ರಾಜ್ಯ, ಕೇಂದ್ರ ಸರ್ಕಾರದಿಂದ ಹಲವು ಕೈಗಾರಿಕೆ ಯೋಜನೆ ಜಾರಿ: ಟೆಕ್ಸಾಕ್ ಘಟಕದ ಸಿದ್ದರಾಜು

KannadaprabhaNewsNetwork |  
Published : Nov 09, 2025, 02:00 AM IST
8ಎಚ್ಎಸ್ಎನ್17 :  | Kannada Prabha

ಸಾರಾಂಶ

ನಾನು ಕೂಡ ಈ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಈ ಸಂಸ್ಥೆ ಕೂಡ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾಗಿದೆ. ಸಾವಿರಾರು ಉದ್ಯಮಿಗಳ ಸೃಷ್ಟಿ ಮಾಡಿದ ಸಂಸ್ಥೆ ಆಗಿದೆ. ಕೆಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಕಾರ್ಯಕ್ರಮಗಳನ್ನು ವಿದ್ಯಾಸಂಸ್ಥೆ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಿದೆ.

ಕನ್ನಡಪ್ರಭ ವಾರ್ತೆ ಹಾಸನ

ನಗರದ ಸಾಲಗಾಮೆ ರಸ್ತೆ ಬಳಿ ಇರುವ ಮಲೆನಾಡು ಇಂಜಿನಿಯರಿಂಗ್ ಕಾಲೇಜಿನ ಅಲ್ಯೂಮಿನಿ ಹಾಲ್‌ನಲ್ಲಿ ಕೇಂದ್ರ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಕರ್ನಾಟಕ ರಾಜ್ಯ ಕೈಗಾರಿಕೆ ತರಬೇತಿ ಕೇಂದ್ರ ಟೆಕ್ಸಾಕ್ ಬೆಂಗಳೂರು ಘಟಕದಿಂದ ಯುವ ಉದ್ಯಮಿಗಳಿಗೆ ಕಾರ್ಯಾಗಾರ ಯಶಸ್ವಿಯಾಗಿ ನಡೆಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಟೆಕ್ಸಾಕ್ ಬೆಂಗಳೂರು ಘಟಕದ ಸಲಹೆಗಾರ ಹಾಗೂ ಕಾರ್ಯನಿರ್ವಹಣಾಧಿಕಾರಿಯಾದ ಸಿದ್ದರಾಜು ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಮತ್ತು ಯುವ ಉದ್ಯಮಿಗಳಿಗೆ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯಿಂದ ನೀಡಲಾಗುತ್ತಿರುವ ವಿವಿಧ ಯೋಜನೆಗಳು ಹಾಗೂ ಸೌಲಭ್ಯಗಳ ಕುರಿತು ಸವಿಸ್ತಾರ ಮಾಹಿತಿಯನ್ನು ನೀಡಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕೈಗಾರಿಕಾ ವಲಯದಲ್ಲಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದ್ದು, ಯುವಕರು ಈ ಯೋಜನೆಗಳ ಸದುಪಯೋಗ ಪಡೆದು ಸ್ವಂತ ಉದ್ಯಮ ಹಾಗೂ ಸಣ್ಣ ಕೈಗಾರಿಕೆಗಳನ್ನು ಆರಂಭಿಸಬೇಕು. ಸರ್ಕಾರದ ಮಾರ್ಗದರ್ಶನ, ಹಣಕಾಸು ಸಹಾಯ ಮತ್ತು ತಾಂತ್ರಿಕ ನೆರವಿನಿಂದ ಸ್ಥಳೀಯ ಉದ್ಯಮ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಕಾರ್ಯದಕ್ಷತೆಯನ್ನು ವೃದ್ಧಿಸುವುದು, ತಂತ್ರಜ್ಞಾನ ವೇದಿಕೆಗಳನ್ನು ನಿರ್ಮಿಸುವುದು ಮತ್ತು ಮಾರುಕಟ್ಟೆ ಪ್ರವೇಶ ಹೆಚ್ಚಿಸುವುದು ಮುಖ್ಯ ಉದ್ದೇಶವಾಗಿದೆ. ಉದ್ಯಮಿಗಳು ಹಸಿರೀಕರಣ ಹಾಗೂ ಸ್ಥಿರ ಅಭಿವೃದ್ಧಿಯತ್ತ ಗಮನಹರಿಸಬೇಕು. ಜೊತೆಗೆ, ಆನ್‌ಲೈನ್ ವಿವಾದ ಪರಿಹಾರ ಒಡಿಆರ್ ವ್ಯವಸ್ಥೆಯ ಪ್ರಯೋಜನವನ್ನು ಎಲ್ಲ ಉದ್ಯಮಿಗಳು ಅರಿತುಕೊಳ್ಳಬೇಕು ಎಂದರು.

ಕಾರ್ಯಕ್ರಮದ ಉದ್ಘಾಟನೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ಎಚ್.ಜೆ. ಅಮರೇಂದ್ರ ನೆರವೇರಿಸಿ ಮಾತನಾಡುತ್ತಾ, ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ತಾಂತ್ರಿಕ ಜ್ಞಾನವನ್ನು ಬಳಸಿ ಸ್ವಯಂ ಉದ್ಯೋಗ ಮತ್ತು ಕೈಗಾರಿಕಾ ಕ್ಷೇತ್ರದಲ್ಲಿ ಹೊಸ ಆವಿಷ್ಕಾರಗಳಿಗೆ ಮುಂಚೂಣಿಯಾಗಬೇಕು ಎಂದು ಹುರಿದುಂಬಿಸಿದರು.

ಕರ್ನಾಟಕ ರಾಜ್ಯ ಕೈಗಾರಿಕಾ ವಾಣಿಜ್ಯ ಸಂಸ್ಥೆ ನಿರ್ದೇಶಕರು ಹಾಗೂ ಐಟಿ ಉದ್ಯಮಿಗಳಾದ ಎಚ್.ಎ. ಕಿರಣ್ ಮಾತನಾಡಿ, ನಾನು ಕೂಡ ಈ ಕಾಲೇಜಿನ ವಿದ್ಯಾರ್ಥಿಯಾಗಿದ್ದು, ಈ ಸಂಸ್ಥೆ ಕೂಡ ಪ್ರತಿಷ್ಠಿತ ವಿದ್ಯಾ ಸಂಸ್ಥೆಯಾಗಿದೆ. ಸಾವಿರಾರು ಉದ್ಯಮಿಗಳ ಸೃಷ್ಟಿ ಮಾಡಿದ ಸಂಸ್ಥೆ ಆಗಿದೆ. ಕೆಂದ್ರ ಮತ್ತು ರಾಜ್ಯ ಸರ್ಕಾರದ ಹಲವಾರು ಕಾರ್ಯಕ್ರಮಗಳನ್ನು ವಿದ್ಯಾಸಂಸ್ಥೆ ಮನೆ ಬಾಗಿಲಿಗೆ ತಲುಪಿಸುವ ಕೆಲಸ ಮಾಡುತ್ತಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಲು ಕರೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಾಸನ ಇಂಡಸ್ಟ್ರೀಯಲ್ ಅಸೋಸಿಯೇಶನ್ ಅಧ್ಯಕ್ಷ ಶಿವಾರಾಮು ವಹಿಸಿದ್ದರು. ಅವರು ಸ್ಥಳೀಯ ಕೈಗಾರಿಕಾ ವಲಯದಲ್ಲಿ ಯುವಜನರ ಪಾಲ್ಗೊಳ್ಳುವಿಕೆ ಹೆಚ್ಚಾಗಬೇಕೆಂದು ಅಭಿಪ್ರಾಯಪಟ್ಟರು.

ಜಿಲ್ಲಾ ಕೈಗಾರಿಕಾ ಕೇಂದ್ರದ ಮುಖ್ಯಸ್ಥ ಉಮೇಶ್ ವಿ., ರವೀಂದ್ರನಾಥ್ ಬಿ.ಕೆ., ಗೋಪಿನಾಥ್ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮಲೆನಾಡು ಇಂಜಿನಿಯರಿಂಗ್ ಕಾಲೇಜು ಮಾರೀಸ್ ಫೌಂಡೇಶನ್‌ನ ಮುಖ್ಯನಿರ್ವಹಣಾಧಿಕಾರಿ ಡಾ. ಗೀತಾ ಕಿರಣ್ ಹಾಗೂ ಜಿಲ್ಲಾ ಕೈಗಾರಿಕಾ ಕೇಂದ್ರದ ಸಹಾಯಕ ನಿರ್ದೇಶಕ ಮೋಹನ್ ಬಿ. ಅವರು ಸಂಯೋಜಿಸಿದರು. ವಿಭಿನ್ನ ವಿಭಾಗದ ವಿದ್ಯಾರ್ಥಿಗಳು, ಯುವ ಉದ್ಯಮಿಗಳು ಹಾಗೂ ಕೈಗಾರಿಕಾ ಕ್ಷೇತ್ರದ ಆಸಕ್ತರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿ, ಸರ್ಕಾರಿ ಯೋಜನೆಗಳು, ಸಾಲದ ಸೌಲಭ್ಯಗಳು ಹಾಗೂ ಹೊಸ ತಂತ್ರಜ್ಞಾನಗಳ ಕುರಿತು ಮಾಹಿತಿಯನ್ನು ಪಡೆದರು. ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಿಂದ ವಿವಿಧ ವಿಚಾರ ಸಂಕಿರಣಗಳು ನಡೆದವು.

PREV

Recommended Stories

ವಂದೇ ಮಾತರಂ ಭಾರತ ಮಾತೆಯ ಪ್ರೇರಣಾ ಶಕ್ತಿ: ಸಂಸದ ಗದ್ದಿಗೌಡರ
10, 11, ರಂದು ರಾಜ್ಯ ಟ್ರ್ಯಾಕ್‌ ಸೈಕ್ಲಿಂಗ್‌ ತಂಡಗಳ ಆಯ್ಕೆ