ಕನ್ನಡಪ್ರಭ ವಾರ್ತೆ, ತುರುವೇಕೆರೆ
ದುಡಿಯುವ ವರ್ಗದ ನೌಕರರಿಗೆ ನಿರ್ದಿಷ್ಟ ಸಂಬಳ ನೀಡದೆ ಕಡೆಗಣಿಸಿರುವ ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಯ ಅಧ್ಯಕ್ಷರುಗಳಿಗೆ ಕೋಟ್ಯಾಂತರ ಸಂಬಳ ನೀಡುತ್ತಿದೆ ಎಂದು ಶಾಸಕ ಎಂ.ಟಿ.ಕೃಷ್ಣಪ್ಪ ಕಿಡಿಕಾರಿದರು. ಪಟ್ಟಣದ ಚೌದ್ರಿ ಕನ್ವೇಷನ್ ಹಾಲ್‌ನಲ್ಲಿ ಜಿಲ್ಲಾ ಪಂಚಾಯಿತಿ, ಮಹಿಳಾ ಮಕ್ಕಳ ಅಭಿವೃದ್ದಿ ಇಲಾಖೆ, ತಾಲೂಕು ಆಡಳಿತ, ಅಂಗನವಾಡಿ ಕಾರ್ಯಕರ್ತೆ ಹಾಗೂ ಸಹಾಯಕಿಯರ ನೌಕರರ ಸಂಘ, ತಾಲೂಕು ಸ್ತ್ರೀ ಶಕ್ತಿ ಒಕ್ಕೂಟ, ಮಹಿಳಾ ಪೂರಕ ಪೌಷ್ಟಿಕ ಆಹಾರ ಉತ್ಪಾದನೆ ಮತ್ತು ತರಬೇತಿ ಕೇಂದ್ರ ಹಾಗೂ ಶಿಶು ಅಭಿವೃದ್ದಿ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತರಿಗೆ ನಿರ್ದಿಷ್ಟ ವೇತನ ನೀಡಬೇಕು ಎಂದು ವಿಧಾನಸಭೆ ಅಧಿವೇಶನದಲ್ಲಿ ಮಾತನಾಡಿ ಸರ್ಕಾರವನ್ನು ಒತ್ತಾಯಿಸಿದ್ದೇನೆ. ಆದರೆ ಈ ಬಂಡ ಸರ್ಕಾರ ರಾಜ್ಯದ ಜನರ ತೆರಿಗೆ ಹಣವನ್ನು ವ್ಯಯ ಮಾಡಿ ಕಾಂಗ್ರೆಸ್ ಕಾರ್ಯಕರ್ತರಿಗೆ ನೀಡುತ್ತಿದೆ. ಕೂಡಲೇ ನಿಲ್ಲಿಸಿ ಶ್ರಮಿಕ ವರ್ಗದ ನೌಕರರಿಗೆ ನೀಡಬೇಕು ಎಂದು ಒತ್ತಾಯಿಸಿದರು.ಶಾಸಕ ಎಂ.ಟಿ.ಕೃಷ್ಣಪ್ಪನವರು ಸ್ರೀರೋಗ ಮತ್ತು ಪಸೂತಿ ತಜ್ಞೆಯಾಗಿರುವ ತಮ್ಮ ಮಗಳು ಡಾ.ಆಶಾಚೌದ್ರಿಯವರಿಗೆ ಗೌರವ ಸಮರ್ಪಣೆ ಮಾಡಿದರು. ಸಾಧಕಿಯರಾದ ಸಮಾಜ ಸೇವಕಿ ಮಧುಶ್ರೀ, ಪೊಲೀಸ್ ಇಲಾಖೆಯ ಶಮೀನಾ, ಅಂಗನವಾಡಿ ಕೇಂದ್ರದ ನಿವೃತ್ತ ಮೇಲ್ವಿಚಾರಕಿಯರಾದ ಇಂದಿರಾ, ರಂಗಮಣಿ, ಲಕ್ಷ್ಮೀ, ಹಾವು ಕಡಿತಕ್ಕೆ ಔಷಧಿ ನೀಡುವ ರೆಹನಾ ಬೇಗಂ, ಸಮಾಜ ಸೇವಕಿ ಕು.ಲತಾ, ಹರಿಕಥೆ ವಿಧೂಷಿ ಗೌರಮ್ಮ ರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸ್ವಪ್ನನಟೇಶ್ ಉಪಾಧ್ಯಕ್ಷೆ ಕೆ.ಭಾಗ್ಯ, ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಡಾ.ನವೀನ್ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಅಧ್ಯಕ್ಷ ಡಿ.ಪಿ.ರಾಜು, ಕಾರ್ಮಿಕರ ಸಂಘದ ತಾಲೂಕು ಅಧ್ಯಕ್ಷ ಸತೀಶ್, ಉಪಾಧ್ಯಕ್ಷೆ ಜಯಮ್ಮ, ಉಪನ್ಯಾಸಕಿ ರೂಪಶ್ರೀ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ದುಂಡಾ, ಕುವೆಂಪು ವೇದಿಕೆ ಅಧ್ಯಕ್ಷ ವೆಂಕಟೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ವೆಂಕಟಪ್ಪ, ಮುಖಂಡರಾದ ಹೆಡಗಿಹಳ್ಳಿ ವಿಶ್ವನಾಥ್, ವೆಂಕಟಾಪುರ ಯೋಗೀಶ್ ಸೇರಿದಂತೆ ಇಲಾಖಾ ಅಧಿಕಾರಿಗಳು, ಅಂಗನವಾಡಿ ನೌಕರರು ಇದ್ದರು.