ರಾಜ್ಯ ಸರ್ಕಾರ ಹಿಂದುಳಿದ ವರ್ಗ, ರೈತ ವಿರೋಧಿ: ಸಂಸದ ಬಸವರಾಜ ಬೊಮ್ಮಾಯಿ

KannadaprabhaNewsNetwork |  
Published : Nov 23, 2025, 03:00 AM IST
22ಎಂಡಿಜಿ1, ಮುಂಡರಗಿ ಪಟ್ಟಣದ ಅನ್ನದಾನೀಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿದ ಮುಂಡರಗಿ ಮಂಡಲದ ಬಿಜೆಪಿ ಕಾರ್ಯಕರ್ತರ  ಸಭೆಯನ್ನು ಉದ್ಘಾಟಿಸಿ ಮಾಜಿ ಮುಖ್ಯೆಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿದರು.  | Kannada Prabha

ಸಾರಾಂಶ

ಈ ಹಿಂದೆ ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ₹25 ಸಾವಿರಗಳಲ್ಲಿ ರೈತರಿಗೆ ಟಿಸಿಗಳನ್ನು ನೀಡಲಾಗುತ್ತಿತ್ತು. ಇಂದಿನ ಕಾಂಗ್ರೆಸ್ ಸರ್ಕಾರ ₹2.5 ಲಕ್ಷದಿಂದ ₹3 ಲಕ್ಷದವರೆಗೆ ಏರಿಸಿದ್ದಾರೆ ಎಂದು ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಮುಂಡರಗಿ: ಈ ಹಿಂದೆ ತಾವು ಮುಖ್ಯಮಂತ್ರಿಯಾಗಿದ್ದಾಗ ಎಸ್ಸಿಎಸ್ಟಿ ಜನಾಂಗಕ್ಕೆ ಹೆಚ್ಚಿನ ಹಣ ಖರ್ಚು ಮಾಡಲಾಗಿತ್ತು. ರೈತರ ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುವಂತೆ ವಿದ್ಯಾರ್ಥಿವೇತನ ನೀಡಲಾಗಿತ್ತು. ಅದನ್ನು ನಿಲ್ಲಿಸಿದ್ದಾರೆ. ರೈತರ ಬೀಜ, ಗೊಬ್ಬರಕ್ಕಾಗಿ ₹10 ಸಾವಿರ ಹಣ ನೀಡಲಾಗುತ್ತಿತ್ತು. ಅದನ್ನು ನಿಲ್ಲಿಸಲಾಗಿದೆ. ಕಳೆದ ಎರಡೂವರೆ ವರ್ಷಗಳಿಂದ ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಹಾಗೂ ರೈತ ವಿರೋಧಿ ಸರ್ಕಾರ ಅಧಿಕಾರ ನಡೆಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ, ಸಂಸದ ಬಸವರಾಜ ಬೊಮ್ಮಾಯಿ ಆರೋಪಿಸಿದರು.

ಶನಿವಾರ ಪಟ್ಟಣದ ಅನ್ನದಾನೀಶ್ವರ ಕಲ್ಯಾಣಮಂಟಪದಲ್ಲಿ ಬಿಜೆಪಿ ಮುಂಡರಗಿ ಮಂಡಲದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

ಗ್ಯಾರಂಟಿ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ಯಾವುದನ್ನೂ ಸರಿಯಾಗಿ ನೀಡುತ್ತಿಲ್ಲ. ಜನರ ತೆರಿಗೆ ವಸೂಲಾತಿಯಿಂದ ಬಂದ ಹಣವನ್ನು ಜನರಿಗಾಗಿ ಖರ್ಚು ಮಾಡಲು ಯಾವುದೇ ಅಧಿಕಾರ ಬೇಕಾಗಿಲ್ಲ. ಸರ್ಕಾರ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಎನ್ನುವಂತೆ ಜನರ ದುಡ್ಡಿನಲ್ಲಿ ತಮ್ಮ ರಾಜಕೀಯದ ರೊಟ್ಟಿ ಬೇಯಿಸಿಕೊಳ್ಳುವುದಕ್ಕಾಗಿ ಗ್ಯಾರಂಟಿ ಯೋಜನೆ ಜಾರಿಗೆ ತಂದಿದೆ. ಸರ್ಕಾರ ನಡೆಸಲು ಈಗಾಗಲೇ ₹3.50 ಲಕ್ಷ ಕೋಟಿ ಸಾಲವಾಗಿದೆ. ಇವರ ಅಧಿಕಾರ ಪೂರ್ಣಗೊಳ್ಳುವ ಹೊತ್ತಿಗೆ ₹6 ಲಕ್ಷ ಕೋಟಿ ಸಾಲ ಆಗುತ್ತದೆ ಎಂದರು.

ಈ ಹಿಂದೆ ನಮ್ಮ ಬಿಜೆಪಿ ಸರ್ಕಾರದ ಅವಧಿಯಲ್ಲಿ ₹25 ಸಾವಿರಗಳಲ್ಲಿ ರೈತರಿಗೆ ಟಿಸಿಗಳನ್ನು ನೀಡಲಾಗುತ್ತಿತ್ತು. ಇಂದಿನ ಕಾಂಗ್ರೆಸ್ ಸರ್ಕಾರ ₹2.5 ಲಕ್ಷದಿಂದ ₹3 ಲಕ್ಷದವರೆಗೆ ಏರಿಸಿದ್ದಾರೆ. ಈ ಭಾಗದ ಸಿಂಗಟಾಲೂರು ಏತನೀರಾವರಿ ಯೋಜನೆಯ ಪೂರ್ಣಗೊಳಿಸುವ ಬಗ್ಗೆ ಸರ್ಕಾರಕ್ಕಾಗಲಿ, ಜಿಲ್ಲಾ ಉಸ್ತುವಾರಿ ಸಚಿವರಿಗಾಗಿ ಕಾಳಜಿ ಇಲ್ಲ. ₹42 ಸಾವಿರ ಕೋಟಿ ಎಸ್‌ಎಸ್‌ಸಿ, ಟಿಎಸ್‌ಪಿ ಅನುದಾನ ದುರ್ಬಳಕೆಯಾಗಿದೆ ಎಂದರು.

ಶಾಸಕ ಡಾ. ಚಂದ್ರು ಲಮಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ರಾಜ್ಯಾದ್ಯಂತ ಎಲ್ಲ ಶಾಸಕರ ಕ್ಷೇತ್ರಕ್ಕೂ ಅಭಿವೃದ್ಧಿಗೆ ಅನುದಾನ ನೀಡದಷ್ಟು ಸರ್ಕಾರ ದಿವಾಳಿಯಾಗಿದೆ. ರೈತರ ಕಬ್ಬಿಗೆ ಬೆಂಬಲ ಬೆಲೆ ಇಲ್ಲ, ಮೆಕ್ಕೆಜೋಳಕ್ಕೆ ಖರೀದಿ ಕೇಂದ್ರ ತೆರೆಯುವುದು ಸೇರಿದಂತೆ ಎಲ್ಲವೂ ವಿಳಂಬವಾಗುತ್ತಿವೆ. ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜಾಲವಾಡಗಿ ಏತ ನೀರಾವರಿ ರೈತರ ಕೆರೆಗಳನ್ನು ತುಂಬಿಸುವ ಯೋಜನೆಗಾಗಿ ₹192 ಕೋಟಿ ಹಣವನ್ನು ಮೀಸಲಿಡಲಾಗಿತ್ತು. ಕಾಂಗ್ರೆಸ್ ಸರ್ಕಾರ ಆ ಹಣವನ್ನು ಬೇರೆ ಕೆಲಸಕ್ಕೆ ಖರ್ಚು ಮಾಡಿದೆ ಎಂದರು.

ಬಿಜೆಪಿ ಮುಖಂಡ ಕೊಟ್ರೇಶ ಅಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಸಂಸದರನ್ನು ಮುಂಡರಗಿ ಜನತೆಯ ಪರವಾಗಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕೆಸಿಸಿ ಬ್ಯಾಂಕ್ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ, ಕೆಎಂಎಫ್‌ ನಿರ್ದೇಶಕ ಲಿಂಗರಾಜಗೌಡ ಪಾಟೀಲ, ಮುಂಡರಾದ ಕರಬಸಪ್ಪ ಹಂಚಿನಾಳ, ಆನಂದಗೌಡ ಪಾಟೀಲ, ಎಸ್.ವಿ. ಪಾಟೀಲ, ಸಣ್ಣೀರಪ್ಪ ಹಳ್ಳೆಪ್ಪನವರ, ಶಿವಪ್ರಕಾಶ ಮಹಾಜನಶೆಟ್ಟೆ, ರಜನೀಕಾಂತ ದೇಸಾಯಿ, ಬಸವರಾಜ ಬಿಳಿಮಗ್ಗದ, ಪ್ರಶಾಂತ ಗುಡದಪ್ಪನವರ, ಶಿವಕುಮಾರ ಕುರಿ, ಮೈಲಾರಪ್ಪ ಕಲಕೆರಿ, ಪವಿತ್ರಾ ಕಲ್ಲಕುಟಗರ್, ಈಶಪ್ಪ ರಂಗಾಪೂರ, ಚಿನ್ನಪ್ಪ ವಡ್ಡಟ್ಟಿ, ಶಿವನಗೌಡ ಗೌಡ್ರ, ಮಲ್ಲಿಕಾರ್ಜುನ ಹಣಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪವನ್ ಮೇಟಿ ನಿರೂಪಿಸಿ, ವಂದಿಸಿದರು. .

PREV

Recommended Stories

ಸಾಮಾಜಿಕ ಸಮಸ್ಯೆ ಬಗ್ಗೆ ಕವಿತೆ ಮೂಡಿ ಬರಲಿ
ವಿವಾಹ ವಿಚ್ಛೇದನದಿಂದ ಕುಟುಂಬ ವ್ಯವಸ್ಥೆಯ ಮೇಲೆ ಪೆಟ್ಟು: ಸ್ವರ್ಣವಲ್ಲೀ ಶ್ರೀ