ಧಾರವಾಡ:
ಬಿಜೆಪಿ ರೈತ ಮೋರ್ಚಾ ಮಂಗಳವಾರ ಆಯೋಜಿಸಿದ್ದ ಪ್ರತಿಭಟನಾ ವೇದಿಕೆಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷವು ಘೋಷಣೆ ಮಾಡಿದ ಯಾವುದನ್ನು ನಡೆಸಿಕೊಟ್ಟಿಲ್ಲ. ಪ್ರಣಾಳಿಕೆಯಲ್ಲಿ ಖಾಲಿ ಹುದ್ದೆ ಭರ್ತಿ ಮಾಡುತ್ತೇವೆ ಎಂದಿದ್ದು, ಎರಡುವರೆ ಲಕ್ಷ ಹುದ್ದೆಗಳ ಪೈಕಿ ಒಂದೇ ಹುದ್ದೆ ಭರ್ತಿ ಮಾಡಿಲ್ಲ. ಅದೇ ರೀತಿ ರೈತರ, ವಿದ್ಯಾರ್ಥಿಗಳ ನಿರೀಕ್ಷೆಗಳೆಲ್ಲವೂ ಹುಸಿಯಾಗಿದೆ. ವಿದ್ಯಾರ್ಥಿಗಳ ಹೋರಾಟ ಹತ್ತಿಕ್ಕಿ ಅವರನ್ನು ಬಂಧಿಸಿದ ಸರ್ಕಾರ ವಿದ್ಯಾರ್ಥಿಗಳ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಮುಂದಾಗಿದ್ದು ದುರಂತದ ಸಂಗತಿ ಎಂದರು.
50 ಕ್ವಿಂಟಲ್ ಖರೀದಿಸಲು ಆಗ್ರಹ:ರಾಜ್ಯದಲ್ಲಿ 10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮೆಕ್ಕೆಜೋಳ ಬೆಳೆದಿದ್ದು, ಬೆಂಬಲ ಬೆಲೆ ಘೋಷಣೆಯಂತೆ ಕೂಡಲೇ ಖರೀದಿ ಕೇಂದ್ರ ಮಾಡಬೇಕಿತ್ತು. ಈ ಬಗ್ಗೆ ರಾಜ್ಯ ಸರ್ಕಾರಕ್ಕೆ ಕಾಳಜಿಯೇ ಇಲ್ಲ. ರಾಜ್ಯದಲ್ಲಿ ರೈತರು ಬೀದಿಗೆ ಬಿದ್ದಿದ್ದು, ಇನ್ನೂ ಸರ್ಕಾರ ಎಚ್ಚೆತ್ತುಕೊಳ್ಳುತ್ತಿಲ್ಲ. ಒಬ್ಬ ರೈತನಿಂದ ಬರಿ 5 ಕ್ವಿಂಟಲ್ ಮಾತ್ರ ಖರೀದಿಗೆ ಅವಕಾಶ ಎನ್ನುತ್ತಿರುವುದು ತಪ್ಪು. ಕನಿಷ್ಠ 50 ಕ್ವಿಂಟಲ್ ಖರೀದಿಸಬೇಕು. ಇಲ್ಲದೇ ಹೋದಲ್ಲಿ ಸುವರ್ಣಸೌಧಕ್ಕೆ ಮುತ್ತಿಗೆ ಹಾಕಿ ಪ್ರತಿಭಟಿಸುತ್ತೇನೆ ಎಂದು ವಾಗ್ದಾಳಿ ನಡೆಸಿದರು.
ಕುರ್ಚಿ ಕಾಳಗ ಕೈ ಬಿಡಿ:ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಯಾರ ಮನೆಯಲ್ಲಿ ಬ್ರೇಕ್‌ಫಾಸ್ಟ್, ಲಂಚ್ ಮಾಡುತ್ತಿದ್ದಾರೆ ಎಂಬುದು ಮುಖ್ಯವಲ್ಲ. ರಾಜ್ಯದ ಬಡ ಜನರು, ದಲಿತರು, ರೈತರು ಹಾಗೂ ಯುವಕರು ಬೀದಿಯಲ್ಲಿ ಬಿದ್ದಿದ್ದಾರೆ. ರಾಜ್ಯದ ಜನರು ನಿಮಗೆ ಮತ ಹಾಕಿದ್ದು, ಕುರ್ಚಿ ಕಾಳಗ ಬದಿಗಿಟ್ಟು ಜನರ ಸಮಸ್ಯೆಗಳಿಗೆ ಪರಿಹಾರ ಕೊಡಲು ಮುಂದಾಗಬೇಕು. ರಾಜ್ಯದಲ್ಲಿ ಆಡಳಿತ ವ್ಯವಸ್ಥೆ ನಿಂತ ನೀರಾಗಿದೆ. ವಿಧಾನಸೌಧದಲ್ಲಿ ಯಾವ ಕಾರ್ಯದರ್ಶಿಗಳು ಕೆಲಸ ಮಾಡುತ್ತಿಲ್ಲ. ಇದರ ಪರಿಣಾಮ ಜನರ ಮೇಲಾಗುತ್ತಿದೆ ಎಂದು ಮಾಜಿ ಶಾಸಕ ಪಿ. ರಾಜೀವ ಸರ್ಕಾರದ ವಿರುದ್ಧ ಕಿಡಿಕಾರಿದರು.