ಮಂಡ್ಯ ಮಂಜುನಾಥ
ಮಂಡ್ಯ ಜಿಲ್ಲೆಗೂ ಅಭಿವೃದ್ಧಿಗೂ ಬಹಳ ದೂರ. ಅದೇಕೋ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ಪ್ರಗತಿ ದೃಷ್ಟಿಯಿಂದ ಮಂಡ್ಯ ಜಿಲ್ಲೆಯನ್ನು ಮೂಲೆಗೆ ತಳ್ಳುವುದು ಸರ್ವೇ ಸಾಮಾನ್ಯವಾಗಿದೆ. ಸಮರ್ಥ ರಾಜಕೀಯ ನಾಯಕತ್ವದ ಕೊರತೆಯೂ ಇದಕ್ಕೆ ಕಾರಣವೆಂದರೂ ತಪ್ಪಿಲ್ಲ. ಇದರ ನಡುವೆಯೇ ಮತ್ತೊಂದು ರಾಜ್ಯ ಬಜೆಟ್ ಬಂದಿದೆ. ಜಿಲ್ಲೆಗೆ ಏನೇನು ಸಿಗಬಹುದೆಂಬ ಬಗ್ಗೆ ನಿರೀಕ್ಷೆಗಳು ಮತ್ತೆ ಗರಿಗೆದರಿವೆ.
ಕಳೆದ ವರ್ಷದ ಬಜೆಟ್‌ನಲ್ಲಿ ಜಿಲ್ಲೆಗೆ ಪ.ಜಾತಿ, ಪ.ಪಂಗಡ, ಒಬಿಸಿ ಹಾಸ್ಟೆಲ್ ಪಿಯು ಕಾಲೇಜನ್ನಾಗಿ ಉನ್ನತೀಕರಣ, ೨ ಮೆಟ್ರಿಕ್ ನಂತರದ ವಸತಿ ನಿಲಯ ನಿರ್ಮಾಣ, ಶ್ರೀರಂಗಪಟ್ಟಣ ಒಳಚರಂಡಿ ವ್ಯವಸ್ಥೆ, ಮದ್ದೂರಿನಲ್ಲಿ ರಸ್ತೆ ಅಗಲೀಕರಣಕ್ಕೆ ವಿಸ್ತೃತ ಯೋಜನೆ, ೩ ಸಾವಿರ ಹೆಕ್ಟೇರ್‌ನಲ್ಲಿ ಮಣ್ಣು-ನೀರು, ತ್ಯಾಜ್ಯ ನಿರ್ವಹಣೆ, ಕೃಷಿ ವಿವಿ ಮೂಲ ಸೌಕರ್ಯಕ್ಕೆ ೨೫ ಕೋಟಿ ರು. ನೀಡುವುದಾಗಿ ಘೋಷಿಸಲಾಗಿತ್ತು. ಇದರಲ್ಲಿ ಕೃಷಿ ವಿವಿಯ ಕಟ್ಟಡ ಕಾಮಗಾರಿ ನಡೆಯುತ್ತಿರುವುದನ್ನು ಹೊರತುಪಡಿಸಿದರೆ ಉಳಿದ ಯೋಜನೆಗಳೂ ಅನುಷ್ಠಾನಗೊಳ್ಳದಿರುವುದು ಜಿಲ್ಲೆಯ ದೌರ್ಭಾಗ್ಯ.ಕೃಷಿ ವಿಶ್ವವಿದ್ಯಾಲಯದಲ್ಲಿ ೧೮೫೬ ವಿದ್ಯಾರ್ಥಿಗಳು:
ಪ್ರಸ್ತುತ ಕೃಷಿ ವಿವಿಯಲ್ಲಿ ಬಿಎಸ್ಸಿ-ಫಾರೆಸ್ಟ್, ಬಿಎಸ್ಸಿ-ಬಯೋಟೆಕ್ನಾಲಜಿ, ಬಿಎಸ್ಸಿ-ಫುಡ್‌ಟೆಕ್ ವಿಭಾಗಗಳು, ಎಂಎಸ್ಸಿಯಲ್ಲಿ ೯ ಹಾಗೂ ಪಿಹೆಚ್‌ಡಿಯಲ್ಲಿ ೬ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ. ಒಟ್ಟು ೧೮೫೬ ವಿದ್ಯಾರ್ಥಿಗಳು ಕೃಷಿ ವಿವಿಯಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಸರ್ಕಾರ ಬಿಡುಗಡೆ ಮಾಡಿದ ೨೫ ಕೋಟಿ ರು. ಹಣದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳು ನಡೆದಿವೆ. ಸಂಶೋಧನೆಗಾಗಿ ಪ್ರಯೋಗಾಲಯಗಳನ್ನು ಸ್ಥಾಪಿಸಬೇಕಿದೆ, ಕ್ಯಾಂಪಸ್ ನಿರ್ಮಾಣ, ತಾಂತ್ರಿಕ ಸಿಬ್ಬಂದಿಗಳ ನೇಮಕ, ವಿಶ್ವವಿದ್ಯಾನಿಲಯಕ್ಕೆ ಅನುಗುಣವಾದ ಮೈದಾನ ಸೇರಿದಂತೆ ಹಲವು ಮೂಲಸೌಲಭ್ಯಗಳನ್ನು ಒದಗಿಸುವುದು ಅವಶ್ಯಕವಾಗಿದೆ.
ಬೆಂಗಳೂರು ಕೃಷಿ ವಿಶ್ವವಿದ್ಯಾಲಯ, ಬಾಗಲಕೋಟೆ ತೋಟಗಾರಿಕೆ ವಿವಿ, ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿವಿಯಿಂದ ಕೆಲವು ಸಂಸ್ಥೆಗಳನ್ನು ಹೊಸ ವಿವಿಗೆ ವಿಲೀನಗೊಳಿಸಬೇಕು ಎಂದು ತಿಳಿಸಿದೆ. ಇದಕ್ಕೆ ಅಲ್ಲಲ್ಲಿ ಅಪಸ್ವರಗಳು ಕೇಳಿಬರುತ್ತಿದೆ. ಇದು ಕ್ಯಾಬಿನೇಟ್‌ನಲ್ಲಿ ಅಂತಿಮವಾಗಿ ತೀರ್ಮಾನವಾಗಬೇಕಿದೆ.ಸುಧಾರಣೆ ಕಾಣದ ಮೈಷುಗರ್:
ಹೊಸ ಸಕ್ಕರೆ ಕಾರ್ಖಾನೆಯನ್ನು ನಿರ್ಮಾಣ ಮಾಡುವುದಕ್ಕೆ ಸರ್ಕಾರ ಆಸಕ್ತಿದಾಯಕವಾಗಿಲ್ಲ. ಸ್ಥಗಿತಗೊಂಡಿದ್ದ ಕಾರ್ಖಾನೆಗೆ ಕಾಂಗ್ರೆಸ್ ಸರ್ಕಾರ ಚಾಲನೆ ಕೊಟ್ಟರೂ ಸುಧಾರಣೆ ಕಂಡಿಲ್ಲ, ನಷ್ಟದಿಂದ ಹೊರಬರಲೂ ಇಲ್ಲ. ಕಾರ್ಖಾನೆಯ ಒಂದು ಮಿಲ್‌ನ್ನು ೩೦೦೦ ಟಿಸಿಡಿಯಿಂದ ೫ ಸಾವಿರಕ್ಕೆ ಹೆಚ್ಚಿಸುವ ಪ್ರಯತ್ನದಲ್ಲಿ ಇಂದಿಗೂ ಸಾಫಲ್ಯ ಕಂಡಿಲ್ಲ. ಮೈಷುಗರ್ ಸಮರ್ಥ ಕಾರ್ಯನಿರ್ವಹಣೆಗೆ ಕಳೆದ ವರ್ಷ ೧೦ ಕೋಟಿ ರು. ಹಣವನ್ನು ಸಾಲವಾಗಿ ಸರ್ಕಾರ ನೀಡಿತ್ತು. ಬೆಂಗಳೂರು ಆಡಳಿತ ಕಚೇರಿಯ ತೆರಿಗೆ ಮನ್ನಾ, ಕಾರ್ಖಾನೆಯ ವಿದ್ಯುತ್ ಬಿಲ್ ಬಾಕಿ ಮನ್ನಾ ಮಾಡಿದರೂ ಇನ್ನೂ ಸಾಲದ ಹೊರೆ ಕಡಿಮೆಯಾಗಿಲ್ಲ. ಬಾಯ್ಲರ್ ಹೌಸ್ ನವೀಕರಣಕ್ಕೆ ರಾಜ್ಯಸರ್ಕಾರ ೬೦ ಕೋಟಿ ರು. ನೀಡುವುದಾಗಿ ಘೋಷಿಸಿದ್ದು, ಅದಕ್ಕೆ ಬಜೆಟ್‌ನಲ್ಲಿ ಹಣ ನೀಡುವ ನಿರೀಕ್ಷೆ ಇದೆ.ಬಸರಾಳಿಗೆ ಕಾವೇರಿ ನೀರು, ರಿಂಗ್‌ರಸ್ತೆ ನಿರೀಕ್ಷೆ:
ಮಂಡ್ಯ ತಾಲೂಕು ಬಸರಾಳು ಹೋಬಳಿಗೆ ಶ್ರೀರಂಗಪಟ್ಟಣದಿಂದ ಕಾವೇರಿ ನೀರು ಪೂರೈಸುವುದಕ್ಕೆ ೧೨೦೦ ಕೋಟಿ ರು. ಹಾಗೂ ಮಂಡ್ಯ ನಗರ ಹೊರಭಾಗದಲ್ಲಿ ೩೫೦ ಕೋಟಿ ರು. ವೆಚ್ಚದಲ್ಲಿ ವರ್ತುಲ ರಸ್ತೆ ನಿರ್ಮಿಸುವುದಾಗಿ ಶಾಸಕ ಪಿ.ರವಿಕುಮಾರ್ ಭರವಸೆ ನೀಡಿದ್ದು, ಮಾ.೬ರ ಬಜೆಟ್‌ನಲ್ಲಿ ಈ ಯೋಜನೆಗಳು ಘೋಷಣೆಯಾಗಬಹುದೆಂದು ನಂಬಲಾಗಿದೆ.ಮತ್ತೆ ಗರಿಗೆದರಿದ ನಿರೀಕ್ಷೆಗಳುರಾಜ್ಯ ಬಜೆಟ್ ಮಂಡನೆಯಾಗುತ್ತಿರುವುದರಿಂದ ಜಿಲ್ಲೆಯ ನಿರೀಕ್ಷೆಗಳೆಲ್ಲವೂ ಮತ್ತೆ ಗರಿಗೆದರಿವೆ. ನಗರಕ್ಕೊಂದು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಹೆದ್ದಾರಿ ಪಕ್ಕದಲ್ಲಿ ಟ್ರಾಮಾ ಸೆಂಟರ್ ನಿರ್ಮಾಣ, ಶೀತಲೀಕರಣ ಕೇಂದ್ರಗಳ ಸ್ಥಾಪನೆ, ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಅನುದಾನ, ಬೃಹತ್ ಮಂಡ್ಯ ಯೋಜನೆ, ದಂತ ವೈದ್ಯಕೀಯ ಕಾಲೇಜು ಹೀಗೆ ಹಲವಾರು ನಿರೀಕ್ಷೆಗಳು ಬಜೆಟ್ ಸಮಯದಲ್ಲಿ ಪುಟಿದೇಳುತ್ತವೆ.
ಪ್ರತಿ ವರ್ಷದ ಬಜೆಟ್‌ನಲ್ಲೂ ಇದೇ ನಿರೀಕ್ಷೆಗಳು ಹುಟ್ಟಿಕೊಳ್ಳುತ್ತವೆ. ಇವೇನು ಹೊಸ ನಿರೀಕ್ಷೆಗಳೇನೂ ಅಲ್ಲ, ಹಲವಾರು ವರ್ಷಗಳಿಂದ ಎದುರುನೋಡುತ್ತಿರುವ ಕನಸಿನ ಯೋಜನೆಗಳಾಗಿವೆ. ಆದರೆ, ಸಾಕಾರಗೊಳ್ಳುವ ಅದೃಷ್ಟ ಮಾತ್ರ ಕೂಡಿಬರುತ್ತಿಲ್ಲದಿರುವ ಬಗ್ಗೆ ನಗರದ ಜನರಲ್ಲಿ ತೀವ್ರ ವಿಷಾದವಿದೆ.ಸಚಿವ ಎನ್.ಚಲುವರಾಯಸ್ವಾಮಿ ಸೇರಿದಂತೆ ಜಿಲ್ಲೆಯ ೬ ಮಂದಿ ಕಾಂಗ್ರೆಸ್ ಶಾಸಕರು ಯಾವ ರೀತಿಯಲ್ಲಿ ಅಭಿವೃದ್ಧಿ ಕುರಿತಾದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿರುವರೋ ಗೊತ್ತಿಲ್ಲ. ಆದರೆ, ಅಭಿವೃದ್ಧಿ ಜಿಲ್ಲೆಯೊಳಗೆ ನಿಂತ ನೀರಾಗಿದೆ. ಅಭಿವೃದ್ಧಿಗೆ ಹಿಡಿದಿರುವ ಗ್ರಹಣ ಎಂದು ದೂರವಾಗುವುದೋ ಎನ್ನುವುದು ಜಿಲ್ಲೆಯ ಜನರ ಯಕ್ಷಪ್ರಶ್ನೆಯಾಗಿದೆ.