ಎಂಎಲ್‌ಸಿ ಹೇಮಲತಾ ನಾಯಕ ಆರೋಪ । ಕ್ರಮಕ್ಕೆ ಒತ್ತಾಯಕನ್ನಡಪ್ರಭ ವಾರ್ತೆ ಕೊಪ್ಪಳ
ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯದ ಆಲೆಮನೆಯಲ್ಲಿ ಭ್ರೂಣಹತ್ಯೆ ನಡೆದಿವೆ. ನೆಲಮಂಗಲದಲ್ಲಿ ನರ್ಸಿಂಗ್ ಹೋಮ್‌ನಲ್ಲಿ ಭ್ರೂಣಹತ್ಯೆ ನಡೆದಿವೆ. ಒಂದೊಂದು ಗರ್ಭಪಾತಕ್ಕೆ ದರ ನಿಗದಿ ಮಾಡಲಾಗಿದೆ. ಇದೆಲ್ಲವೂ ಸರ್ಕಾರದ ಗಮನಕ್ಕೆ ಇಲ್ಲವಾ? ಎಂದರಲ್ಲದೇ, ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ತೊಂದರೆ ಎದುರಿಸುವಂತಾಗಿದೆ. ಪ್ರಸ್ತುತ ಕಾಲೇಜುಗಳಲ್ಲಿ ಗಲಾಟೆ ನಡೆಯುತ್ತಿದ್ದು, ವಿದ್ಯಾರ್ಥಿನಿಯರಿಗೆ ರಕ್ಷಣೆಯಿಲ್ಲದಂತಾಗಿದೆ ಎಂದು ಆರೋಪಿಸಿದರು.
ಸರ್ಕಾರದಲ್ಲಿ ಇಷ್ಟೊಂದು ಭ್ರೂಣ ಹತ್ಯೆ ಏಕೆ ನಡೆಯುತ್ತಿವೆ ಎಂದು ಸ್ವತಃ ಎಂಎಲ್‌ಸಿ ಉಮಾಶ್ರೀ ಅವರೇ ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಭ್ರೂಣಹತ್ಯೆಯ ವಿಚಾರದಲ್ಲಿ ಸರ್ಕಾರ ಖಾಸಗಿ ಆಸ್ಪತ್ರೆಗಳನ್ನು ಕಾಪಾಡುವ ಕೆಲಸ ಮಾಡುತ್ತಿದೆ ಎಂದು ದೂರಿದರು. ಮುದ್ದೇಬಿಹಾಳದಲ್ಲಿ ಓರ್ವ ನರ್ಸ್ ಮನೆಯಲ್ಲೇ ಗರ್ಭಪಾತ ಮಾಡಿಸುತ್ತಿದ್ದಾಳೆ. ಇಂಥ ಪ್ರಕರಣದಲ್ಲಿ ಎಷ್ಟು ಶಿಕ್ಷೆ ಆಗಿವೆ? ನರ್ಸ್‌ಗಳು ಹೆಣ್ಣುಮಕ್ಕಳ ಜೀವದ ಜತೆ ಆಟವಾಡುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ಸರ್ಕಾರದ ಸಚಿವರು ಜಾರಿಕೊಳ್ಳುವ ಉತ್ತರ ನೀಡುತ್ತಿದ್ದಾರೆ ಎಂದರು.
ಬಿಜೆಪಿ ಪದಾಧಿಕಾರಿಗಳಾದ ಪ್ರಮೋದ, ಸೋಮಶೇಖರ ಗೌಡ, ರಾಜು ಬಾಕಳೆ ಉಪಸ್ಥಿತರಿದ್ದರು.