ವೈದ್ಯರು, ಸಿಬ್ಬಂದಿ ವೇತನ ಬಿಡುಗಡೆ : ಕನ್ನಡಪ್ರಭದಲ್ಲಿ ಪ್ರಕಟಗೊಂಡಿದ್ದ ವರದಿಗೆ ಸ್ಪಂದಿಸಿದ ಸರ್ಕಾರ

KannadaprabhaNewsNetwork |  
Published : Mar 11, 2025, 12:52 AM ISTUpdated : Mar 11, 2025, 12:38 PM IST
ಜಿಲ್ಲಾಧಿಕಾರಿಗಳಿಗೆ ಡಿಎಚ್‌ಓ ಬರೆದಿದ್ದ ಪತ್ರ. | Kannada Prabha

ಸಾರಾಂಶ

ವರ್ಷವಾದರೂ ವೈದ್ಯರಿಗಿಲ್ಲ ಪಗಾರ ! ಶೀರ್ಷಿಕೆಯಡಿ, ಕನ್ನಡಪ್ರಭದಲ್ಲಿ ಪ್ರಕಟಗೊಂಡಿದ್ದ ವರದಿಗೆ ಸ್ಪಂದಿಸಿದ ಸರ್ಕಾರ, ಗ್ರಾಮೀಣ ಪ್ರದೇಶಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲಿನ 20ಕ್ಕೂ ಹೆಚ್ಚು ತಜ್ಞವೈದ್ಯರು ಸೇರಿದಂತೆ 126 ವಿವಿಧ ಸಿಬ್ಬಂದಿ ಸೋಮವಾರ, ಬಾಕಿಯಿದ್ದ 5.25 ಕೋಟಿ ರು. ವೇತನ ಬಿಡುಗಡೆ ಮಾಡಿದೆ.

 ಯಾದಗಿರಿ : ವರ್ಷವಾದರೂ ವೈದ್ಯರಿಗಿಲ್ಲ ಪಗಾರ ! ಶೀರ್ಷಿಕೆಯಡಿ, ಕನ್ನಡಪ್ರಭದಲ್ಲಿ ಪ್ರಕಟಗೊಂಡಿದ್ದ ವರದಿಗೆ ಸ್ಪಂದಿಸಿದ ಸರ್ಕಾರ, ಗ್ರಾಮೀಣ ಪ್ರದೇಶಗಳಲ್ಲಿ ಹೊರಗುತ್ತಿಗೆ ಆಧಾರದ ಮೇಲಿನ 20ಕ್ಕೂ ಹೆಚ್ಚು ತಜ್ಞವೈದ್ಯರು ಸೇರಿದಂತೆ 126 ವಿವಿಧ ಸಿಬ್ಬಂದಿ ಸೋಮವಾರ, ಬಾಕಿಯಿದ್ದ 5.25 ಕೋಟಿ ರು. ವೇತನ ಬಿಡುಗಡೆ ಮಾಡಿದೆ.

ಕನ್ನಡಪ್ರಭ ವರದಿ ಉಲ್ಲೇಖಿಸಿ, ಆರೋಗ್ಯ ಇಲಾಖೆಗೆ ಜಿಲ್ಲಾಧಿಕಾರಿ ಡಾ. ಸುಶೀಲಾ ಪತ್ರ ಬರೆದ ಹಿನ್ನೆಲೆ, ಇಲಾಖೆಯ ಮೇಲಧಿಕಾರಿಗಳಿಗೆ ವಿಷಯ ತಿಳಿಸಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು ಹಣ ಬಿಡುಗಡೆ ಕೋರಿದ್ದರು. ವೈದ್ಯರ ವೇತನ ವಿಳಂಬ ಹಿನ್ನೆಲೆ, ಅನೇಕ ತಜ್ಞವೈದ್ಯರು ಹುದ್ದೆಗೆ ರಾಜೀನಾಮೆ ನೀಡುವ ಚಿಂತನೆ ನಡೆಸಿದ್ದರು.

ಈ ಕುರಿತು ಸೋಮವಾರ ಸಂಜೆ ತಮ್ಮನ್ನು ಸಂಪರ್ಕಿಸಿದ ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಮಹೇಶ ಬಿರಾದರ್‌, 126 ಸಿಬ್ಬಂದಿಗೆ ಬಾಕಿಯಿದ್ದ 5.25 ಕೋಟಿ ರು. ವೇತನ ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ಕೆಡಿಪಿ ಸಭೆಯಲ್ಲೂ ವೇತನ ಬಾರದ ಕುರಿತು ಗಂಭೀರವಾಗಿ ಪ್ರಸ್ತಾಪಿಸಿದ್ದ ಶಾಸಕ ಶರಣಗೌಡ ಕಂದಕೂರ, ಬೇಸರ ವ್ಯಕ್ತಪಡಿಸಿದ್ದರು.

ವೈದ್ಯರಿಗೆ 2 ಲಕ್ಷ ರು. ವೇತನ ಕೊಟ್ಟರೂ ಹಳ್ಳಿಗಳಿಗೆ ಅವರು ಬರಲು ಒಪ್ಪುತ್ತಿಲ್ಲ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಈ ಹಿಂದೆ ಅಧಿವೇಶನದಲ್ಲಿ ಸದಸ್ಯ ಡಾ. ಎಂ.ಜಿ. ಮುಳೆ ಅವರ ಪ್ರಶ್ನೆಗೆ ಉತ್ತರಿಸಿದ್ದರು. ಆದರೆ, ಯಾದಗಿರಿ ಜಿಲ್ಲೆ ಸೇರಿದಂತೆ 14ಜಿಲ್ಲೆಗಳಲ್ಲಿ ಒಂದು ವರ್ಷವಾದರೂ ವೈದ್ಯರ ವೇತನ ಪಾವತಿಯಾಗದಿರುವುದು ಚರ್ಚೆಗೆ ಗ್ರಾಸವಾಗಿತ್ತು.

ಈ ಕಾರಣಗಳಿಂದ ತಜ್ಞ ವೈದ್ಯರು ಗ್ರಾಮೀಣ ಹಾಗೂ ದೂರದ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ಮುಂದೆ ಬರಲು ಹಿಂದೇಟು ಹಾಕುತ್ತಿದ್ದಾರೆ ಅನ್ನೋ ಮಾತುಗಳು ವೈದ್ಯಲೋಕದಿಂದ ಕೇಳಿ ಬಂದಿದ್ದವು. ಪ್ರಸ್ತುತ ರಾಜ್ಯ ಸರ್ಕಾರ ತಜ್ಞ ವೈದ್ಯರಿಗೆ ಅನುಭವದ ಆಧಾರದ ಮೇಲೆ 1.20ಲಕ್ಷ ರು.ಗಳಿಂದ 2ಲಕ್ಷ ರು.ಗಳ ವರೆಗೆ ವೇತನ ನೀಡುತ್ತಿದೆ. ಆದರೂ, ಸೇವೆ ಸಲ್ಲಿಸಲು ಆಸಕ್ತಿ ತೋರುತ್ತಿಲ್ಲ, ಹೀಗಾಗಿ ಹೆಚ್ಚಿನ ವೇತನ ನೀಡಲು ಕೈಜೋಡಿಸುವಂತೆ ಕೇಂದ್ರಕ್ಕೆ ಕೋರಲಾಗಿದೆ ಎಂದು ಸಚಿವ ದಿನೇಶ ಗುಂಡೂರಾವ್ ಉತ್ತರಿಸಿದ್ದರು.

15 ತಿಂಗಳುಗಳಿಂದ ಸಿಗದಿದ್ದ ವೇತನ ಬಿಡುಗಡೆಯಾಗಿದೆ. ನಾವು ತಜ್ಞವೈದ್ಯರು ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸುತ್ತಿದ್ದೇವೆ. ಆರ್ಥಿಕ ಸ್ಥಿತಿಗತಿ ಸಂಕಷ್ಟದಲ್ಲೂ, ಸೇವೆ ಮುಂದುವರೆಸಿದ್ದೆವು. ವೇತನ ಬಾರದೆ ಇದ್ದುದರಿಂದ ರಾಜೀನಾಮೆ ಸಲ್ಲಿಸುವ ಚಿಂತನೆ ನಡೆಸಿದ್ದೆವು. ಸರ್ಕಾರ ಸ್ಪಂದಿಸಿದೆ, ಧನ್ಯವಾದ.

- ಹೆಸರೇಳಲಿಚ್ಛಿಸದ ವೈದ್ಯರು. 

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಹುಣಸೆ, ಹಲಸು, ನೇರಳೆಗೆ ಮಂಡಳಿ ರಚಿಸಿ: ದೇವೇಗೌಡ
ಗುಮ್ಮ ಬಂದ ಗುಮ್ಮ, ಮಕ್ಕಳಿಗೆ ಹೊಡೆಯೋ ಗುಮ್ಮ!