ಕನ್ನಡಪ್ರಭ ವಾರ್ತೆ ಮಂಡ್ಯ
ಗ್ಯಾರಂಟಿ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಜಾತ್ಯತೀತ ಜನತಾ ದಳದಿಂದ ಗುರುವಾರ ಪ್ರತಿಭಟನೆ ನಡೆಸಿದರು.ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಎದುರು ಸೇರಿದ ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು, ನಮ್ಮದು ನುಡಿದಂತೆ ನಡೆದ ಸರ್ಕಾರ ಎಂದು ಬಿಂಬಿಸುತ್ತಾ ಗ್ಯಾರಂಟಿ ಯೋಜನೆಗಳನ್ನು ಸರಿಯಾಗಿ ಜಾರಿಗೊಳಿಸದೆ ಜನರನ್ನು ವಂಚಿಸುತ್ತಿದೆ. ವಿದ್ಯುತ್, ಕುಡಿಯುವ ನೀರಿನ ದರ, ನೋಂದಣಿ ಶುಲ್ಕ, ಮದ್ಯದ ಬೆಲೆ ಹೀಗೆ ಎಲ್ಲವನ್ನೂ ಏರಿಸಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ರಾಜ್ಯವನ್ನು ದಿವಾಳಿಯತ್ತ ಕೊಂಡೊಯ್ಯುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಅಧಿಕಾರದಲ್ಲಿ ಮುಂದುವರಿಯುವ ನೈತಿಕತೆಯೇ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಮಾಜಿ ಸಚಿವ ಸಿ.ಎಸ್. ಪುಟ್ಟರಾಜು ಅವರು, ರಾಜ್ಯದ ಜನರಿಗೆ ಗ್ಯಾರಂಟಿ ಯೋಜನೆಗಳ ಆಮಿಷವೊಡ್ಡಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿತು. ಯೋಜನೆಯನ್ನು ಜನರಿಗೆ ನೀಡುವಾಗಲೇ ಆರ್ಥಿಕ ಹೊರೆಯಾಗುವ ದೂರದೃಷ್ಟಿ ಇರಬೇಕಿತ್ತು. ಯಾವುದೇ ಪೂರ್ವಸಿದ್ಧತೆಗಳಿಲ್ಲದೆ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿತು. ಅಧಿಕಾರಕ್ಕೆ ಬಂದ ಎರಡೇ ವರ್ಷದಲ್ಲಿ ಖಜಾನೆ ಬರದಾಗಿದೆ. ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಕ್ಕೆ ತರಲಾಗದೆ ದಲಿತರ ಹಣವನ್ನೆಲ್ಲಾ ಬಳಸಿಕೊಳ್ಳುತ್ತಿದೆ. ಕಂಡ ಕಂಡದ್ದಕ್ಕೆಲ್ಲಾ ಬೆಲೆ ಹೆಚ್ಚಳ ಮಾಡಿ ಜನರ ಮೇಲೆ ಆರ್ಥಿಕ ಹೊರೆ ಹಾಕುತ್ತಿದೆ ಎಂದು ಆರೋಪಿಸಿದರು.ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸ್ವಂತ ಹಣವೆಂಬಂತೆ ಕಾಂಗ್ರೆಸ್ ಭಾವಿಸಿದೆ. ಮಹಿಳೆಯರಿಗೆ ಯೋಜನೆಯ ಹಣವನ್ನು ಪ್ರತಿ ತಿಂಗಳು ನೀಡದೆ, ಯಾವಾಗ ಬೇಕೋ ಆಗ ಮಾತ್ರ ಜಮೆ ಮಾಡುತ್ತಿದೆ. ಬಹುತೇಕ ಚುನಾವಣಾ ಸಂದರ್ಭದಲ್ಲೇ ಗೃಹಲಕ್ಷ್ಮೀ ಹಣ ಬಿಡುಗಡೆಯಾಗುತ್ತಿದೆ. ಇನ್ನೂ ಎರಡು-ಮೂರು ತಿಂಗಳ ಗೃಹಲಕ್ಷ್ಮೀ ಹಣವನ್ನು ಪಾವತಿಸದೆ ಮಹಿಳೆಯರಿಗೆ ಮೋಸ ಮಾಡುತ್ತಿದೆ ಎಂದು ದೂಷಿಸಿದರು.
ಗ್ಯಾರಂಟಿ ಯೋಜನೆಗಳ ಹಣ ಬಿಡುಗಡೆಗೆ ಪ್ರತಿ ತಿಂಗಳು ದಿನಾಂಕ ನಿಗದಿ ಮಾಡಬೇಕು, ಚುನಾವಣೆ ಬಂದಾಗ ೨ ಸಾವಿರ ರು. ಗೃಹಲಕ್ಷ್ಮೀ ಹಣ ಬಿಡುಗಡೆ ಮಾಡುವುದು, ಉಳಿದಂತೆ ಅದನ್ನು ಮುಂದೂಡುವುದು ಸರಿಯಲ್ಲ. ಚುನಾವಣಾ ಸಮಯದಲ್ಲಿ ಆರು ತಿಂಗಳ ಹಣವನ್ನು ಒಂದೇ ಬಾರಿಗೆ ಜಮೆ ಮಾಡುತ್ತಿದ್ದು, ಆ ವೇಳೆ ಜನರಿಗೆ ಲಂಚ ಕೊಡಲು ಈ ಯೋಜನೆಯನ್ನು ಜಾರಿಗೆ ಕಂಡುಬರುತ್ತಿದೆ. ಉಳಿದ ಸಮಯದಲ್ಲಿ ತಾಂತ್ರಿಕ ಸಮಸ್ಯೆಯ ನೆಪ ಹೇಳುವುದನ್ನು ಬಿಟ್ಟು, ಪ್ರತಿ ತಿಂಗಳು ೧ ರಿಂದ ೫ನೇ ತಾರೀಖಿನೊಳಗೆ ಗೃಹಲಕ್ಷ್ಮೀ, ಯುವನಿಧಿಯ ಹಣ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.ಹಣ ಬಿಡುಗಡೆ ಮಾಡಿಲ್ಲವೆಂದು ರಾಜ್ಯದ ಜನರು ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ. ಉಚಿತ ಬಸ್ ಬಿಟ್ಟಿರುವುದರಿಂದ ಮಹಿಳೆಯರು ನೂಕುನುಗ್ಗಲು ನಡೆಸಿದ್ದಾರೆ. ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ಹೋಗಲು ಬಸ್ಸುಗಳಿಲ್ಲದೆ ಪರದಾಡುತ್ತಿದ್ದಾರೆ. ಇವೆಲ್ಲಾ ಅವ್ಯವಸ್ಥೆ ತಾಂಡವವಾಡುತ್ತಿದ್ದರೂ ಸರ್ಕಾರ ಅದನ್ನು ಸರಿಪಡಿಸದೆ ಮೌನ ವಹಿಸಿದೆ. ಯೋಜನೆಗಳನ್ನು ನಿಲ್ಲಿಸಲಾಗದೆ, ಸಮರ್ಪಕವಾಗಿ ಅನುಷ್ಠಾನಗೊಳಿಸಲೂ ಆಗದೆ, ಆರ್ಥಿಕ ಹೊರೆಯನ್ನು ಸರಿದೂಗಿಸಲಾಗದೆ, ಅಭಿವೃದ್ಧಿ ಯೋಜನೆಗಳಿಗೆ ಹಣವನ್ನೂ ಬಿಡುಗಡೆ ಮಾಡಲಾಗದೆ ಸರ್ಕಾರ ಇಕ್ಕಟ್ಟಿನಲ್ಲಿ ಸಿಲುಕಿದ್ದರೂ ಪಂಚ ಗ್ಯಾರಂಟಿ ಸರ್ಕಾರ, ನುಡಿದಂತೆ ನಡೆದ ಸರ್ಕಾರ ಎಂದು ಬಡಾಯಿಕೊಚ್ಚಿಕೊಳ್ಳುತ್ತಿದೆ ಎಂದು ದೂಷಿಸಿದರು.
ರಾಜ್ಯಾದ್ಯಂತ ಬೃಹತ್ ಪ್ರತಿಭಟನೆ:ಉಚಿತ ಭಾಗ್ಯಗಳನ್ನು ಕೊಡಲೆಂದೇ ಮಂತ್ರಿಗಳನ್ನು ನೇಮಕ ಮಾಡಲಾಗಿದೆ. ಪ್ರತಿ ತಿಂಗಳು ೫ರೊಳಗೆ ನೀಡಬೇಕು. ಇಲ್ಲವಾದಲ್ಲಿ ಜಿಲ್ಲಾ ಉಸ್ತುವಾರಿ ಮಂತ್ರಿಗಳು, ಜನಪ್ರತಿನಿಧಿಗಳನ್ನು ಅಡ್ಡಹಾಕಿ, ಅವರ ಮನೆ ಮುಂದೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ರಾಜ್ಯ ಯುವ ಜೆಡಿಎಸ್ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಇಡೀ ರಾಜ್ಯಾದ್ಯಂತ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.
ಚುನಾವಣೆ ಸಮಯದಲ್ಲಿ ಸರ್ಕಾರ ಜನರಿಗೆ ಹೇಳಿದಂತೆ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಲಿ. ಮಹಿಳೆಯರು ೨ ಸಾವಿರ ಖಾತೆಗೆ ಬಂದಿಲ್ಲ ಎಂದು ಗೋಳಿಡುತ್ತಿದಾರೆ. ಬಸ್ ಇಲ್ಲದೆ ಗುದ್ದಾಡುತ್ತಿದ್ದಾರೆ. ಮುಖ್ಯಮಂತ್ರಿಗಳೇ ಮೊದಲು ಹಣ ಬಿಡುಗಡೆ ಮಾಡಿ, ಅಧಿಕಾರಿಗಳು ಬ್ಯಾಂಕಿಗೆ ಹಾಕುತ್ತಾರೆ. ಈ ಗೃಹಲಕ್ಷ್ಮೀ ಹಣವನ್ನು ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆ ಸಮಯಕ್ಕೇನಾದರೂ ಬಿಡುಗಡೆ ಮಾಡುತ್ತೀರಾ? ಇದು ಕೊನೆಯ ಎಚ್ಚರಿಕೆ, ಮುಂದಿನ ದಿನಗಳಲ್ಲಿ ಇದರ ಪರಿಣಾಮ ಅನುಭವಿಸಬೆಕಾಗುತ್ತದೆ ಎಂದು ಎಚ್ಚರಿಸಿದರು.ಕುರ್ಚಿ ಬಿಟ್ಟು ಕೆಳಗಿಳಿಯಿರಿ:
ಹಿಂದಿನ ಸರ್ಕಾರ ೯ ಜಿಲ್ಲೆಗಳಲ್ಲಿ ವಿಶ್ವವಿದ್ಯಾಲಯ ಸ್ಥಾಪಿಸಿತು. ಆದರೆ, ಹಣ ಇಲ್ಲ ಎಂದು ನೆಪಹೇಳಿ ನೀವು ಮುಚ್ಚುತ್ತಿದ್ದೀರಿ, ನಿಮಗೆ ನಾಚಿಕೆಯಾಗಬೇಕು. ಯಾವ ಕಾರಣಕ್ಕೆ ಮುಚ್ಚುತ್ತಿದ್ದೀರಿ ಎಂದು ಜನಕ್ಕೆ ತಿಳಿಸಿ. ೨೦ ತಿಂಗಳ ಆಡಳಿತದ ಬಗ್ಗೆ ಶ್ವೇತ ಪತ್ರ ಹೊರಡಿಸಿ, ಇಲ್ಲವಾದರೆ ಕುರ್ಚಿ ಬಿಟ್ಟು ಹೋಗಿ, ಬೇರೆಯವರು ರಾಜ್ಯವನ್ನು ಆಳುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ. ಅನ್ನದಾನಿ, ನಗರಸಭೆ ಅಧ್ಯಕ್ಷ ಎಂ.ವಿ. ಪ್ರಕಾಶ್, (ನಾಗೇಶ್), ಮನ್‌ಮುಲ್ ನಿರ್ದೇಶಕ ಬಿ.ಆರ್. ರಾಮಚಂದ್ರ, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಡಿ. ರಮೇಶ್, ಮುಖಂಡರಾದ ಮಂಜುಳಾ ಉದಯ ಶಂಕರ್, ಪದ್ಮಾವತಿ, ನೀನಾ ಪಟೇಲ್, ಬೇಲೂರು ಶಶಿಧರ್, ವಕೀಲ ಬಸವರಾಜು, ಕಂಸಾಗರ ರವಿ, ಸಾತನೂರು ಜಯರಾಮು ಇತರರಿದ್ದರು.