ಧಾರವಾಡ: ಬರೀ ಗ್ಯಾರಂಟಿ ಯೋಜನೆಗೆ ಹಣ ಹೊಂದಿಸುವುದು ಹಾಗೂ ಅದಕ್ಕಾಗಿಯೇ ಸಮಯ ಕಳೆಯುತ್ತಿರುವ ರಾಜ್ಯ ಸರ್ಕಾರ ರೈತರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಈ ಬಾರಿ ಉತ್ತಮ ಮಳೆ ಇದ್ದು, ಹೆಚ್ಚಿನ ಬಿತ್ತನೆಯಾಗಲಿದೆ ಎಂದು ಗೊತ್ತಿದ್ದರೂ ರಸಗೊಬ್ಬರ ಸಿದ್ಧತೆ ಮಾಡಿಕೊಳ್ಳದೇ ನಿರ್ಲಕ್ಷ್ಯ ಮಾಡಿದ್ದು, ಇದೀಗ ರೈತರು ಯೂರಿಯಾ ಗೊಬ್ಬರಕ್ಕೆ ಪರದಾಡುತ್ತಿದೆ ಎಂದು ಜೆಡಿಎಸ್ ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ಆರೋಪಿಸಿದರು.
ಇನ್ನು, ಜಿಲ್ಲಾ ಉಸ್ತುವಾರಿ ಸಚಿವರು ಹದಿನೈದು ದಿನಗಳಿಗೊಮ್ಮೆ ಧಾರವಾಡಕ್ಕೆ ಬಂದು ಸರ್ಕಾರದ ಎಲ್ಲ ಇಲಾಖೆಗಳ ಅಧಿಕಾರಿಗಳ ಗುಂಪು ಕಟ್ಟಿಕೊಂಡು ಅತ್ತಿಂದಿತ್ತ ಅಲೆದಾಡುತ್ತಾರೆ. ಹತ್ತಾರು ಸಭೆ ಮಾಡಿಯೂ ಜಿಲ್ಲೆಯ ಅಭಿವೃದ್ಧಿ ಶೂನ್ಯ. ಒಂದೂ ರಸ್ತೆ ಸರಿಯಿಲ್ಲ. ಆರೇಳು ದಿನಗಳಿಗೊಮ್ಮೆ ಕುಡಿಯುವ ನೀರು ಬರುತ್ತಿದೆ. ಸರಿಯಾಗಿ ಬೆಳೆವಿಮೆ ಬಂದಿಲ್ಲ, ಬೆಳೆಹಾನಿಗೆ ಪರಿಹಾರವೂ ಬಂದಿಲ್ಲ. ಸರ್ಕಾರಿ ಇಲಾಖೆ ಅಧಿಕಾರಿಗಳು ಸರಿಯಾಗಿ ಕಚೇರಿಯಲ್ಲಿ ಜನಸಾಮಾನ್ಯರಿಗೆ ಲಭ್ಯವಾಗುತ್ತಿಲ್ಲ. ಆಡಳಿತದ ಮೇಲೆ ಹಿಡಿತ ಇಲ್ಲದಂತಾಗಿದೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾರುತಿ ಹಿಂಡಸಗೇರಿ, ಭೀಮರಾಜ ಗುಡೇನಕಟ್ಟಿ ಇದ್ದರು.