ರಾಜ್ಯ ಕಾಂಗ್ರೆಸ್‌ ಸರ್ಕಾರ ಶೀಘ್ರ ಪತನ: ಆರ್‌. ಅಶೋಕ ಭವಿಷ್ಯ

KannadaprabhaNewsNetwork |  
Published : Jun 23, 2025, 11:48 PM ISTUpdated : Jun 24, 2025, 10:44 AM IST
ಹಾವೇರಿಯ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಅವರ ಪದಗ್ರಹಣ ಸಮಾರಂಭದಲ್ಲಿ ಬಿಜೆಪಿ ಬಾವುಟ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸಲಾಯಿತು. | Kannada Prabha

ಸಾರಾಂಶ

ದಲಿತರಿಗೆ, ಎಸ್ಟಿಗಳಿಗೆ ಮೀಸಲಾತಿ ಕೊಡಬೇಕೆಂಬುದು ಸಂವಿಧಾನದಲ್ಲಿ ಇದೆ. ಈ ದರಿದ್ರ ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ನಿಧನರಾದಾಗ ಜಾಗ ಕೊಟ್ಟಿಲ್ಲ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ ವಾಗ್ದಾಳಿ ನಡೆಸಿದರು.

ಹಾವೇರಿ: ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಟೇಬಲ್ ಕೆಳಗಿನಿಂದ ಮನಿ (ಹಣ) ಕೊಟ್ಟವರಿಗೆ ಮನೆ ನೀಡುತ್ತದೆ. ಇದು ನುಡಿದಂತೆ ನಡೆಯುವ ಸರ್ಕಾರ ಅಲ್ಲ. ಸಿಕ್ಕ ಸಿಕ್ಕಲ್ಲಿ ಕಮಿಷನ್ ಹೊಡೆಯುವ 60 ಪರ್ಸೆಂಟ್ ಸರ್ಕಾರ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ ಆರೋಪಿಸಿದರು. 

ನಗರದ ಶಿವಶಕ್ತಿ ಪ್ಯಾಲೇಸ್‌ನಲ್ಲಿ ಸೋಮವಾರ ಆಯೋಜಿಸಿದ್ದ ಬಿಜೆಪಿ ನೂತನ ಜಿಲ್ಲಾಧ್ಯಕ್ಷ ವಿರೂಪಾಕ್ಷಪ್ಪ ಬಳ್ಳಾರಿ ಅವರ ಪದಗ್ರಹಣ ಸಮಾರಂಭದಲ್ಲಿ ಮಾತನಾಡಿದರು.ರಾಜ್ಯದಲ್ಲಿ ಬಡವರು ದುಡ್ಡು ಕೊಟ್ಟು ಮನೆ ಪಡೆಯುವ ಸ್ಥಿತಿ ಬಂದಿದೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಸ್ವಪಕ್ಷದ ಶಾಸಕರಾದ ಪಾಟೀಲರು, ರಾಜು ಕಾಗೆ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ, ಸಾಗರ ಶಾಸಕ ಗೋಪಾಲಕೃಷ್ಣ ಅವರೇ ಹೇಳಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಟಿಪ್ಪು ಸಂಸ್ಕೃತಿಯನ್ನು ರಾಜ್ಯದ ಮೇಲೆ ಹಾಕುತ್ತಿದ್ದಾರೆ ಎಂದರು.

ದಲಿತರಿಗೆ, ಎಸ್ಟಿಗಳಿಗೆ ಮೀಸಲಾತಿ ಕೊಡಬೇಕೆಂಬುದು ಸಂವಿಧಾನದಲ್ಲಿ ಇದೆ. ಈ ದರಿದ್ರ ಕಾಂಗ್ರೆಸ್ ಸರ್ಕಾರ ಅಂಬೇಡ್ಕರ್ ನಿಧನರಾದಾಗ ಜಾಗ ಕೊಟ್ಟಿಲ್ಲ. ದಿಲ್ಲಿಯಿಂದ ಮುಂಬೈಗೆ ಮೃತದೇಹ ತರಲು ಹಣ ಕೊಡಲಿಲ್ಲ. ರಾಜ್ಯದಲ್ಲಿ ಆದಷ್ಟು ಬೇಗ ಕಾಂಗ್ರೆಸ್ ಸರ್ಕಾರ ಪತನಗೊಳ್ಳುತ್ತದೆ. ಅಕ್ಟೋಬರ್ ನವೆಂಬರ್‌ನಲ್ಲಿ ಯಾರೇ ಸಿಎಂ ಆದರೂ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಭವಿಷ್ಯ ನುಡಿದರು.

ಸಂಸದ ಗೋವಿಂದ ಕಾರಜೋಳ ಮಾತನಾಡಿ, ರಾಜ್ಯ ಸರ್ಕಾರ ಎರಡು ವರ್ಷಗಳ ಅವಧಿಯಲ್ಲಿ ಭ್ರಷ್ಟಾಚಾರ ಹಗರಣದಲ್ಲಿ ಮುಳುಗಿ ಹೋಗಿದೆ. ಸ್ವಾತಂತ್ರ‍್ಯ ಬಂದು 75 ವರ್ಷ ಕಳೆದರೂ ಇಂತಹ ಅನಿಷ್ಟ ಸರ್ಕಾರ ನೋಡಿರಲಿಲ್ಲ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಮೀಸಲಿಟ್ಟ ಹಣವನ್ನು ಚುನಾವಣೆಗೆ ಬಳಸಿ ಲೂಟಿ ಮಾಡಿದ್ದಾರೆ. ಅತ್ಯಾಚಾರ, ಕೊಲೆ, ಸುಲಿಗೆ ಮಾಡಿದ್ದೇ ರಾಜ್ಯ ಕಾಂಗ್ರೆಸ್ ಸರ್ಕಾರದ ಸಾಧನೆ. ಆರ್‌ಸಿಬಿ ವಿಜಯೋತ್ಸವ ಕಾಲ್ತುಳಿತದಲ್ಲಿ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕಿತ್ತು. ಆದರೆ ಲಜ್ಜೆಗೆಟ್ಟ ಸಿಎಂ ನಿರ್ಲಜ್ಜತನ ಅಧಿಕಾರದಿಂದ ಮುಂದುವರಿಯುತ್ತಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ನಿಕಟಪೂರ್ವ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ ಪಕ್ಷದ ಬಾವುಟ ನೀಡಿ ಅಧಿಕಾರ ಹಸ್ತಾಂತರಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿದರು. ಯುವ ಮುಖಂಡ ಭರತ್ ಬೊಮ್ಮಾಯಿ, ಗವಿಸಿದ್ದಪ್ಪ ದ್ಯಾಮಣ್ಣವರ, ಬಸವರಾಜ ಕೇಲಗಾರ, ಶೋಭಾ ನಿಸ್ಸೀಮಗೌಡ್ರ, ಭಾರತಿ ಜಂಬಗಿ, ಸಿದ್ಧರಾಜ ಕಲಕೋಟಿ, ಭೋಜರಾಜ ಕರೂದಿ, ಸಂತೋಷಕುಮಾರ ಪಾಟೀಲ, ಡಿ.ಎಂ. ಸಾಲಿ, ಮುರಿಗೆಪ್ಪ ಶೆಟ್ಟರ, ಪರಮೇಶ್ವರಪ್ಪ ಮೇಗಳಮನಿ, ಮಂಜುನಾಥ ಓಲೇಕಾರ ಇತರರು ಇದ್ದರು. ನಂಜುಂಡೇಶ ಕಳ್ಳೇರ ಸ್ವಾಗತಿಸಿದರು. ಸಂತೋಷ ಆಲದಕಟ್ಟಿ ನಿರೂಪಿಸಿ, ವಂದಿಸಿದರು.

ರಾಜ್ಯದಲ್ಲಿರುವುದು ದುಡ್ಡು ಹೊಡೆಯುವ ಸರ್ಕಾರ: ಅಶೋಕ

ಹಾವೇರಿ: ರಾಜ್ಯದಲ್ಲಿರುವುದು ದುಡ್ಡು ಹೊಡೆಯುವ ಸರ್ಕಾರ. ಹೌಸಿಂಗ್ ಬೋರ್ಡ್ ಸ್ಲೋಗನ್ ಮೊದಲಿಗೆ ಬಡವರಿಗಾಗಿ ಮನೆ ಎಂದಿತ್ತು. ಈಗ ಕಾಸು ಕೊಟ್ಟವರಿಗೆ ಮನೆ ಎಂದಾಗಿದೆ. ಸಿಎಂ ಸಿದ್ದರಾಮಯ್ಯನವರು ರಾಜ್ಯದಲ್ಲಿ ಲೂಟಿ ಹೊಡೆಯಲು ಫ್ರೀ ಹ್ಯಾಂಡ್ ಬಿಟ್ಟಿದ್ದು, ಭ್ರಷ್ಟಾಚಾರ ಮಿತಿ ಮೀರಿದೆ ಎಂದು ವಿಧಾನಸಭೆಯ ವಿಪಕ್ಷ ನಾಯಕ ಆರ್. ಅಶೋಕ್ ಆರೋಪಿಸಿದರು.

ನಗರದಲ್ಲಿ ಸೋಮವಾರ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರತಿ ಮನೆಗೆ ಶೇ. 36ರಷ್ಟು ವಸೂಲಿ ಮಾಡಿದ್ದಾರೆ. ಎಂಜಿನಿಯರ್‌ರಿಂದ ಹಿಡಿದು ಸರ್ಕಾರಕ್ಕೆ ಶೇ. 36ರಷ್ಟು ಕಮಿಷನ್ ಮುಟ್ಟುತ್ತದೆ. ₹2100 ಕೋಟಿಗೂ ಹೆಚ್ಚು ಹಣ ಲೂಟಿ ಹೊಡೆದಿದ್ದಾರೆ. ಇದನ್ನು ಬಿ.ಆರ್. ಪಾಟೀಲ್ ಸ್ಪಷ್ಟವಾಗಿ ನಂದೇ ಧ್ವನಿ, ಏನು ಬೇಕಾದರೂ ಮಾಡಿಕೊಳ್ಳಿ ಎಂದು ಹೇಳಿದ್ದಾರೆ.ಮಾನ ಮರ್ಯಾದೆ ಇದ್ದರೆ ಬಿ.ಆರ್. ಪಾಟೀಲ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಧಮ್ ಇದ್ದರೆ ಸಸ್ಪೆಂಡ್ ಮಾಡಿ. ಇಲ್ಲದಿದ್ದರೆ ಧಮ್ ಇಲ್ಲ ಎಂದು ಹೇಳಿ ಸಿದ್ದರಾಮಯ್ಯ ಅವರನ್ನೇ ಸಸ್ಪೆಂಡ್ ಮಾಡಬೇಕು. ಇಷ್ಟು ದಿನ ನಿದ್ದೆ ಮಾಡುವ ರಾಮಯ್ಯ ಆಯ್ತು. ಈಗ ಮೂಕರಾಮಯ್ಯ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.

ಸಚಿವ ಜಮೀರ್ ಅಹಮದ್ ಖಾತೆಯಲ್ಲಿ ಕೋಟ್ಯಂತರ ರುಪಾಯಿ ಲೂಟಿಯಾಗುತ್ತಿದೆ ಎಂದು ಹೇಳಿದರೂ ಕ್ರಮ ಇಲ್ಲ. ಈಗಿರುವ ಸಿದ್ದರಾಮಯ್ಯ ಲೂಟಿ ಮಾಡುವವರಿಗೆ ಗಾಡ್ ಫಾದರ್ ಆಗಿದ್ದು, ಕಾಸು ಮಾಡುವವರಿಗೆ ರಕ್ಷಣೆ ನೀಡುತ್ತಿದ್ದಾರೆ. ಇನ್ನು ಆರು ತಿಂಗಳಲ್ಲಿ ಸಿಎಂ ಸ್ಥಾನ ಬೇರೆಯವರಿಗೆ ಬಿಟ್ಟು ಕೊಡಬೇಕು. ಅದಕ್ಕೆ ಲೂಟಿ ಮಾಡುವವರಿಗೆ ಅವಕಾಶ ನೀಡುತ್ತಿದ್ದಾರೆ ಎಂದರು.

ಬಿಹಾರ ಚುನಾವಣೆಗಾಗಿ ಹಣ ಸಂಗ್ರಹ ಮಾಡುತ್ತಿದಾರೆ. ಎಲ್ಲ ಮಂತ್ರಿಗಳಿಗೂ ಹಣ ಫಿಕ್ಸ್ ಆಗಿದೆ. ಒಬ್ಬೊಬ್ಬ ಮಂತ್ರಿ ₹25 ಕೋಟಿ ಕೊಡಬೇಕು. ₹25 ಕೋಟಿ ಕೊಟ್ಟರೆ ಮಂತ್ರಿ ಸ್ಥಾನ ಸುರಕ್ಷಿತ. ಇಲ್ಲದಿದ್ದರೆ ಸಂಪುಟ ಪುನಾರಚನೆ ಮಾಡುತ್ತೇವೆಂದು ಗೂಬೆ ಕೂರಿಸ್ತಾರೆ. ಅಲ್ಲಿ ದುಡ್ಡು ಕೊಟ್ಟವರಿಗೆ ಮಂತ್ರಿಸ್ಥಾನ. ಇಲ್ಲಿ ದುಡ್ಡು ಕೊಟ್ಟವರಿಗೆ ಮನೆ. ಬಡವರಿಗೆ ಅನ್ನ ಕೊಡುವಂತಹ ಕೆಲಸವನ್ನು ಹೌಸಿಂಗ್ ಬೋರ್ಡ್ ಮಾಡಬೇಕಿತ್ತು. ಆದರೆ ಬಡವರ ಮನೆಗೆ ಕನ್ನ ಹಾಕುವ ಕೆಲಸ ಮಾಡಿದ್ದಾರೆ. ನಾವು ಹೌಸಿಂಗ್ ಬೋರ್ಡ್ ಕಚೇರಿಗಳಿಗೆ ಮುತ್ತಿಗೆ ಹಾಕುತ್ತೇವೆ. ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದರು.

PREV
Read more Articles on

Recommended Stories

ದಸರಾ ಗಜಪಡೆಯಲ್ಲಿ ‘ಭೀಮ’ನೇ ಬಲಶಾಲಿ : ತೂಕ 5465 ಕೆ.ಜಿ.
ಕಮ್ಮಿ ಫಲಿತಾಂಶ ಬಂದರೆ ಶಿಕ್ಷಕರ ವೇತನ ಕಟ್ ಇಲ್ಲ