ಜೆಡಿಎಸ್ ನಿಂದ ಹೆದ್ದಾರಿಯಲ್ಲಿ ಬಿದ್ದಿದ್ದ ಗುಂಡಿಗಳಿಗೆ ಕಾಂಕ್ರೀಟ್ ಹಾಕಿ ಮುಚ್ಚಿ ಪ್ರತಿಭಟನೆ
ಹೆದ್ದಾರಿಯಲ್ಲಿ ಬಿದ್ದಿದ್ದ ಭಾರಿ ಗುಂಡಿಗಳಿಗೆ ಸಿಮೆಂಟ್ ಕಾಂಕ್ರೀಟ್ ಹಾಕಿ ಮುಚ್ಚುವ ಮೂಲಕ ಜೆಡಿಎಸ್ ಕಾರ್ಯಕರ್ತರು ಬುಧವಾರ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಪಟ್ಟಣದ ತೀರ್ಥಹಳ್ಳಿ ರಸ್ತೆಯ ಟೋಲ್‌ಗೇಟ್ ಬಳಿಯಿಂದ ಬಸ್ ನಿಲ್ದಾಣದವರೆಗೆ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ ಶೆಟ್ಟಿ ನೇತೃತ್ವದಲ್ಲಿ ನೂರಾರು ಜೆಡಿಎಸ್ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಈ ವೇಳೆ ರಸ್ತೆಯಲ್ಲಿರುವ ಗುಂಡಿಗಳಿಗೆ ಕಾರ್ಯಕರ್ತರು ಸಿಮೆಂಟ್ ಕಾಂಕ್ರೀಟ್ ಹಾಕಿ ಗುಂಡಿ ಮುಚ್ಚಿ ಸರ್ಕಾರಕ್ಕೆ ಛೀಮಾರಿ ಹಾಕಿದರು.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ. ರಸ್ತೆಗಳ ಗುಂಡಿ ಮುಚ್ಚಲು ಸರ್ಕಾರದ ಬಳಿ ಹಣವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಎಲ್ಲ ಭಾಗದ ರಸ್ತೆಗಳಲ್ಲಿಯೂ ಗುಂಡಿಗಳು ಮಾಮೂಲಿ ಎನ್ನುವಂತಾಗಿದೆ. ಭಾರೀ ಗುಂಡಿಗಳಿಂದಾಗಿ ಪ್ರತಿದಿನ ಅಪಘಾತಗಳು ಸಾಮಾನ್ಯ ವಾಗಿದ್ದು, ಜನ ಜೀವ ಕಳೆದುಕೊಳ್ಳುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಪ್ರತಿಭಟನಾಕಾರರನ್ನು ಉದ್ದೇಶಿಸಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಶೆಟ್ಟಿ ಮಾತನಾಡಿ, ರಾಜ್ಯದ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಶೃಂಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳು ಸಂಪೂರ್ಣವಾಗಿ ಗುಂಡಿಮಯವಾಗಿವೆ. ದೇಶದ ವಿವಿಧ ಭಾಗಗಳಿಂದ ಇಲ್ಲಿಗೆ ಆಗಮಿಸುವ ಭಕ್ತರು ರಸ್ತೆ ಗುಂಡಿಗಳಿಂದ ಸಮಸ್ಯೆ ಎದುರಿಸುವಂತಾಗಿದೆ. ಚಿಕ್ಕಮಗಳೂರು ಮಾರ್ಗವಾಗಿ ಶೃಂಗೇರಿಗೆ ಬರುವ ಭಕ್ತರು ವಸ್ತಾರೆ ದಾಟುತ್ತಿದ್ದಂತೆ ರಸ್ತೆ ಸ್ಥಿತಿ ಕಂಡು ವಾಪಸ್ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ಶೃಂಗೇರಿ ಕ್ಷೇತ್ರದ ಶಾಸಕರು ಕ್ಷೇತ್ರಕ್ಕೆ ನೂರಾರು ಕೋಟಿ ಅನುದಾನ ತಂದಿದ್ದೇನೆ ಎನ್ನುತ್ತಾರೆ. ಆದರೆ, ಕ್ಷೇತ್ರದ ಯಾವುದೇ ಭಾಗದಲ್ಲಿಯೂ ಅಭಿವೃದ್ಧಿ ಕಾಮಗಾರಿಗಳು ಕಾಣುವುದಿಲ್ಲ. ಸುಳ್ಳು ಹೇಳುವುದನ್ನು ನಿಲ್ಲಿಸಿ ಮೊದಲು ಕ್ಷೇತ್ರದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕಂದಾಯ ಭೂಮಿಗಳನ್ನು ಅರಣ್ಯ ಇಲಾಖೆ ವ್ಯಾಪ್ತಿಗೆ ಸೇರಿಸಲಾಗಿದೆ. ಹೀಗಾಗಿ ಗ್ರಾಮೀಣ ಮಟ್ಟದಲ್ಲಿ ಸಾರ್ವಜನಿಕ ಉಪಯೋಗಕ್ಕೂ ಸರ್ಕಾರಿ ಭೂಮಿ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇದರ ನಡುವೆ ರೈತರು ಉಳುಮೆ ಮಾಡುತ್ತಿರುವ ಜಮೀನುಗಳನ್ನು ಇದೀಗ ಎಸ್‌ಐಟಿ ರಚನೆ ಮಾಡುವ ಮೂಲಕ ಅರಣ್ಯ ಎಂದು ಘೋಷಣೆ ಮಾಡುವ ಹುನ್ನಾರ ನಡೆಯುತ್ತಿದೆ ಎಂದು ದೂರಿದರು.
ಭೂಮಿ ಮಂಜೂರಾತಿ ಇಲ್ಲ:ರೈತರು ಅರಣ್ಯ ಹಕ್ಕು ಕಾಯ್ದೆಯಡಿ ಅರ್ಜಿ ನಮೂನೆ 50, 53, 57 ರಲ್ಲಿ ಭೂ ಮಂಜೂರಾತಿಗೆ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಆದರೆ, ರಾಜ್ಯ ಸರ್ಕಾರ ಇಲ್ಲ ಸಲ್ಲದ ಸಬೂಬು ಹೇಳುವ ಮೂಲಕ ರೈತರಿಗೆ ಜಮೀನು ಮಂಜೂರು ಮಾಡುತ್ತಿಲ್ಲ ಎಂದು ಸುಧಾಕರ ಶೆಟ್ಟಿ ದೂರಿದರು.
-