ರಾಜ್ಯ ಸಮಿತಿ ಅಸಹಕಾರ: ಶಿಕ್ಷಕರ ಚುನಾವಣೆ ಸ್ಥಗಿತ ಆರೋಪ

KannadaprabhaNewsNetwork |  
Published : Apr 12, 2026, 02:45 AM IST
೦೧ ಎಂ ಎಲ್ ಪಿ ೦೨ | Kannada Prabha

ಸಾರಾಂಶ

ಉಡುಪಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣಾ ಹಕ್ಕನ್ನು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಕೇಂದ್ರ ಸಂಘವು ಕಸಿದುಕೊಂಡಿದೆ ಎಂದು ಜಿಲ್ಲೆಯ ಶಿಕ್ಷಕರು ಆರೋಪಿಸಿದ್ದಾರೆ.

ಉಡುಪಿ: ಉಡುಪಿ ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣಾ ಹಕ್ಕನ್ನು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಕೇಂದ್ರ ಸಂಘವು ಕಸಿದುಕೊಂಡಿದೆ ಎಂದು ಜಿಲ್ಲೆಯ ಶಿಕ್ಷಕರು ಆರೋಪಿಸಿದ್ದಾರೆ.

ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 2026-2031 ರ ಸಾಲಿನ ಚುನಾವಣೆಗೆ ಅಧಿಸೂಚನೆ ಹೊರಡಿಸಿದ್ದು ಉಡುಪಿ ಜಿಲ್ಲೆಯಲ್ಲಿ ಶನಿವಾರ (ಏ. 11ರಿಂದ) ಚುನಾವಣಾ ಪ್ರಕ್ರಿಯೆ ಪ್ರಾರಂಭವಾಗಬೇಕಾಗಿತ್ತು, ಆದರೆ ಸಂಘ ಕೇಂದ್ರ ಸಮಿತಿಯು ಉಡುಪಿ ಜಿಲ್ಲೆಯ ಮತದಾರರ ಪಟ್ಟಿಗೆ ಅನುಮೋದನೆ ನೀಡಿಲ್ಲ. ಆದ್ದರಿಂದ ಜಿಲ್ಲೆಯಲ್ಲಿ ಸಂಘದ ಚುನಾವಣಾ ಪ್ರಕ್ರಿಯೆಗಳು ಆರಂಭವಾಗಿಲ್ಲ. ಫೆಬ್ರವರಿ ತಿಂಗಳಿನಲ್ಲಿ ಬೆಂಗಳೂರಿನಲ್ಲಿ ನಡೆದ ರಾಜ್ಯ ಮಟ್ಟದ ಧನ್ಯತಾ ಸಮಾವೇಶಕ್ಕೆ ಉಡುಪಿ ಜಿಲ್ಲೆಯ ಶಿಕ್ಷಕರಿಂದ ಹಣ ವಸೂಲಿ ಮಾಡಿ ರಾಜ್ಯ ಸಂಘಕ್ಕೆ ನೀಡಿಲ್ಲ ಎನ್ನುವ ಕಾರಣಕ್ಕೆ ಉಡುಪಿ ಜಿಲ್ಲೆಯ ಮತದಾರರ ಪಟ್ಟಿಗೆ ಅನುಮೋದನೆ ನೀಡಿರುವುದಿಲ್ಲ‌. ಅಲ್ಲದೆ ಪ್ರಸ್ತುತ ಜಿಲ್ಲಾಧ್ಯಕ್ಷರಾಗಿರುವ ಕೆ. ದಿನಕರ ಶೆಟ್ಟಿ ಅಂಪಾರು ಅವರು ಜಿಲ್ಲೆಯ ಸಮಸ್ತ ನೌಕರರ, ಶಿಕ್ಷಕರ ಸಮಸ್ಯೆಗಳಿಗೆ ರಾಜ್ಯ ಮಟ್ಟದಲ್ಲಿ ಸ್ಪಂದಿಸುತ್ತಾ ಸಕ್ರಿಯರಾಗಿದ್ದಾರೆ, ಅವರು ಕೇಂದ್ರ ಸಮಿತಿಯ ಚುನಾವಣೆಯಲ್ಲಿ ಭಾಗವಹಿಸುವುದನ್ನು ತಡೆಯುವುದಕ್ಕಾಗಿ ಉಡುಪಿ ಜಿಲ್ಲೆಯ ಮತದಾರ ಪಟ್ಟಿ ಮತ್ತು ಚುನಾವಣಾ ಅಧಿಕಾರಿಗಳ ನೇಮಕ ಪ್ರಕ್ರಿಯೆಗೆ ರಾಜ್ಯ ಸಂಘ ಅನುಮೋದನೆ ನೀಡಿಲ್ಲ ಎಂದು ಶಿಕ್ಷಕರು ಆರೋಪಿಸಿದ್ದಾರೆ.ಕೇಂದ್ರ ಸಮಿತಿಯ ಈ ಧೋರಣೆಯಿಂದ ಉಡುಪಿ ಜಿಲ್ಲೆಯ ಶಿಕ್ಷಕರಿಗೆ ಅನ್ಯಾಯ ಆಗುತ್ತಿದೆ. ಇದಕ್ಕೆ ಕೆಲವು ವ್ಯಕ್ತಿಗಳು ಉಡುಪಿ ಜಿಲ್ಲೆಯ ಒಗ್ಗಟ್ಟನ್ನು ಒಡೆದು ವೈಯಕ್ತಿಕ ಹಿತಾಸಕ್ತಿಯಿಂದಾಗಿ ಕೈಜೋಡಿಸಿರುವುದು ವಿಷಾದನೀಯ. ಜಿಲ್ಲೆಯ ಸಮಸ್ತ ಶಿಕ್ಷಕರಿಗೆ, ಸಂಘಟನೆಯ ಆಶಯಗಳಿಗೆ ಧಕ್ಕೆ, ಅನ್ಯಾಯವಾಗುತ್ತಿರುವುದನ್ನು ಉಡುಪಿ ಜಲ್ಲೆಯ ಸಮಸ್ತ ಶಿಕ್ಷಕರು ಪತ್ರಿಕಾ ಪ್ರಕಟಣೆಯಲ್ಲಿ ಖಂಡಿಸಿದ್ದಾರೆ.

ಹಣ ವಸೂಲಿಗೆ ನನ್ನ ನೈತಿಕತೆ ಒಪ್ಪಿಲ್ಲ: ದಿನಕರ ಶೆಟ್ಟಿ: ನಾನು ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷನಾಗಿ ಇದುವರೆಗೆ ಅವರಿಂದ ಯಾವುದೇ ವಂತಿಗೆ ಸಂಗ್ರಹಿಸಿಲ್ಲ, ಆದ್ದರಿಂದ ರಾಜ್ಯ ಸಂಘಕ್ಕೆ ನಮ್ಮ ಶಿಕ್ಷಕರಿಂದ ವಂತಿಗೆ ವಸೂಲಿ ಮಾಡಿಕೊಡುವುದು ನನ್ನ ನೈತಿಕತೆಗೆ ಒಪ್ಪಿಗೆಯಾಗಲಿಲ್ಲ, ಇದು ಕೇವಲ ನನ್ನ ನಿರ್ಧಾರ ಮಾತ್ರವಲ್ಲ, ನಮ್ಮ ಇತರ ಪದಾಧಿಕಾರಿಗಳ ನಿರ್ಣಯವೂ ಹೌದು. ಅದೇ ಕಾರಣಕ್ಕೆ ಜಿಲ್ಲೆಯ ಶಿಕ್ಷಕ ಮತದಾರರ ಪಟ್ಟಿಯನ್ನು ಅನುಮೋದಿಸದೇ ಇರುವುದು ಅನ್ಯಾಯ, ಉಡುಪಿ ಜಿಲ್ಲೆ ಮಾತ್ರವಲ್ಲ, ಬಳ್ಳಾರಿ, ಕಂಪ್ಲಿ ಇತ್ಯಾದಿ ತಾಲೂಕುಗಳಲ್ಲಿಯೂ ಇಂತಹದ್ದೇ ಅನ್ಯಾಯ ಆಗಿದೆ.

-ಅಂಪಾರು ದಿನಕರ ಶೆಟ್ಟಿ, ಜಿಲ್ಲಾ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯುಗಾದಿ ಹೊಸ ಚಿಂತನೆ, ಹೊಸ ಸಂಕಲ್ಪಗಳ ಆರಂಭ: ಡಾ. ಚಂದ್ರಕಾಂತ ಭಟ್
ಸಂಪಾಜೆ ಗ್ರಾಮ ಪಂಚಾಯಿತಿಗೆ 3ನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ