ಬೆಲೆ ಏರಿಕೆ ಖಂಡಿಸಿ ಬಿಜೆಪಿ ಧರಣಿ
ಚಿಕ್ಕಮಗಳೂರು: ಚುನಾವಣೆ ಪೂರ್ವದಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸುವಲ್ಲಿ ವಿಫಲರಾಗಿದ್ದಾರೆ. ಗ್ಯಾರಂಟಿ ಯೋಜನೆಗಾಗಿ ಸಾಮಾನ್ಯ ಜನರ ರಕ್ತ ಹೀರುತ್ತಿರುವ ಕಾಂಗ್ರೆಸ್ ಸರ್ಕಾರ ಅಗತ್ಯ ವಸ್ತುಗಳ ಬೆಲೆ ಏರಿಸಿರುವುದು ರಾಜ್ಯದ ಜನತೆಗೆ ಬಗೆದ ದ್ರೋಹವಾಗಿದೆ ಎಂದು ಆವತಿ ಹೋಬಳಿ ಬಿಜೆಪಿ ಅಧ್ಯಕ್ಷ ಕೆರೆಮಕ್ಕಿ ಮಹೇಶ್ ಕಿಡಿಕಾರಿದರು.ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡಿರುವುದನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ತಾಲೂಕಿನ ಆವತಿಯಲ್ಲಿ ಪ್ರತಿಭಟನೆ ಸಂದರ್ಭದಲ್ಲಿ ಮಾತನಾಡಿದರು.
ಪಹಾಲ್ಗಮ್ ದಾಳಿ ನಂತರ ರಾಜ್ಯದ ಮುಖ್ಯಮಂತ್ರಿ ಮತ್ತು ಸಚಿವರು ಬೇಜವಾಬ್ದಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಆಲ್ದೂರು ಮಂಡಲದ ಬಿಜೆಪಿ ಅಧ್ಯಕ್ಷ ರವಿ ಬಸರವಳ್ಳಿ ಮಾತನಾಡಿ, ಹಿಂದೂಗಳಿಗೆ ಕಾಂಗ್ರೆಸ್ ಸರ್ಕಾರದಲ್ಲಿ ಉಳಿಗಾಲ ಇಲ್ಲ. ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಮಾಡಿದ ಹಂತಕರಿಗೆ ತಕ್ಷಣ ಶಿಕ್ಷೆ ಕೊಡಿಸಬೇಕೆಂದು ಒತ್ತಾಯಿಸಿದರು.
ಜಿಲ್ಲಾ ಎಸ್ಸಿ ಮೋರ್ಚಾಅಧ್ಯಕ್ಷ ಕೆ.ಪಿ.ವೆಂಕಟೇಶ್ ಮಾತನಾಡಿ, ಗ್ಯಾರಂಟಿ ಯೋಜನೆಗೆ ಸರ್ಕಾರ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಮೀಸಲಿಟ್ಟ ಹಣವನ್ನು ದುರುಪಯೋಗ ಮಾಡಿಕೊಂಡು, ದಲಿತರ ಉದ್ಧಾರ ಮಾಡುವುದಾಗಿ ಆಶ್ವಾಸನೆ ನೀಡಿ ಅಧಿಕಾರಕ್ಕೆ ಬಂದ ಸರ್ಕಾರ ದಲಿತರಿಗೆ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.ಬಿಜೆಪಿ ಮುಖಂಡ ದೀಪಕ್ ದೊಡ್ಡಯ್ಯ ಮಾತನಾಡಿ, ಅಂಬೇಡ್ಕರ್ ಬಗ್ಗೆ ಹೆಚ್ಚು ಮಾತನಾಡುವ ಕಾಂಗ್ರೆಸ್ಸಿಗರು ಅವರ ಆಪ್ತ ಕಾರ್ಯದರ್ಶಿಯನ್ನೇ ಅವರ ವಿರುದ್ಧ ಸ್ಪರ್ಧಿಸುವಂತೆ ಮಾಡಿ ಸೋಲಿಸಿದ ಸಾಧನೆಗೆ ಅವರಿಗೆ ಪದ್ಮಭೂಷಣ ಪ್ರಶಸ್ತಿ ನೀಡಿ ಅಂಬೇಡ್ಕರ್ ಅವರಿಗೆ ಅವಮಾನಿಸಿರುವುದು ಕಾಂಗ್ರೆಸ್ಸಿಗೆ ಸಲ್ಲುವ ಗೌರವ ಎಂದು ಛೇಡಿಸಿದರು.
ಆವತಿ ಹೋಬಳಿ ಬಿಜೆಪಿ ಎಸ್ಸಿ ಮೋರ್ಚಾದ ಅಧ್ಯಕ್ಷ ಹರೀಶ್, ಪ್ರಧಾನ ಕಾರ್ಯದರ್ಶಿ ಮಂಜು, ಪಕ್ಷದ ಮುಖಂಡರಾದ ಡಿ.ಜೆ.ನಾಗೇಶ್ ಬೈಗೂರ್ ನಾಗೇಶ್, ರವೀಂದ್ರ ಅನಿಗನಹಳ್ಳಿ, ಸೋಮೇಶ್ ಕರಗೂರು, ಮಂಜು ಮಲ್ಲಂದೂರು, ಶಶಿ ಆಲ್ದೂರು, ಚಂಪಾ ಜಗದೀಶ್, ಭವ್ಯ ನಟೇಶ್, ಕಾರ್ಯಕರ್ತರು ಪಾಲ್ಗೊಂಡಿದ್ದರು.