ಹಳಿಯಾಳ: ತಾಲೂಕಿನಲ್ಲೆಡೆ ಗಣೇಶನ ಹಬ್ಬ ಕ್ಷಣಗಣನೆ ಆರಂಭವಾಗಿದೆ. ಒಂದೆಡೆ ಚೌತಿ ಹಬ್ಬದ ಆಚರಣೆಗೆ ಜನರು ಸಿದ್ಧತೆ ನಡೆಸಿದ್ದಾರೆ. ಇನ್ನೊಂದೆಡೆ ಮೂರ್ತಿಕಾರರು ಸಿದ್ಧಪಡಿಸಿದ ಮೂರ್ತಿಗಳಿಗೆ ಅಂತಿಮ ಸ್ಪರ್ಶ ನೀಡುವಲ್ಲಿ ತಲ್ಲೀನರಾಗಿದ್ದಾರೆ.ಗಣೇಶನನ್ನು ಶ್ರದ್ಧಾ ಭಕ್ತಿಯಿಂದ ಕರೆ ತರಲು ಪಟ್ಟಣ ಸೇರಿದಂತೆ ಇಡೀ ತಾಲೂಕು ತುದಿಗಾಲ ಮೇಲೆ ನಿಂತಂತೆ ಭಾಸವಾಗುತ್ತಿದೆ. ಎಲ್ಲೆಡೆ ಗಣೇಶ ಚೌತಿಯ ಸಂಭ್ರಮ ಮನೆಮಾಡಿದೆ.ವಿದ್ಯುತ್ ದೀಪಾಲಂಕಾರಕ್ಕಾಗಿ ವಿವಿಧ ನಮೂನೆಯ ವಿದ್ಯುತ್ ಸರಗಳು ಝಗಮಗಿಸುತ್ತಾ ಗ್ರಾಹಕರನ್ನು ಆಕರ್ಷಿಸಲಾರಂಭಿಸಿವೆ. ಪ್ರಥಮ ವಂದಿಪನನ್ನು ಪ್ರತಿಷ್ಠಾಪಿಸಲು ವಿವಿಧ ಗಾತ್ರದ ರೆಡಿಮೇಡ್ ಮಂಟಪಗಳಂತೂ ಮಾರುಕಟ್ಟೆಯಲ್ಲಿ ಬಂದಿವೆ. ಮಂಟಪ ಶೃಂಗರಿಸಲು ವಿವಿಧ ಬಗೆಯ ಕೃತಕ ಹೂವಿನಹಾರಗಳು, ಅಷ್ಟೇ ಜೋರಾಗಿ ಪಟಾಕಿ ಮಾರಾಟವು ನಡೆದಿದೆ.
ತಾಲೂಕಾಡಳಿತವು ಪೊಲೀಸ್ ಇಲಾಖೆ, ಪುರಸಭೆ, ಅಗ್ನಿಶಾಮಕ, ವಿದ್ಯುತ್ ಇಲಾಖೆಯ ಸಹಯೋಗದಲ್ಲಿ ಹಬ್ಬದ ಸಿದ್ಧತಾ ಪೂರ್ವಸಭೆ ನಡೆಸಿ, ಶಾಂತಿಯುತ ಹಾಗೂ ಕಾನೂನುಬದ್ಧವಾಗಿ ಹಬ್ಬದ ಆಚರಣೆಗೆ ಸಕಲ ಕ್ರಮಗಳನ್ನು ಕೈಗೊಂಡಿದೆ.ಪಟ್ಟಣ ಸೇರಿದಂತೆ ಗ್ರಾಮಾಂತರ ಭಾಗಗಳಲ್ಲಿ ಬಗೆ ಬಗೆಯ ಶೈಲಿಯ ಸಣ್ಣ ಮತ್ತು ದೊಡ್ಡ ಗಾತ್ರದ ಪಿಒಪಿ ಮೂರ್ತಿಗಳು ಮಹಾರಾಷ್ಟ್ರದಿಂದ ಪ್ರವೇಶಿಸಿವೆ. ಹಲವು ಮೂರ್ತಿಕಾರರು ಸರ್ಕಾರದ ಆದೇಶ ಗಾಳಿಗೆ ತೂರಿ, ಪಿಒಪಿ ಮೂರ್ತಿಗಳಿಗೆ ಅಂತೀಮ ಸ್ಪರ್ಶ ನೀಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಮಣ್ಣಿನ ಮೂರ್ತಿಗಳಿಗೆ ಹೋಲಿಸಿದರೆ ಪಿಒಪಿ ಮೂರ್ತಿ ಅಗ್ಗವಾಗಿರುವುದರಿಂದ ಜನರು ಸಹ ಹಗುರವಾಗಿರುವ ಪಿಒಪಿ ಮೂರ್ತಿಗಳಿಗೆ ಹೆಚ್ಚಾಗಿ ಬೇಡಿಕೆ ಸಲ್ಲಿಸುತ್ತಿರುವುದು ಕಂಡು ಬರುತ್ತಿದೆ. ಪಿಒಪಿ ಗಣೇಶ ಮೂರ್ತಿ ನಿಷೇಧಿಸಲಾಗುವುದು ಎಂದು ಸಾರುವ ಸರ್ಕಾರದ ಆದೇಶವು ಕೇವಲ ಕಡತಕ್ಕೆ ಸೀಮಿತವಾಗಿದೆ ಎಂಬ ಆರೋಪ ಮೂರ್ತಿಕಾರರು ವ್ಯಕ್ತಪಡಿಸುತ್ತಿದ್ದಾರೆ.
ನಮಗೂ ಪರಿಸರ ಸ್ನೇಹಿ ಗಣಪನನ್ನು ತಯಾರಿಸಲು ಆಸೆ ಇದೆ. ಆದರೆ ಗ್ರಾಹಕರು ಪಿಒಪಿ ಮೂರ್ತಿಗಳಿಗೆ ಹೆಚ್ಚು ಬೇಡಿಕೆ ಸಲ್ಲಿಸುತ್ತಿರುವುದರಿಂದ ಗ್ರಾಹಕರನ್ನು ಕಳೆದುಕೊಳ್ಳಬಾರದೆಂಬ ಅನಿವಾರ್ಯತೆಯಿಂದಾಗಿ ಪಿಒಪಿ ಮೂರ್ತಿಗಳನ್ನು ಬೇರೆಡೆಯಿಂದ ತರಿಸಿಕೊಡುತ್ತೇವೆ ಎಂದು ಮೂರ್ತಿಕಾರರು ಹೇಳುತ್ತಾರೆ.ಮಣ್ಣಿನ ಮೂರ್ತಿಗಳು:
ತಾಲೂಕಾಡಳಿತ ಹಾಗೂ ಜನಪ್ರತಿನಿಧಿಗಳಿಂದ ಯಾವುದೇ ಬೆಂಬಲ ಸಹಕಾರವಿಲ್ಲವಾಗಿದೆ ಎಂಬ ಆಕ್ರೋಶ ಮಣ್ಣಿನ ಮೂರ್ತಿಕಾರರಲ್ಲಿ ಮಡುಗಟ್ಟಿದೆ. ಪಿಒಪಿ ಮೂರ್ತಿ ನಿಷೇಧ ಆದೇಶ ಹಳಿಯಾಳ ತಾಲೂಕಿನಲ್ಲಿ ಜಾರಿಯಾಗುವುದಿಲ್ಲ. ಕಾರಣ ರಾಜಕಾರಣಿಗಳು, ಜನಪ್ರತಿನಿಧಿಗಳ ಒತ್ತಡ, ಪ್ರಭಾವದಿಂದ ಎಲ್ಲ ಆದೇಶಗಳು ಕೇವಲ ಕಡತಕ್ಕೆ ಸೀಮಿತವಾಗಿವೆ ಎಂಬ ಆಕ್ರೋಶವಿದೆ. ಮಣ್ಣಿನಲ್ಲಿ ಗಣೇಶನನ್ನು ತಯಾರಿಸಿ ರಾಸಾಯನಿಕ ರಹಿತವಾದ ಬಣ್ಣ ಬಳಿದು ಪರಿಸರ ಕಾಳಜಿ ಮೆರೆಯುತ್ತಿದ್ದಾರೆ.ಪ್ರತಿಕ್ರಿಯೆ:
ಪಿಒಪಿ ಮೂರ್ತಿಗಳನ್ನು ತಯಾರಿಸಬಾರದು. ಅವುಗಳನ್ನು ನಿಷೇಧಿಸಲಾಗಿದೆ ಎಂದು ನಾವು ಬಹುಹಿಂದೆಯೇ ಮೂರ್ತಿಕಾರರಿಗೆ ಸರ್ಕಾರದ ಸುತ್ತೋಲೆ ಕಳಿಸಿದ್ದೇವೆ. ಸರ್ಕಾರದ ಆದೇಶ ಪಾಲಿಸಲು ಸಾರ್ವಜನಿಕರು ಸಹ ಕೈಜೋಡಿಸಬೇಕು. ಪಿಒಪಿ ಮೂರ್ತಿಗಳ ಬದಲು ಪರಿಸರ ಸ್ನೇಹಿ ಮೂರ್ತಿಗಳಿಗೆ ಆದ್ಯತೆ ನೀಡಬೇಕು.ಅಶೋಕ ಸಾಳೆಣ್ಣನವರ, ಹಳಿಯಾಳ ಪುರಸಭೆ ಮುಖ್ಯಾಧಿಕಾರಿ. ತಾಲೂಕಾಡಳಿತ ಕೇವಲ ಆದೇಶ ಜಾರಿಗೊಳಿಸುತ್ತದೆಯೇ ಹೊರತು ಅದನ್ನು ಕಾರ್ಯರೂಪಕ್ಕೆ ತರುವುದಿಲ್ಲ. ಕೇವಲ ಆದೇಶ ಮಾಡುವುದೇ ಆಯಿತು. ಅದನ್ನು ಅನುಷ್ಠಾನ ಮಾಡುವರು ಯಾರು? ಬಹಿರಂಗವಾಗಿ ಪಿಒಪಿ ಮೂರ್ತಿಗಳ ಮಾರಾಟ ನಡೆಯುತ್ತಿದ್ದರೂ ತಾಲೂಕಾಡಳಿತ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ಪರಿಸರ ಸ್ನೇಹಿ ಮೂರ್ತಿಕಾರರನ್ನು ಸಂರಕ್ಷಿಸುವುದು ಯಾರು?ನೀಲಕಂಠ ತೇಲಿ, ಹಳಿಯಾಳದ ಹಿರಿಯ ಮೂರ್ತಿಕಾರ.