ಶಿರಸಿ: ಧರ್ಮಸ್ಥಳ ಪ್ರಕರಣ ಸೂಕ್ಷ್ಮ ವಿಷಯ. ದೇವರು, ಮಠ, ಮಂದಿರದ ಮೇಲೆ ಮೊದಲಿನಿಂದಲೂ ನಂಬಿಕೆ ಇಟ್ಟವನು ನಾನು. ರಾಜ್ಯ ಸರ್ಕಾರ ಯೋಚನೆ ಮಾಡಿ ಎಸ್‌ಐಟಿ ರಚಿಸಿ, ಯಾರಿಗೂ ತೊಂದರೆಯಾದಂತೆ ಎಚ್ಚರ ವಹಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಹೇಳಿದರು.
ಸೋಮವಾರ ನಗರದಲ್ಲಿ ಮಾಧ್ಯಮದ ಜತೆ ಮಾತನಾಡಿದ ಅವರು, ದೇವರು ದೊಡ್ಡವರು. ರಾಜ್ಯದ ಕಾಂಗ್ರೆಸ್ ಸರ್ಕಾರ ಎಸ್.ಐಟಿ ರಚಿಸಿದಾಗ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವಿರೇಂದ್ರ ಹೆಗ್ಗಡೆ ಪರಿವಾರದವರು ಸ್ವಾಗತಿಸಿದ್ದಾರೆ. ರಾಜ್ಯ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ. ಎಲ್ಲ ರೀತಿಯ ಎಚ್ಚರ ವಹಿಸಲಾಗಿದೆ. ಧರ್ಮಸ್ಥಳ ವಿಚಾರದಲ್ಲಿ ವ್ಯತ್ಯಾಸವಾಗುವುದಿಲ್ಲ. ವಿರೇಂದ್ರ ಹೆಗ್ಗಡೆ ಪೂಜನೀಯರು. ಪ್ರಪಂಚಕ್ಕೆ ನ್ಯಾಯ ಕೊಟ್ಟಿರುವ ಪುಣ್ಯ ಕ್ಷೇತ್ರ ಧರ್ಮಸ್ಥಳ. ಅಲ್ಲಿ ಏನೂ ಆಗುವುದಿಲ್ಲ. ನ್ಯಾಯ ದೊರೆಯುತ್ತದೆ. ಸ್ವಾಭಿಮಾನಕ್ಕೆ ಧಕ್ಕೆಯಾಗುವುದಿಲ್ಲ ಎಂದರು.ಉತ್ತರಕನ್ನಡ ಜಿಲ್ಲೆಯ ಮಧ್ಯವರ್ತಿ ಬ್ಯಾಂಕ್ ಉತ್ತಮವಾಗಿ ಒಳ್ಳೆಯ ರೀತಿಯಲ್ಲಿದೆ. ಸೌಹಾರ್ದ ಸಹಕಾರಿಗಳು ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ನಲ್ಲಿ ಹಣ ಮೀಸಲು ಇಡಬೇಕು ಎಂಬ ಮಸೂದೆ ಜಾರಿಗೊಳಿಸಲು ತೀರ್ಮಾನಿಸಿ ಮಸೂದೆ ಮಂಡಿಸಲಾಗಿತ್ತು. ಆದರೆ ಕಾನೂನು ರೂಪು ಆಗಿಲ್ಲ. ಈ ವಿಧೇಯಕವು ಜಿಲ್ಲೆ ಹಾಗೂ ರಾಜ್ಯಕ್ಕೆ ಪೂರಕವಾಗಿತ್ತು ಎಂದರು.
ಬೇಡ್ತಿ- ವರದಾ ನದಿ ಜೋಡಣೆ ಕುರಿತು ಪತ್ರಿಕ್ರಿಯಿಸಿದ ಸಚಿವರು, ಸಮುದ್ರಕ್ಕೆ ಉಪ್ಪು ನೀರು ಸೇರಬೇಕು. ಇದರಿಂದ ಮೀನಿನ ಉತ್ಪಾದನೆ ಹೆಚ್ಚುತ್ತದೆ ಜೊತೆಗೆ ಉಪ್ಪು ನೀರಿನ ಪ್ರಮಾಣವೂ ತಗ್ಗುತ್ತದೆ. ಬೇಡ್ತಿ-ವರದಾ ನದಿ ಜೋಡಣೆ ನಮ್ಮ ಜಿಲ್ಲೆಗೆ ತೊಂದರೆಯಾಗದಿದ್ದರೆ ಮುಂದಿನ ದಿನಗಳಲ್ಲಿ ಚರ್ಚಿಸುವ ಎಂದ ಅವರು, ಗ್ರಾಮೀಣ, ನಗರ, ಲೋಕೋಪಯೋಗಿ ಇಲಾಖೆ ರಸ್ತೆಯ ದುರಸ್ತಿ ಕಾರ್ಯ ನಡೆಸುತ್ತೇವೆ. ರಾಷ್ಟ್ರೀಯ ಹೆದ್ದಾರಿ ನಿಯಂತ್ರಣ ನಮ್ಮ ಕೈಯಲ್ಲಿ ಇಲ್ಲ. ಸಂಸದರು ಅದರ ಕುರಿತು ಕ್ರಮ ವಹಿಸಬೇಕು ಎಂದರು.ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ನಲ್ಲಿ ಒಂದೇ ಕುಟುಂಬದವರಿಲ್ಲ. ಆದರೆ ನಿರ್ದೇಶಕರ ನಡುವೆ ಕಲಹ ಇಲ್ಲ. ಎಲ್ಲರಿಗೂ ನಿರ್ದೇಶಕರಾಗಬೇಕು ಎಂಬ ಆಸೆ ಇರುವುದು ಸಹಜ. ನಿರ್ದೇಶಕ ಸ್ಥಾನಕ್ಕೆ ಪೈಪೋಟಿ ಮಾಡುತ್ತಿದ್ದಾರೆ. ಜಿಲ್ಲಾ ಮಧ್ಯವರ್ತಿ ಬ್ಯಾಂಕ್‌ನಲ್ಲಿ ಪಕ್ಷವಿಲ್ಲ. ಕೆಡಿಸಿಸಿ ಬ್ಯಾಂಕ್‌ನಲ್ಲಿ ರಾಜಕೀಯ ಇಲ್ಲ. ಬಣಗಳಿಲ್ಲ. ಹಿಂದೆ ಸಹಕಾರಿ ಭಾರತಿ ತತ್ವದಲ್ಲಿ ಕೆಲವರು ಹೋಗಿದ್ದಾರೆ. ಇನ್ನೂ ಕೆಲವರು ತಮ್ಮ ಸಿದ್ಧಾಂತದ ಮೂಲಕ ಪ್ರತ್ಯೇಕ ಹೋಗಿದ್ದಾರೆ. ೧೬ ನಿರ್ದೇಶಕರು ಪಕ್ಷಾತೀತವಾಗಿ ಚುನಾವಣೆ ಎದುರಿಸುತ್ತಿದ್ದೇವೆ ಎಂದರು.
ಶಾಸಕ ಭೀಮಣ್ಣ ನಾಯ್ಕ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಜಗದೀಶ ಗೌಡ ಮತ್ತಿತರರು ಇದ್ದರು.ಕಾಗೇರಿಯವರಿಗೆ ಇಷ್ಟು ವರ್ಷ ಜಿಲ್ಲೆಯ ಧಾರಣ ಸಾಮರ್ಥ್ಯ ಅಧ್ಯಯನ ಮಾಡಲು ಸಾಧ್ಯವಾಗಿಲ್ಲವೇ? ಅದರ ಅಧ್ಯಯನ ಜತೆ ರಾಷ್ಟ್ರೀಯ ಹೆದ್ದಾರಿ ಪರಿಸ್ಥಿತಿಯನ್ನೂ ಅಧ್ಯಯನ ಮಾಡಲಿ.ಮಂಕಾಳ ವೈದ್ಯ, ಜಿಲ್ಲಾ ಉಸ್ತುವಾರಿ ಸಚಿವ.
ಬಿಜೆಪಿಯವರು ಮತ ಕಿತ್ತುಕೊಳ್ಳಲು ಜನರ ಭಾವನೆ ಜತೆ ಚೆಲ್ಲಾಟವಾಡಿ ರಾಜಕಾರಣ ಮಾಡುತ್ತಾರೆ. ಕಾಂಗ್ರೆಸ್ಸಿನವರು ಸಾಮಾನ್ಯ ಜನರ ಜೀವನ ರೂಪಿಸಲು ರಾಜಕಾರಣ ಮಾಡುತ್ತಾರೆ. ಇಲ್ಲಿ ಹೋರಾಟ ಮಾಡುವ ಪ್ರಶ್ನೆಯೇ ಇಲ್ಲ. ಅವರು ರಾಜಕಾರಣ ಮಾಡಬಾರದು ಎಂದು ವಿನಂತಿಸುತ್ತೇನೆ. ಪರೇಶ ಮೇಸ್ತನ ಪ್ರಕರಣ ಏನೂ ಆಗಿಲ್ಲ. ಬಡವರಿಗೆ ಸಹಾಯ ನೀಡಿ, ಅವರಿಗೆ ಕಾರ್ಯಕ್ರಮ ಒದಗಿಸಿ ಅಧಿಕಾರಕ್ಕೆ ಬಂದವರು. ವಿರೋಧ ಮಾಡುತ್ತಿರುವವರು ಬಿಜೆಪಿ ಇನ್ನೊಂದು ತಂಡ. ನಾವು ಧಾರ್ಮಿಕತೆ ಉಳಿಸಲು ನೋಡುತ್ತಿದ್ದೇವೆ ಎಂದು ಸಚಿವ ಮಂಕಾಳ ವೈದ್ಯ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.