಮಾಲೀಕರು ಮೊಂಡತನ ಪ್ರದರ್ಶಿಸಬಾರದೆಂದು ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜೇರಿ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಭಾನುವಾರ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಅ.30ರಂದು ಮೂಡಲಗಿ ತಾಲೂಕಿನ ಗುರ್ಲಾಪುರ ಕ್ರಾಸ್‌ನಲ್ಲಿ ಮುಧೋಳ- ನಿಪ್ಪಾಣಿ ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟಿಸಲಾಗುವುದು ಎಂದರು. ನಾಡಿನ ಜಗದ್ಗುರುಗಳು, ಮಠಾಧೀಶರು ನಮ್ಮ ರೈತಪರ ಹೋರಾಟಗಳಿಗೆ ಬೆಂಬಲಿಸಬೇಕು. ಇಂದು ಮಠಮಾನ್ಯಗಳು ನಡೆಯುತ್ತಿರುವುದು ರೈತರಿಂದಲೇ, ನಾಡಿನ ಎಲ್ಲ ಮಠಗಳಿಗೆ ರೈತರ ಕೊಡುವ ದವಸ-ಧಾನ್ಯ, ಭಕ್ತಿಯ ಕಾಣಿಕೆಗಳಿಂದ ನಡೆಯುತ್ತಿರುವುದು, ಕಾರಣ ರೈತರ ಹೋರಾಟಕ್ಕೆ ಬೆಂಬಲಿಸಬೇಕು ಎಂದು ಹೇಳಿದರು.

ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿ ಅನೇಕ ಸಕ್ಕರೆ ಕಾರ್ಖಾನೆಗಳಿದ್ದು, ರೈತರ ಕಷ್ಟಕ್ಕೆ ಯಾರೂ ಸ್ಪಂದಿಸುತ್ತಿಲ್ಲ. ಅದಕ್ಕಾಗಿ ಎಲ್ಲಾ ರೈತ ಬಾಂಧವರು ಗುರ್ಲಾಪುರ ಕ್ರಾಸ್‌ನಲ್ಲಿ ಮುಧೋಳ- ನಿಪ್ಪಾಣಿ ರಾಷ್ಟ್ರೀಯ ಹೆದ್ದಾರಿ ತಡೆದು ಬಂದ್ ಮಾಡುವ ನಿರ್ಧಾರವನ್ನು ರೈತ ಸಂಘಟನೆ ತೀರ್ಮಾನಿಸಿದೆ. ಈ ಪ್ರತಿಭಟನೆಯಲ್ಲಿ ಎಲ್ಲಾ ರೈತರು ಭಾಗವಹಿಸಬೇಕು ಎಂದು ಕರೆ ನೀಡಿದರು.

ಸಕ್ಕರೆ ಕಾರ್ಖಾನೆಗಳ ಮಾಲೀಕರಿಗೆ ರೈತರ ತಾಕತ್ತು, ರೈತರ ಒಕ್ಕಟ್ಟನ್ನು ತೋರಿಸಬೇಕಾಗಿದೆ. ಕಾರ್ಖಾನೆಗಳ ಮಾಲೀಕರು ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡಿಯೇ ಕಾರ್ಖಾನೆಗಳನ್ನು ಆರಂಭಿಸಬೇಕು. ಇಲ್ಲವಾದರೆ ಮುಂಬರುವ ದಿನಗಳಲ್ಲಿ ಉಗ್ರವಾದ ಹೋರಾಟಕ್ಕೂ ನಾವು ಸಿದ್ಧರಿದ್ದೇವೆ. ಈ ಪ್ರತಿಭಟನೆಯಲ್ಲಿ ರೈತ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ದಲಿತಪರ ಸಂಘಟನೆಗಳು, ಜನಪರ ಚಿಂತಕರು, ವಿವಿಧ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಬೇಕು ಎಂದು ಚಿಕ್ಕೋಡಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಲ್ಲಪ್ಪ ಅಂಗಡಿ ತಿಳಿಸಿದರು.

ಈ ವೇಳೆ ರೈತ ಸಂಘ ಹಸಿರು ಸೇನೆ ರಾಜ್ಯ ಮುಖಂಡ ಬಾಬುರಾವ್ ಪಾಟೀಲ, ಚಿಕ್ಕೋಡಿ ಜಿಲ್ಲಾಧ್ಯಕ್ಷ ಮಲ್ಲಪ್ಪ ಅಂಗಡಿ, ತಾಲೂಕು ಅಧ್ಯಕ್ಷ ರಮೇಶ ಕಲ್ಲಾರ, ತಾಲೂಕು ಉಪಾಧ್ಯಕ್ಷ ಕಾಶಪ್ಪ ಜಂಬಗಿ, ಹಿರಿಯರಾದ ಮಲ್ಲಿಕಾರ್ಜುನ ಖಾನಗೌಡ, ಸಾಹುಕಾರ್ ಗುರುರಾಜ ಬಂಗಿ, ಮಲ್ಲಪ್ಪ ಯರಗಾಣಿ, ಸಂಗಪ್ಪ ತುಪ್ಪದ, ಅಜ್ಜಪ್ಪ ಬಿರಾಜನರ, ಗೋವಿಂದ ಪೂಜೇರಿ, ಕಲ್ಯಾಣಿ ಮಗದುಮ್ಮ ಮಾದು ಮಗದುಮ್ಮ, ಧರೆಪ್ಪ ಮಂಗಳೂರ, ಲಕ್ಷ್ಮಣ ಬಳಗಾರ, ಪ್ರವೀಣ ಶಿಂದೆ, ಸಂಜಯ ಶಿಂದೆ, ಬರಮಪ್ಪ ಮಾಳಿ, ಮಕ್ತುಮಸಾಬ ನದಾಫ್, ಬದ್ರು ಭದ್ರಶೆಟ್ಟಿ, ವಿವೇಕಾನಂದ ಘಂಟಿ, ರಾಜು ಲಟ್ಟೆ ಇತರರು ಇದ್ದರು.

PREV

Recommended Stories

ಬ್ಯಾಂಕ್‌ಗಳಲ್ಲಿ ಸಣ್ಣ ಮೌಲ್ಯದ ನೋಟು, ನಾಣ್ಯದ ಚಿಲ್ಲರೆ ಕೊರತೆ: ವ್ಯವಹಾರಕ್ಕೆ ತೊಂದರೆ
ಅಜ್ರಿ ಗಾಣಿಗರಿಗೆ ತಲ್ಲೂರ್ಸ್ ಫ್ಯಾಮಿಲಿ ಟ್ರಸ್ಟ್ ಯಕ್ಷಪ್ರಶಸ್ತಿ ಪ್ರದಾನ