ಆಗಸ್ಟ್ 28ರಂದು ಮೈಸೂರಿನಲ್ಲಿ ಪತ್ರಿಕಾ ವಿತರಕರ ರಾಜ್ಯ ಸಮ್ಮೇಳನ

KannadaprabhaNewsNetwork |  
Published : Jun 30, 2025, 12:34 AM IST
29ಎಚ್‌ವಿಆರ್2- | Kannada Prabha

ಸಾರಾಂಶ

ಸಮ್ಮೇಳನಕ್ಕೆ ಬರುವ 5 ಸಾವಿರಕ್ಕೂ ಹೆಚ್ಚು ಜನರಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಇರುತ್ತದೆ. ಪತ್ರಿಕಾ ವಿತರಕರ ಸಂಘ ವರ್ಷದಿಂದ ವರ್ಷಕ್ಕೆ ಹೆಚ್ಚು ಬಲಾಢ್ಯವಾಗುತ್ತಿದೆ.

ಹಾವೇರಿ: ಐದನೇ ವಿಶ್ವ ಪತ್ರಿಕಾ ವಿತರಕರ ದಿನಾಚರಣೆ ಹಾಗೂ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಮಟ್ಟದ ಸಮ್ಮೇಳನ ಆ. 28ರಂದು ಮೈಸೂರಿನಲ್ಲಿ ನಡೆಯಲಿದ್ದು, ರಾಜ್ಯದ ಎಲ್ಲ ಜಿಲ್ಲೆಗಳಿಂದಲೂ ಹೆಚ್ಚಿನ ಸಂಖ್ಯೆಯಲ್ಲಿ ಪತ್ರಿಕಾ ವಿತರಕರು ಪಾಲ್ಗೊಂಡು ಯಶಸ್ವಿಗೊಳಿಸಬೇಕು ಎಂದು ಸಂಘದ ರಾಜ್ಯಾಧ್ಯಕ್ಷ ಕೆ. ಶಂಭುಲಿಂಗಪ್ಪ ತಿಳಿಸಿದರು.ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಅವರು ಮಾತನಾಡಿದರು.

ಕಳೆದ ಬಾರಿಯ ಸಮ್ಮೇಳನದಲ್ಲಿ ನಡೆದ ಲೋಪದೋಷಗಳನ್ನು ಸರಿಪಡಿಸಿಕೊಂಡು ಈ ಬಾರಿ ಲೋಪದೋಷ ಮರುಕಳಿಸದಂತೆ ಜಾಗ್ರತರಾಗಿ ಮೈಸೂರಿನಲ್ಲಿ ಅಚ್ಚುಕಟ್ಟಾಗಿ ಸಮ್ಮೇಳನವನ್ನು ನಡೆಸಲು ತಯಾರಿ ನಡೆಸಿದ್ದೇವೆ. ಸಮ್ಮೇಳನಕ್ಕೆ ಬರುವ 5 ಸಾವಿರಕ್ಕೂ ಹೆಚ್ಚು ಜನರಿಗೆ ಉಳಿದುಕೊಳ್ಳಲು ವಸತಿ ವ್ಯವಸ್ಥೆ ಇರುತ್ತದೆ. ಪತ್ರಿಕಾ ವಿತರಕರ ಸಂಘ ವರ್ಷದಿಂದ ವರ್ಷಕ್ಕೆ ಹೆಚ್ಚು ಬಲಾಢ್ಯವಾಗುತ್ತಿದೆ ಎಂದರು.ಸರ್ಕಾರದ ಒಂದು ಭಾಗವಾಗಿರುವ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರೇ ಅಲ್ಲಿನ ಜಿಲ್ಲಾಧಿಕಾರಿಗಳಿಗೆ ಯಾವುದೇ ಲೋಪವಾಗದಂತೆ ಅಗತ್ಯ ಸಿದ್ಧತೆ ಕೈಗೊಳ್ಳಲು ಸೂಚನೆ ನೀಡಿದ್ದಾರೆ. ಸಂಘದ ಎಲ್ಲ ಪತ್ರಿಕಾ ವಿತರಕರು ಬಹಳ ಶಿಸ್ತಿನಿಂದ ಇರಬೇಕು. ಜು. 20ರೊಳಗೆ ಕಡ್ಡಾಯವಾಗಿ ಆಯಾ ಜಿಲ್ಲೆಯಿಂದ ಎಷ್ಟು ಜನ ಬರುತ್ತೀರಿ ಎಂಬುದನ್ನು ನೋಂದಣಿ ಮಾಡಿಸಿ, ಪಟ್ಟಿಯ ಯಾದಿಯನ್ನು ರಾಜ್ಯ ಕಮಿಟಿಗೆ ಕಳುಹಿಸಬೇಕು. ಈ ಪಟ್ಟಿಯನ್ನಾಧರಿಸಿ ಎಲ್ಲ ವಿತರಕರಿಗೆ, ಕುಟುಂಬದವರಿಗೆ ವಸತಿ ಸೇರಿದಂತೆ ಅಗತ್ಯ ಸೌಲಭ್ಯ ಒದಗಿಸಲು ಅನುಕೂಲವಾಗುತ್ತದೆ ಎಂದರು.ರಾಜ್ಯ ಕಾರ್ಯದರ್ಶಿ ಸಂಗಂ ಸುರೇಶ ಮಾತನಾಡಿ, ಸಂಘಟನೆಯಿಂದ ಮಾತ್ರ ಸರ್ಕಾರಿ ಸೌಲಭ್ಯ ಪಡೆದುಕೊಳ್ಳಲು ಸಾಧ್ಯ. ಪತ್ರಿಕಾ ವಿತರಕರ ಸಂಘದ ಪದಾಧಿಕಾರಿಗಳು ಒಗ್ಗಟ್ಟಾಗಿ ಸಂಘಟನೆ ಮಾಡಿಕೊಳ್ಳಬೇಕು. ಸಿಎಂ ತವರೂರು ಮೈಸೂರಿನಲ್ಲಿ ಸಮ್ಮೇಳನ ನಡೆಯಲಿದ್ದು, ತಾಲೂಕು, ಜಿಲ್ಲೆ, ಹೋಬಳಿ ಮಟ್ಟದ ವಿತರಕರೆಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.ಮೈಸೂರು ಜಿಲ್ಲಾಧ್ಯಕ್ಷ ಹೋಮ್‌ದೇವ ಜೆ.ಎಸ್. ಮಾತನಾಡಿದರು. ದಾವಣಗೆರೆ ಜಿಲ್ಲಾಧ್ಯಕ್ಷ ಕೃಷ್ಣಪ್ಪ, ಶಿಗ್ಗಾಂವಿ ತಾಲೂಕಾಧ್ಯಕ್ಷ ವಿರೂಪಾಕ್ಷಪ್ಪ ನೀರಲಗಿ, ಹಾವೇರಿ ತಾಲೂಕಾಧ್ಯಕ್ಷ ಕರಬಸಪ್ಪ ಹಳದೂರ ಸೇರಿದಂತೆ ರಾಜ್ಯದ ಶಿವಮೊಗ್ಗ, ಮೈಸೂರು, ಬೆಳಗಾವಿ, ಯಾದಗಿರಿ, ಹುಬ್ಬಳ್ಳಿ ಧಾರವಾಡ, ಚಿತ್ರದುರ್ಗ, ಮಂಡ್ಯ ಸೇರಿದಂತೆ ವಿವಿಧೆಡೆಯಿಂದ ಪತ್ರಿಕಾ ವಿತರಕರು ಭಾಗವಹಿಸಿದ್ದರು.

ಹಕ್ಕೊತ್ತಾಯದ ಬೇಡಿಕೆಗಳುರಾಜ್ಯ ಒಕ್ಕೂಟಕ್ಕೆ ಕಚೇರಿ ಸೌಲಭ್ಯ ಸಿಗಬೇಕು. ಪತ್ರಿಕಾ ವಿತರಕರಿಗಾಗಿ ಪ್ರತ್ಯೇಕ ಸಮುದಾಯ ಭವನ ನಿರ್ಮಾಣ ಆಗಬೇಕು. ಪತ್ರಿಕಾ ವಿತರಕರಿಗೆ ಅಕಾಡೆಮಿಯಲ್ಲಿ ಅವಕಾಶ ಕೊಡಬೇಕು. 65- 70 ವರ್ಷ ಮೇಲ್ಪಟ್ಟ ವಿತರಕರಿಗೆ ತಿಂಗಳಿಗೆ ₹2 ಸಾವಿರ ಪಿಂಚಣಿ ಸೌಲಭ್ಯ, 80 ವರ್ಷ ಮೇಲ್ಪಟ್ಟ ವಿತರಕರಿಗೆ ₹5 ಸಾವಿರ ಮಾಸಿಕ ಪಿಂಚಣಿ, ಎಲ್ಲ ಪತ್ರಿಕೆಗಳಿಗೆ ಒಂದೇ ದರ ನಿಗದಿಯಾಗಬೇಕು. ಒಂದು ಪತ್ರಿಕೆ ಮಾರಾಟ ಮಾಡಿದರೆ ಕನಿಷ್ಠ ₹3 ಕಮಿಷನ್ ಸಿಗಬೇಕು. ವಿತರಕರಿಗೆ ₹5 ಲಕ್ಷ, ಆರೋಗ್ಯ ವಿಮೆ ಮೀಸಲಿಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಹಕ್ಕೊತ್ತಾಯ ಮಾಡಲಾಯಿತು.

PREV

Recommended Stories

ದಲಿತರಿಗೆ ದಿಲ್ಲಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷಾ ಕೇಂದ್ರ : ಜಾರಕಿಹೊಳಿ
ತೀವ್ರ ಚಳಿ, ಜ್ವರ : ದೇವೇಗೌಡ ಆಸ್ಪತ್ರೆಗೆ, ಐಸಿಯುನಲ್ಲಿ ಚಿಕಿತ್ಸೆ