ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಿಂದ ಪಂಚಾಯಿತಿ ಕಚೇರಿವರೆಗೆ ಜಾಥಾ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಗ್ರಾಮೀಣ ಪ್ರದೇಶದ ನಿವಾಸಿಗಳಿಗೆ ವಸತಿ, ನಿವೇಶನ ಸೇರಿದಂತೆ ಮೂಲ ಸೌಲಭ್ಯ ನೀಡಲು ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸಖರಾಯಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಗ್ರಾಪಂ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಸರ್ಕಾರಿ ಬಸ್ ನಿಲ್ದಾಣದಿಂದ ಪಂಚಾಯಿತಿ ಕಚೇರಿವರೆಗೆ ಜಾಥಾ ನಡೆಸಿದ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾವಚಿತ್ರವನ್ನು ಸುಟ್ಟು ಹಾಕಿ ಆಕ್ರೋಶ ಹೊರ ಹಾಕಿದರು.ಬಳಿಕ ಮಾತನಾಡಿದ ಬಿಜೆಪಿ ಜಿಲ್ಲಾ ಎಸ್ಟಿ ಮೋರ್ಚಾ ಅಧ್ಯಕ್ಷ ನಂದೀಶ್ ಮದಕರಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಇ-ಸ್ವತ್ತು ವಿತರಣೆಯಲ್ಲಿ ವಿಳಂಭ, ವಸತಿ ವ್ಯವಸ್ಥೆಯಿಲ್ಲ, ನಿವೇಶನ ರಹಿತರಿಗೆ ನಿವೇಶನ ಒದಗಿಸುತ್ತಿಲ್ಲ. 94ಸಿ ಅಡಿಯಲ್ಲಿ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡದೇ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿದರು.ವೃದ್ದಾಪ್ಯ ವೇತನ, ಸಂಧ್ಯಾ ಸುರಕ್ಷಾ ಯೋಜನೆಗಳ ಹಣ ಬಿಡುಗಡೆಗೊಳ್ಳುತ್ತಿಲ್ಲ. ಕಾರಣವಿಲ್ಲದೇ ಯಾವುದೇ ಯೋಜನೆ ಗಳನ್ನು ರದ್ದುಗೊಳಿಸಬಾರದು. ಪಹಣಿ, ಛಾಪಾ ಕಾಗದ, ವಿದ್ಯುತ್ ದರ ಸೇರಿದಂತೆ ಸಾರ್ವಜನಿಕ ಅಗತ್ಯ ವಸ್ತುಗಳ ಬೆಲೆ ಏರಿಕೆಯನ್ನು ಕೂಡಲೇ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.ಸರ್ಕಾರಿ ಇಲಾಖೆಗಳಿಂದ ಸಾರ್ವಜನಿಕರಿಗೆ ದೊರೆಯುವ ಪಹಣಿ, ಛಾಪಾ, ರೈತರ ಟಿಸಿ ಹಾಗೂ ರಿಜಿಸ್ಟರ್ ವೆಚ್ಚದ ಬೆಲೆಗಳು ದುಪ್ಪಟ್ಟಾಗಿದೆ. ದೀನ ದಲಿತರ ಮಕ್ಕಳಿಗೆ ಕೊಡುವಂಥ ವಿದ್ಯಾರ್ಥಿ ವೇತನ ಕಡಿತಗೊಂಡಿದೆ. ವಿದ್ಯುತ್ ಬಿಲ್ ಶೂನ್ಯವೆಂದು ಹೇಳಿ ಪ್ರತಿ ತಿಂಗಳು ಮನೆಗಳಿಗೆ ಬಿಲ್ ಬರುತ್ತಿದ್ದು ಸರ್ಕಾರ ಗ್ಯಾರಂಟಿ ಹೆಸರಿನಲ್ಲಿ ಬಡವರ ಜೇಬಿಗೆ ಕತ್ತರಿ ಹಾಕುತ್ತಿದೆ ಎಂದರು.
ಸಖರಾಯಪಟ್ಟಣ ಗ್ರಾಪಂ ಮಾಜಿ ಅಧ್ಯಕ್ಷ ಎಸ್.ಆರ್.ಯೋಗೇಂದ್ರ ಮಾತನಾಡಿ, ರೈತಾಪಿ ವರ್ಗಕ್ಕೆ ಕೇಂದ್ರ ಸರ್ಕಾರ ಆರು ಸಾವಿರ ರು. ನೀಡುತ್ತಿದೆ. ಇದರೊಟ್ಟಿಗೆ ರಾಜ್ಯ ಸರ್ಕಾರ 4 ಸಾವಿರ ಸೇರಿಸಿ ಖಾತೆಗೆ ಜಮಾಯಿಸಬೇಕು. ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ನಿರ್ಮಿಸದೇ ನಿವಾಸಿಗಳಿಗೆ ನೀರಿನ ಕೊರತೆ ಉದ್ಬವಿಸಿದ್ದು ಕೂಡಲೇ ಸರಿಪಡಿಸಬೇಕು ಎಂದು ಆಗ್ರಹಿಸಿದರು.ಪ್ರತಿಭಟನೆಯಲ್ಲಿ ಗ್ರಾಪಂ ಸದಸ್ಯರಾದ ಜಯಪ್ಪ, ಅರುಣ್‌ಕಾವಲ್, ಯುವ ಮೋರ್ಚಾ ಗ್ರಾಮಾಂತರ ಪ್ರದೇಶ ಕಾರ್ಯದರ್ಶಿ ಪುರುಷೋತ್ತಮ್, ಎಸ್ಸಿ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಕೊಲ್ಲಾ ಬೋವಿ, ಗ್ರಾಮಾಂತರ ಅಧ್ಯಕ್ಷ ಪ್ರದೀಪ್‌ನಾಯ್ಕ್, ಮಹಾಶಕ್ತಿ ಕೇಂದ್ರದ ಅಧ್ಯಕ್ಷ ನಾಗೇಗೌಡ, ಮುಖಂಡರಾದ ಪ್ರವೀಣ್, ರಾಜಣ್ಣ, ಶಿವಮೂರ್ತಿ, ಮಿಥುನ್, ಆರ್‍ಮುಗಂ, ಲೋಕೇಶ್‌ನಾಯ್ಕ್, ದಿಲೀಪ್, ಮಂಜುನಾಥ್, ವಿನೋದ್‌ನಾಯ್ಕ್, ರವಿನಾಯ್ಕ್ ಪಾಲ್ಗೊಂಡಿದ್ದರು. 8 ಕೆಸಿಕೆಎಂ 2ಮೂಲಸೌಲಭ್ಯ ನೀಡಲು ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಸಖರಾಯಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.