ದಲಿತರ ಮನೆ ತೆರವು ವಿರೋಧಿಸಿ ಪ್ರತಿಭಟನೆ

KannadaprabhaNewsNetwork | Published : Mar 11, 2025 12:52 AM

ಸಾರಾಂಶ

ಶೀಘ್ರದಲ್ಲಿ ಚಿಕ್ಕಬಳ್ಳಾಪುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೂ ಮೂರು ಕಿ.ಮೀಗಳವರೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಇದಕ್ಕಾಗಿ ಎಲ್ಲಾ ರೀತಿಯ ರೂಪುರೇಷೆಗಳನ್ನು ಎರಡು-ಮೂರು ದಿನಗಳಲ್ಲಿ ತಯಾರು ಮಾಡಲಾಗುತ್ತಿದೆ. ಸಾಧ್ಯವಾದರೆ ವಾರದೊಳಗೆ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಸಲಾಗುವುದು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ನಗರದ 30ನೇ ವಾರ್ಡಿನ ಅಂಬೇಡ್ಕರ್ ಕಾಲೋನಿಯ ದಲಿತರ ಮನೆಗಳ ತೆರವುಗೊಳಿಸುವ ರೈಲ್ವೆ ಇಲಾಖೆ ಮತ್ತು ಕೇಂದ್ರ ಸರ್ಕಾರದ ವಿರುದ್ಧ ಶೀಘ್ರದಲ್ಲಿಯೇ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಶಾಸಕ ಪ್ರದೀಪ್ ಈಶ್ವರ್ ತಿಳಿಸಿದರು.

ನಗರ ಹೊರವಲಯದ ಮುಸ್ಟೂರು ರಸ್ತೆ ಹಾಗೂ ದಿನ್ನೆಹೊಸಳ್ಳಿ ರಸ್ತೆಗಳ 5 ಕೋಟಿ 40 ಲಕ್ಷ ರುಪಾಯಿಗಳ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿ, ಎರಡು ಟ್ರ್ಯಾಕ್ ರೈಲ್ವೆ ಮಾರ್ಗ ನಿರ್ಮಿಸಲು ಅಲ್ಲಿರುವ ದರಲಿತ ಮನೆಗಳನ್ನು ತೆರವು ಮಾಡಿಸಲು ಬಿಡುವುದಿಲ್ಲ ಎಂದರು.

ವಾರದೊಳಗೆ ಪ್ರತಿಭಟನಾ ರ್‍ಯಾಲಿ

ಶೀಘ್ರದಲ್ಲಿ ಚಿಕ್ಕಬಳ್ಳಾಪುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೂ ಮೂರು ಕಿ.ಮೀಗಳವರೆಗೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಇದಕ್ಕಾಗಿ ಎಲ್ಲಾ ರೀತಿಯ ರೂಪುರೇಷೆಗಳನ್ನು ಎರಡು-ಮೂರು ದಿನಗಳಲ್ಲಿ ತಯಾರು ಮಾಡಲಾಗುತ್ತಿದೆ. ಸಾಧ್ಯವಾದರೆ ವಾರದೊಳಗೆ ಬೃಹತ್ ಪ್ರತಿಭಟನಾ ರ್‍ಯಾಲಿ ನಡೆಸಲಾಗುವುದು ಎಂದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ದಲಿತರಿಗೆ ಹೆಚ್ಚಿನ ಆದ್ಯತೆ ನೀಡಿದೆ. ಅವರ ಬದುಕು ಹಸನಾಗಲು ಹಾಗೂ ಅವರನ್ನು ಮುಖ್ಯ ವಾಹಿನಿಗೆ ತರಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ದಲಿತರಿಗೆ ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಯಾವುದೇ ಕಾರಣಕ್ಕೂ ತೊಂದರೆ ಆಗಲು ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಎಂದರು.

ಶೀಘ್ರದಲ್ಲೇ ರಸ್ತೆ ಅಭಿವೃದ್ಧಿ

ಕಳೆದ 10-15 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಗ್ರಾಮಾಂತರದಿಂದ ನಗರಕ್ಕೆ ಸಂರ್ಪಕಿಸುವ ಮುಸ್ಟೂರು ಹಾಗು ದಿನ್ನೆಹೊಸಹಳ್ಳಿ ರಸ್ತೆಗಳನ್ನು ಅತ್ಯಂತ ವೇಗವಾಗಿ ಅಭಿವೃದ್ಧಿ ಪಡಿಸಲಾಗುತ್ತದೆ. ಈ ಎರಡು ರಸ್ತೆಗಳ ಅಭಿವೃದ್ಧಿಗಾಗಿ 5.5 ಕೋಟಿ ರೂ. ಮಂಜೂರು ಮಾಡಿದ್ದು ಎರಡು ತಿಂಗಳ ಅವಧಿಯಲ್ಲಿ ರಸ್ತೆಯನ್ನು ಪೂರ್ಣಗೊಳಿಸಿ ರಸ್ತೆಗಳ ಗುಣಮಟ್ಟವನ್ನು ಕಾಲಕಾಲಕ್ಕೆ ನೋಡಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಇದೇ ವೇಳೆ ಸೂಚಿಸಲಾಗಿದೆ ಎಂದು ಹೇಳಿದರು. ಈ ಎರಡು ರಸ್ತೆಗಳ ಕಾಮಗಾರಿ ಮುಗಿಯುವವರೆಗೆ ದಿನ್ನೆ ಹೊಸಳ್ಳಿ ಹಾಗೂ ಮುನ್ನೂರು ಗ್ರಾಮಗಳಿಗೆ ಭೇಟಿ ನೀಡಿ ಸಾರ್ವಜನಿಕರ ಸಮಸ್ಯೆಗಳನ್ನು ಹಾಗೂ ಕುಂದು ಕೊರತೆಗಳನ್ನು ಆಲಿಸಿ ಪರಿಹರಿಸಲಾಗುವುದು ಎಂದರು.

ತುಮಕೂರು ಭಾಗದ ಕೆರೆಗಳಿಗೆ ಅನುಕೂಲವಾಗಲು ಎತ್ತಿನಹೊಳೆ ಹರಿಸಲು ಬಜೆಟ್‌ನಲ್ಲಿ ಅನುದಾನ ನೀಡಲಾಗಿದೆ. ಮುಂದಿನ ಹಂತದಲ್ಲಿ ಚಿಕ್ಕಬಳ್ಳಾಪುರಕ್ಕೂ ಸಹ ಎತ್ತಿನ ನೀರು ತರಲು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡುವುದಾಗಿ ತಿಳಿಸಿ, ನನ್ನ ಕ್ಷೇತ್ರದಾದ್ಯಂತ ನಾನು ಶಂಕು ಸ್ಥಾಪನೆ ಮಾಡಿರುವ ಎಲ್ಲಾ ಕಾಮಗಾರಿಗಳನ್ನು ಮಳೆಗಾಲ ಆರಂಭವಾಗುವ ಪೂರ್ಣಗೊಳಿಸುವುದಾಗಿ ಭರವಸೆ ನೀಡಿದರು.

ಹೈಟೆಕ್ ಹೂವಿನ ಮಾರುಕಟ್ಟೆ

ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮಂಡಿಸಿದ ಬಜೆಟ್ ಹಲಾಲ್ ಬಜೆಟ್ ಎಂದು ಟೀಕಿಸುವವರು ಆತ್ಮವಿಮರ್ಶೆ ಮಾಡಿಕೊಳ್ಳಬೇಕು ಮುಸಲ್ಮಾನ ಬಾಂಧವರು ನಮ್ಮ ನಡುವಿನ ಪ್ರಜೆಗಳೇ ಅಲ್ಲವೇ. ಕ್ಷೇತ್ರದ ರೈತಾಪಿ ವರ್ಗಕ್ಕೆ ಅತಿ ಮುಖ್ಯವಾಗಿ ಆಗಬೇಕಾಗಿರುವ ಹೈಟೆಕ್ ಹೂವಿನ ಮಾರುಕಟ್ಟೆಗೆ 1.4 ನಾಲ್ಕು ಕೋಟಿ ಹಣವನ್ನು ಮಂಜೂರು ಮಾಡಿಸಿರುವುದಾಗಿ ತಿಳಿಸಿದ ಅವರು ಅತಿ ಶೀಘ್ರದಲ್ಲೇ ಅತ್ಯಂತ ಸುವ್ಯವಸ್ಥಿತ ಹೂವಿನ ಮಾರುಕಟ್ಟೆ ನಿರ್ಮಾಣ ಆಗಲಿದೆ ಎಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಕೆ.ಸಿ. ರಾಜಕಾಂತ್, ಕೆ.ಎಂ. ಮುನೇಗೌಡ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಜಯರಾಮ್, ನಾಗಭೂಷಣ್,ನಗರಸಭಾ ಸದಸ್ಯರಾದ ಕಣಿತಹಳ್ಳಿವೆಂಕಟೇಶ್, ಅಣ್ಣಮ್ಮ,ವೇಣುಗೋಪಾಲ್ (ಡೈರಿ ಗೋಪಿ), ಸಮ್ಮು, ಮುಖಂಡರುಗಳಾದ ಅರವಿಂದ್ ನಾರಾಯಣಮ್ಮ, ಪೆದ್ದಣ್ಣ, ಡ್ಯಾನ್ಸ್ ಶ್ರೀನಿವಾಸ್, ಜಿ. ಉಮೇಶ್, ವಕೀಲ ನಾಗೇಶ್. ಸ್ವಾಮಿ, ಅಲ್ಲು ಅನಿಲ್, ಮುಸ್ಟೂರು ಶ್ರೀಧರ್, ಶಿವು, ಶಾಹೀದ್, ಮತ್ತಿತರರು ಇದ್ದರು.

Share this article