ಕನ್ನಡಪ್ರಭ ವಾರ್ತೆ ಚಾಮರಾಜನಗರ
ಹೆಚ್ಚುವರಿ ಜಿಲ್ಲಾಧಿಕಾರಿ ಟಿ.ಜವರೇಗೌಡ, ನಾಡಿನ ಅಭಿವೃದ್ಧಿಗಾಗಿ ಜನಪರ ಯೋಜನೆಗಳನ್ನು ಜಾರಿಗೊಳಿಸಿದ ಕೆಂಪೇಗೌಡ ಅವರ ಪರಿಶ್ರಮದಿಂದ ಬೆಂಗಳೂರು ಇಂದು ವಿಶ್ವಮಟ್ಟದಲ್ಲಿ ಹೆಸರುಗಳಿಸಿದೆ. ಸರ್ಕಾರದ ನಿರ್ದೇಶನದಂತೆ ಕೆಂಪೇಗೌಡ ಅವರ ಜೀವನ-ಸಾಧನೆಗಳನ್ನು ಸ್ಮರಿಸುವ ಸಲುವಾಗಿ ಇದೇ ತಿಂಗಳ 27ರಂದು ನಗರದಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಜಿಲ್ಲಾಡಳಿತ, ಜಿಪಂ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜೂ.27ರಂದು ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮ ಆಯೋಜನೆಯಲ್ಲಿ ಯಾವುದೇ ಲೋಪಗಳಿಗೆ ಅವಕಾಶವಾಗದಂತೆ ಅಚ್ಚುಕಟ್ಟಾಗಿ ಆಚರಿಸಲು ಅಗತ್ಯವಿರುವ ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಬಳಿಕ ಕೆಂಪೇಗೌಡ ಜಯಂತಿ ಅಚರಣೆಗೆ ಸಂಬಂಧಿಸಿದಂತೆ ಅನಿಸಿಕೆ, ಅಭಿಪ್ರಾಯ ಹಾಗೂ ಸಲಹೆ ನೀಡುವಂತೆ ಸಭೆಯಲ್ಲಿ ಹಾಜರಿದ್ದ ಸಮಾಜದ ಮುಖಂಡರು ಹಾಗೂ ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳಿಗೆ ಕೋರಿದರು.ಸಮಾಜದ ಮುಖಂಡರು ಮಾತನಾಡಿ, ಈ ಬಾರಿಯ ಕೆಂಪೇಗೌಡ ಜಯಂತಿಯ ಮೆರವಣಿಗೆ ರದ್ದುಪಡಿಸಿ ವೇದಿಕೆ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ವೇದಿಕೆ ಕಾರ್ಯಕ್ರಮದ ಬ್ಯಾಕ್‌ಡ್ರಾಪ್ ಉತ್ತಮವಾಗಿರಬೇಕು. ಆಹ್ವಾನ ಪತ್ರಿಕೆಯನ್ನು ಶಿಷ್ಟಾಚಾರ ಪ್ರಕಾರವೇ ಮುದ್ರಿಸಿ ಎಲ್ಲ ಗಣ್ಯರಿಗೂ ವಿತರಿಸಿ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಜನಪ್ರತಿನಿಧಿಗಳು, ಜಿಲ್ಲಾಮಟ್ಟದ ಅಧಿಕಾರಿ, ಸಿಬ್ಬಂದಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲು ಕೆಂಪೇಗೌಡರ ಬಗ್ಗೆ ಹೆಚ್ಚಾಗಿ ಅಧ್ಯಯನ ಮಾಡಿರುವ ನುರಿತ ಪರಿಣಿತರನ್ನು ಆಯ್ಕೆ ಮಾಡಬೇಕು ಎಂದರು.
ಮುಖಂಡರ ಸಲಹೆಗಳಿಗೆ ಸಹಮತ ವ್ಯಕ್ತಪಡಿಸಿದ ಎಡಸಿ ಜವರೇಗೌಡ ಕಾರ್ಯಕ್ರಮ ಆಚರಣೆ ಸಂಬಂಧ ಎಲ್ಲಾ ಸಿದ್ದತಾ ಕೆಲಸಗಳನ್ನು ಆದಷ್ಟು ಶೀಘ್ರ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ನಂಜುಂಡಯ್ಯ, ಸಮುದಾಯದ ಮುಖಂಡರಾದ ಸುದರ್ಶನ್ ಗೌಡ, ಸೋಮಣ್ಣ, ಚಿನ್ನಮೂರ್ತಿ, ಮಹೇಶ್, ನಾಗೇಂದ್ರ, ಚಾ.ರಂ.ಶ್ರೀನಿವಾಸ್‌ಗೌಡ ಸಂಘಸಂಸ್ಥೆ ಮುಖಂಡರಾದ ಜಿ.ಬಂಗಾರು. ಜನಪದ ಗಾಯಕ ಸಿ.ಎಂ. ನರಸಿಂಹಮೂರ್ತಿ, ಆಲೂರು ನಾಗೇಂದ್ರ, ನಾರಾಯಣ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.