ಒಳಮೀಸಲಾತಿ ಸೌಲಭ್ಯ ನೀಡದೇ ರಾಜ್ಯ ಸರ್ಕಾರ ವಂಚನೆ: ಭಾಸ್ಕರ್ ಪ್ರಸಾದ್

KannadaprabhaNewsNetwork | Published : May 21, 2025 2:01 AM
ಸುಪ್ರೀಂ ಕೋರ್ಟ್ ಒಳಮೀಸಲಾತಿ ಸೌಲಭ್ಯ ನೀಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಿದ ತಕ್ಷಣ ತೆಲಂಗಾಣ ಮತ್ತು ಆಂಧ್ರ ಪ್ರದೇಶ ಸರ್ಕಾರಗಳು ಒಳಮೀಸಲಾತಿ ಜಾರಿಗೆ ತಂದವು. ಆದರೆ, ಕರ್ನಾಟಕದಲ್ಲಿ ಮಾತ್ರ ಒಳ ಮೀಸಲಾತಿ ಜಾರಿಗೆ ಬಂದಿಲ್ಲ. ಇದು ರಾಜ್ಯ ಸರ್ಕಾರ ದಲಿತರ ಮೇಲೆ ನಡೆಸುತ್ತಿರುವ ದಬ್ಬಾಳಿಕೆಯಾಗಿದೆ ಎಂದು ದಲಿತ ಸಂಘಟನೆ ಮುಖಂಡ ಬಿ.ಆರ್. ಭಾಸ್ಕರ್ ಪ್ರಸಾದ್ ಹೇಳಿದ್ದಾರೆ.
Follow Us

- ಜೂ.9ರೊಳಗೆ ಬಡ್ತಿ, ನೇಮಕಾತಿ ರದ್ದುಪಡಿಸಲು ಒತ್ತಾಯ

- - -

ಚನ್ನಗಿರಿ: ಸುಪ್ರೀಂ ಕೋರ್ಟ್ ಒಳಮೀಸಲಾತಿ ಸೌಲಭ್ಯ ನೀಡಲು ರಾಜ್ಯ ಸರ್ಕಾರಗಳಿಗೆ ಅಧಿಕಾರ ನೀಡಿದ ತಕ್ಷಣ ತೆಲಂಗಾಣ ಮತ್ತು ಆಂಧ್ರ ಪ್ರದೇಶ ಸರ್ಕಾರಗಳು ಒಳಮೀಸಲಾತಿ ಜಾರಿಗೆ ತಂದವು. ಆದರೆ, ಕರ್ನಾಟಕದಲ್ಲಿ ಮಾತ್ರ ಒಳ ಮೀಸಲಾತಿ ಜಾರಿಗೆ ಬಂದಿಲ್ಲ. ಇದು ರಾಜ್ಯ ಸರ್ಕಾರ ದಲಿತರ ಮೇಲೆ ನಡೆಸುತ್ತಿರುವ ದಬ್ಬಾಳಿಕೆಯಾಗಿದೆ ಎಂದು ದಲಿತ ಸಂಘಟನೆ ಮುಖಂಡ ಬಿ.ಆರ್. ಭಾಸ್ಕರ್ ಪ್ರಸಾದ್ ಹೇಳಿದರು.

ಪಟ್ಟಣದ ಗಾಂಧಿ ವೃತ್ತದಲ್ಲಿ ಮಂಗಳವಾರ ಕ್ರಾಂತಿಕಾರಿ ರಥಯಾತ್ರೆ ನೇತೃತ್ವವನ್ನು ವಹಿಸಿ ಅವರು ಮಾತನಾಡಿದರು. ಮಾದಿಗ ಸಮಾಜಕ್ಕೆ ಅನ್ಯಾಯ ಖಂಡಿಸಿ ಜೂ.9ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಸರ್ಕಾರವನ್ನು ಎಚ್ಚರಿಸಲಾಗುವುದು. ಈ ಪ್ರತಿಭಟನೆಗೆ ಸಮಾಜದ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.

ಒಳಮೀಸಲಾತಿ ವಿರೋಧಿಗಳಲ್ಲಿ ಎಚ್.ಸಿ. ಮಹಾದೇವಪ್ಪ, ಪ್ರಿಯಾಂಕ ಖರ್ಗೆ, ಡಾ. ಜಿ.ಪರಮೇಶ್ವರ್, ಕೆ.ಎಚ್. ಮುನಿಯಪ್ಪ, ಆರ್.ಬಿ. ತಿಮ್ಮಪ್ಪ ಪ್ರಮುಖರಾಗಿದ್ದಾರೆ. ಒಳಮೀಸಲಾತಿ ಜಾರಿಯಾದರೆ ತಮ್ಮ ರಾಜಕೀಯದ ಬೇಳೆ ಬೇಯುವುದಿಲ್ಲ ಎಂದು ಅವರು ಒಳ ಮೀಸಲಾತಿ ಜಾರಿಗೆ ವಿರೋಧ ಮಾಡುತ್ತಿದ್ದಾರೆ ಎಂದರು.

80 ದಿನಗಳಿಂದ ಪ್ರೊ. ಬಿ.ಕೃಷ್ಣಪ್ಪ ಅವರ ಸಮಾಧಿ ಸ್ಥಳದಿಂದ ಬೆಂಗಳೂರಿನವರೆಗೆ ಕಾಲ್ನಡಿಗೆ ಜಾಥಾ, 17 ದಿನಗಳ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗಿದೆ. ಚಾಮರಾಜನಗರದಿಂದ ಪ್ರಾರಂಭವಾದ ಈ ರಥಯಾತ್ರೆ ಈಗ ಚನ್ನಗಿರಿ ತಲುಪಿದೆ ಎಂದರು.

ಏ.5ರಂದು ನಡೆದ ಬಾಬು ಜಗಜೀವನರಾಂ ಜಯಂತಿಯಂದು ಸಿಎಂ ಒಳಮೀಸಲಾತಿ ಜಾರಿ ಮಾಡುತ್ತೇವೆ, ಅಲ್ಲಿಯವರೆಗೂ ಯಾವುದೇ ಹೊಸ ನೇಮಕಾತಿ, ಪ್ರಮೋಷನ್ ಕೊಡುವುದಿಲ್ಲ, ಒಂದುವೇಳೆ ಕೊಟ್ಟಿದ್ದರು ಅದನ್ನು ರದ್ದುಪಡಿಸುತ್ತೇವೆ ಎಂದಿದ್ದರು. ಆದರೆ, ಪ್ರಮೋಷನ್ ಕೊಡುತ್ತಲೇ ಇದ್ದಾರೆ. ಇಂತಹ ನಂಬಿಕೆದ್ರೋಹಿ ಮುಖ್ಯಮಂತ್ರಿಗೆ ನಾಚಿಕೆಯಾಗಬೇಕು ಎಂದು ಟೀಕಿಸಿದರು.

ಜೂನ್ 9ನೇ ತಾರೀಖಿನ ಒಳಗೆ ಬಡ್ತಿ ಮತ್ತು ನೇಮಕಾತಿ ರದ್ದುಪಡಿಸಿ ಒಳಮೀಸಲಾತಿ ಜಾರಿಗೊಳಿಸಬೇಕು. ಇಲ್ಲದಿದ್ದರೆ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳಲ್ಲಿ ತಕ್ಕ ಉತ್ತರ ನೀಡಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭ ದಲಿತ ಸಂಘಟನೆ ಪ್ರಮುಖರಾದ ಸಿ.ಬಸವರಾಜ್, ಹೆಗ್ಗೆರೆ ರಂಗಪ್ಪ, ರಘು, ಮರಿಯಪ್ಪ, ಪುಟ್ಟಪ್ಪ, ಮಾಚನಾಯ್ಕನಹಳ್ಳಿ ಮಂಜುನಾಥ್, ಆನಂದ್, ಪಾಂಡೋಮಟ್ಟಿ ಪ್ರಭಾಕರ್. ರುದ್ರಪ್ಪ ಮಾಸ್ಟರ್, ಚಿಕ್ಕೂಲಿಕೆರೆ ಶಿವಲಿಂಗಪ್ಪ,. ನಲ್ಲೂರು ಶೇಖರಪ್ಪ, ಶಿವಣ್ಣ ಸೇರಿದಂತೆ ಮೊದಲಾದವರು ಹಾಜರಿದ್ದರು.

- - -

-20ಕೆಸಿಎನ್ಜಿ1.ಜೆಪಿಜಿ:

ಚನ್ನಗಿರಿ ಪಟ್ಟಣದ ಗಾಂಧಿ ವೃತ್ತದಲ್ಲಿ ಕ್ರಾಂತಿಕಾರಿ ರಥಯಾತ್ರೆಯಲ್ಲಿ ದಲಿತ ಮುಖಂಡ ಬಿ.ಆರ್.ಭಾಸ್ಕರ್ ಪ್ರಸಾದ್ ಮಾತನಾಡಿದರು.