ಮೈಷುಗರ್‌ಗೆ ೨೫ ಕೋಟಿ ರು. ನೀಡುವಂತೆ ಸರ್ಕಾರಕ್ಕೆ ಕೋರಿಕೆ: ಶಾಸಕ ಪಿ.ರವಿಕುಮಾರ್

KannadaprabhaNewsNetwork |  
Published : Jun 23, 2025, 11:48 PM IST
ಮೈಷುಗರ್‌ಗೆ ೨೫ ಕೋಟಿ ರು. ನೀಡುವಂತೆ ಸರ್ಕಾರಕ್ಕೆ ಕೋರಿಕೆ: ಪಿ.ರವಿಕುಮಾರ್ | Kannada Prabha

ಸಾರಾಂಶ

ಮೈಷುಗರ್ ಕಾರ್ಖಾನೆಯನ್ನು ಲಾಭ-ನಷ್ಟದ ಲೆಕ್ಕ ಮಾಡಿಕೊಂಡು ನಡೆಸಲು ಸಾಧ್ಯವಿಲ್ಲ. ಕಾರ್ಖಾನೆ ಇತಿಹಾಸ, ಅದರ ಹಿಂದಿರುವ ಜನರ ಭಾವನೆ, ರೈತರ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಖಾನೆಯನ್ನು ಮುನ್ನಡೆಸಲಾಗುತ್ತಿದೆ. ಏಕಾಏಕಿ ಕಂಪನಿ ಲಾಭ ತರಲು ಸಾಧ್ಯವಿಲ್ಲ.

ಕನ್ನಡಪ್ರಭ ವಾರ್ತೆ ಮಂಡ್ಯ

ಪ್ರಸಕ್ತ ಸಾಲಿನಲ್ಲಿ ಕಬ್ಬು ಅರೆಯುವುದಕ್ಕೆ ದುಡಿಮೆ ಬಂಡವಾಳವಾಗಿ ೨೫ ಕೋಟಿ ರು. ಹಣ ನೀಡುವಂತೆ ಸರ್ಕಾರದ ಎದುರು ಪ್ರಸ್ತಾವನೆ ಸಲ್ಲಿಸಿರುವುದಾಗಿ ಶಾಸಕ ಪಿ.ರವಿಕುಮಾರ್ ಹೇಳಿದರು.

ಸೋಮವಾರ ನಗರದ ಮೈಷುಗರ್ ಕಾರ್ಖಾನೆ ಬಾಯ್ಲರ್‌ಗೆ ಪೂಜೆ ಸಲ್ಲಿಸಿ ಅಗ್ನಿಸ್ಪರ್ಶ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಈ ಸಾಲಿನಲ್ಲಿ ೪ ಲಕ್ಷದಿಂದ ೪.೫೦ ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಲಾಗಿದೆ. ರೈತರಿಗೆ ಸಕಾಲದಲ್ಲಿ ಕಬ್ಬಿನ ಹಣ ಪಾವತಿ ಮಾಡಲಾಗುವುದು. ಸರ್ಕಾರವೂ ಕಾರ್ಖಾನೆ ಮುನ್ನಡೆಯುವುದಕ್ಕೆ ಪೂರಕವಾಗಿ ೨೫ ಕೋಟಿ ರು. ಹಣ ಬಿಡುಗಡೆ ಮಾಡುವ ವಿಶ್ವಾಸ ವ್ಯಕ್ತಪಡಿಸಿದರು.

ಮೈಷುಗರ್ ಕಾರ್ಖಾನೆಯನ್ನು ಲಾಭ-ನಷ್ಟದ ಲೆಕ್ಕ ಮಾಡಿಕೊಂಡು ನಡೆಸಲು ಸಾಧ್ಯವಿಲ್ಲ. ಕಾರ್ಖಾನೆ ಇತಿಹಾಸ, ಅದರ ಹಿಂದಿರುವ ಜನರ ಭಾವನೆ, ರೈತರ ಏಳಿಗೆಯನ್ನು ಗಮನದಲ್ಲಿಟ್ಟುಕೊಂಡು ಕಾರ್ಖಾನೆಯನ್ನು ಮುನ್ನಡೆಸಲಾಗುತ್ತಿದೆ. ಏಕಾಏಕಿ ಕಂಪನಿ ಲಾಭ ತರಲು ಸಾಧ್ಯವಿಲ್ಲ. ಕಾರ್ಖಾನೆ ಲಾಭದಾಯಕವಾಗಿ ಮುನ್ನಡೆಯುವಂತೆ ಮಾಡಲು ವಾಣಿಜ್ಯ ಚಟುವಟಿಕೆಗಳನ್ನೂ ಆರಂಭಿಸಲಾಗುವುದು. ಸಹ ವಿದ್ಯುತ್ ಘಟಕ, ಮೊಲಾಸಸ್ ಉತ್ಪಾದನೆಗ ಪ್ರಾಮುಖ್ಯತೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಡಿಸ್ಟಿಲರಿ, ಎಥೆನಾಲ್ ಘಟಕಗಳನ್ನು ತೆರೆದು ಕಂಪನಿ ಸ್ವಾವಲಂಬಿಯಾಗಿ ಮುನ್ನಡೆಯುವಂತೆ ಮಾಡಲಾಗುವುದು ಎಂದು ವಿಶ್ವಾಸದಿಂದ ಹೇಳಿದರು.

ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಜಿಲ್ಲಾಧಿಕಾರಿ ಡಾ.ಕುಮಾರ, ಮೈಷುಗರ್ ವ್ಯವಸ್ಥಾಪಕ ನಿರ್ದೇಶಕ ಮಂಗಲ್‌ದಾಸ್ ಇತರರಿದ್ದರು.

ಮನ್‌ಮುಲ್‌ನಿಂದ ತಿರುಪತಿಗೆ 13 ಟನ್ ತುಪ್ಪ ರವಾನೆಗೆ ಚಾಲನೆ

ಕನ್ನಡಪ್ರಭ ವಾರ್ತೆ ಮದ್ದೂರು

ಮಂಡ್ಯ ಜಿಲ್ಲಾ ಒಕ್ಕೂಟದಿಂದ ತಿರುಪತಿ ತಿರುಮಲ ದೇವಸ್ಥಾನಕ್ಕೆ ತುಪ್ಪವನ್ನು ಸೋಮವಾರ ರವಾನಿಸಲಾಯಿತು. ಒಕ್ಕೂಟದ ಅಧ್ಯಕ್ಷ ಯು.ಸಿ.ಶಿವಕುಮಾರ್ ತುಪ್ಪದ ಟಿನ್‌ಗಳಿದ್ದ ಲಾರಿಗೆ ಹಸಿರು ನಿಶಾನೆ ತೋರಿಸಿ ಕಳುಹಿಸಿಕೊಟ್ಟರು.

ತಿರುಪತಿ ತಿರುಮಲ ದೇವಸ್ಥಾನಕ್ಕೆ 10 ಲಕ್ಷ ಕೆ.ಜಿ. ತುಪ್ಪವನ್ನು ಸರಬರಾಜು ಮಾಡಲು ಟಿಟಿಡಿ ಅವರು ಕರ್ನಾಟಕ ಹಾಲು ಮಹಾಮಂಡಳಿಗೆ ಬೇಡಿಕೆ ನೀಡಿದ್ದಾರೆ. ಮೊದಲ ಹಂತದಲ್ಲಿ 2,50,000 ಕೆಜಿಗಳಷ್ಟು ತುಪ್ಪವನ್ನು ಸರಬರಾಜು ಮಾಡಲು ಮಂಡ್ಯ ಹಾಲು ಒಕ್ಕೂಟಕ್ಕೆ ಹಂಚಿಕೆ ಮಾಡಿದ್ದಾರೆ. ಅದರಂತೆ ತಿರುಪತಿ ತಿರುಮಲ ದೇವಸ್ಥಾನಕ್ಕೆ ಮೊದಲ ಹಂತದಲ್ಲಿ 13 ಟನ್ ತುಪ್ಪವನ್ನು ರವಾನಿಸಲಾಯಿತು.

ಈ ವೇಳೆ ಮನ್ಮುಲ್ ನಿರ್ದೇಶಕರಾದ ಬೋರೇಗೌಡ, ಜಿ.ಆರ್.ರಾಮಚಂದ್ರು, ರಘು ನಂದನ್, ಡಾಲು ರವಿ, ಎಸ್.ಪಿ. ಸ್ವಾಮಿ, ಹರೀಶ್, ಅಪ್ಪಾಜಿಗೌಡ, ಶಿವಕುಮಾರ್, ಲಕ್ಷ್ಮೀನರಸಿಂಹಯ್ಯ, ಕೃಷ್ಣೆಗೌಡರು ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಮಂಜೇಶ್, ಮಾರುಕಟ್ಟೆ ವ್ಯವಸ್ಥಾಪಕ ಪ್ರದೀಪ್, ಹಣಕಾಸು ವಿಭಾಗದ ವ್ಯವಸ್ಥಾಪಕಿ ಪುಷ್ಪಲತಾ, ಖರೀದಿ ಅಧಿಕಾರಿ ಶ್ಯಾಮ ಸುಂದರ್, ಆಡಳಿತ ವ್ಯವಸ್ಥಾಪಕ ಅಕಲಪ್ಪರೆಡ್ಡಿ, ಗುಣ ಭರವಸೆ ವ್ಯವಸ್ಥಾಪಕ ರಾಮಕೃಷ್ಣ, ಡೇರಿ ವ್ಯವಸ್ಥಾಪಕ ಶ್ರೀನಿವಾಸ ಮೂರ್ತಿ, ಅಭಿಯಂತರ ಶಿವಕುಮಾರ್, ಸಹಾಯಕ ವ್ಯವಸ್ಥಾಪಕ ಸಿ.ಎನ್. ಸಾಗರ್ ಮತ್ತಿತರರು ಇದ್ದರು.

PREV

Recommended Stories

ಮಹರ್ಷಿ ವಾಲ್ಮೀಕಿ ಕವಿಕುಲದ ಸಾರ್ವಭೌಮ: ಸಾಲವಾಡಗಿ
ಅಪಘಾತದಲ್ಲಿ ಪತ್ರಕರ್ತ ಕಾನಗೊಂಡ ಸಾವು