ಕನ್ನಡಪ್ರಭ ವಾರ್ತೆ ಮಂಡ್ಯ
ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ಮತ್ತೆ ದಲಿತರ ಹಣಕ್ಕೆ ಕನ್ನ ಹಾಕಲು ಮುಂದಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ೧೪,೪೮೮ ಕೋಟಿ ರು. ದುರ್ಬಳಕೆ ಮಾಡಿಕೊಳ್ಳುವುದಕ್ಕೆ ಸಂಚು ರೂಪಿಸಿದೆ ಎಂದು ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಆರೋಪಿಸಿದರು.೨೦೨೩ರಲ್ಲಿ ಎಸ್‌ಸಿಎಸ್ಪ್‌ಪಿಯಿಂದ ೭೭೧೩ ಕೋಟಿ ರು. ಮತ್ತು ಟಿಎಸ್‌ಪಿಯಿಂದ ೩೪೩೦ ಕೋಟಿ ರು. ಸೇರಿ ೧೧೧೪೪ ಕೋಟಿ ರು. ಹಾಗೂ ೨೦೨೪ನೇ ಸಾಲಿನಲ್ಲಿ ಎಸ್‌ಸಿಎಸ್‌ಪಪಿ ನಿಧಿಯಿಂದ ೯೯೮೦ ಕೋಟಿ ರು. ಮತ್ತು ಟಿಎಸ್‌ಪಿ ನಿಧಿಯಿಂದ ೪೩೦೨ ಕೋಟಿ ರು. ಸೇರಿ ೧೪,೨೮೨ ಕೋಟಿ ರು. ಹಣವನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ದುರ್ಬಳಕೆ ಮಾಡಿಕೊಂಡಿತ್ತು ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಪಾದಿಸಿದರು.
ಈ ಸಾಲಿನ ಬಜೆಟ್‌ನಲ್ಲಿ ದಲಿತರ ಮೀಸಲು ನಿಧಿಯಿಂದ ಗೃಹಲಕ್ಷ್ಮೀ ಯೋಜನೆಗೆ ೭೩೪೪ ಕೋಟಿ ರು., ಗೃಹಜ್ಯೋತಿಗೆ ೩೪೬೭ ಕೋಟಿ ರು., ಶಕ್ತಿ ಯೋಜನೆಗೆ ೧೨೦೯ ಕೋಟಿ ರು., ಅನ್ನಭಾಗ್ಯ ಯೋಜನೆಗೆ ೨೧೨೫ ಕೋಟಿ ರು. ಹಾಗೂ ಯುವನಿಧಿಗೆ ೩೪೨ ಕೋಟಿ ರು.ಗಳನ್ನು ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ದೂರಿದರು.ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಲ್ಲಿ ಕೇವಲ ಪರಿಶಿಷ್ಟ ಜಾತಿ, ಪಂಗಡದವರು ಮಾತ್ರ ಇಲ್ಲ. ಸವರ್ಣೀಯರು, ಹಿಂದುಳಿದವರು, ಅಲ್ಪಸಂಖ್ಯಾತರು ಎಲ್ಲರೂ ಇದ್ದಾರೆ. ಉಳಿದವರಿಗೆಲ್ಲಾ ಸರ್ಕಾರ ತನ್ನ ಖಜಾನೆಯಿಂದಲೇ ಹಣ ಕೊಡುತ್ತಿದೆ. ಆದರೆ, ದಲಿತ ಮೀಸಲು ನಿಧಿಗೆ ಮಾತ್ರ ಕನ್ನ ಹಾಕುತ್ತಿದೆ ಎಂದರೆ ಇದು ಸಾಮಾಜಿಕ ನ್ಯಾಯವೇ ಎಂದು ಪ್ರಶ್ನಿಸಿದರು.
ಎಸ್ಸಿಎಸ್‌ಟಿ ಸಮುದಾಯಗಳ ನಿಗಮಗಳು ಸರ್ಕಾರದ ಹಣಕಾಸಿನ ನೆರವಿಲ್ಲದೆ ಸೊರಗಿವೆ. ಯಾವ ನಿಗಮದಲ್ಲಿಯೂ ಯಾವ ಯೋಜನೆಗಳೂ ಜಾರಿಯಾಗುತ್ತಿಲ್ಲ. ಸಾರಿಗೆ ಸಂಬಳಕ್ಕೂ ಕಾಸಿಲ್ಲದೆ ದಿವಾಳಿ ಸ್ಥಿತಿ ತಲುಪಿವೆ. ಸರ್ಕಾರ ತಾನು ತುಳಿದಿರುವ ಅನೈತಿಕ ದಾರಿಯಿಂದ ಹಿಂದೆ ಸರಿಯಬೇಕು. ಎಸ್‌ಸಿ ಮತ್ತು ಎಸ್ಟಿ ಸಮುದಾಐಗಳ ಏಳು ನಿಗಮಗಳಿಗೆ ಸರ್ಕಾರ ೩೩೨ ಕೋಟಿ ರು. ಹಂಚಿಕೆ ಮಾಡಿದ್ದು, ಇದುವರೆಗೂ ಕೇವಲ ೮೨ ಕೋಟಿ ರು. ಬಿಡುಗಡೆ ಮಾಡಿದೆ ಎಂದು ಟೀಕಿಸಿದರು.ಹಣ ವರ್ಗಾವಣೆಗೆ ಅವಕಾಶವಿಲ್ಲದಂತೆ ೭ಡಿ ರದ್ದು ಮಾಡಿದ್ದು ತಾನೇ ಎಂದು ಬೆನ್ನುತಟ್ಟಿಕೊಳ್ಳುವ ಸರ್ಕಾರ ಈಗ ೭ಸಿ ಕಾಯ್ದೆ ರದ್ದು ಮಾಡಿಲ್ಲವೆಂದು ಪಿಸುಗುಟ್ಟುತ್ತಿದೆ. ೭ ಸಿ ರದ್ದು ಮಾಡಿ ದಲಿತರ, ಆದಿವಾಸಿಗಳ ಮೀಸಲು ಹಣ ಪೂರ್ತಿಯಾಗಿ ಅವರಿಗೇ ಸಲ್ಲುವಂತೆ ಮಾಡಬೇಕು ಎಂದು ಆಗ್ರಹಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಖಜಾನೆಯಿಂದ ನೇರ ಪಾವತಿ ಮಾಡಿ. ದಲಿತರ ನಿಧಿಯನ್ನು ದುರ್ಬಳಕೆ ಮಾಡುವುದು ಸರಿಯಲ್ಲ. ಕಾಂಗ್ರೆಸ್ ಸರ್ಕಾರದ ದಲಿತ ವಿರೋಧಿ ನೀತಿಯನ್ನು ನಾವು ಒಪ್ಪುವುದಿಲ್ಲ. ಸದನದ ಹೊರಗೆ ಮತ್ತು ಒಳಗೆ ಗಂಭೀರವಾಗಿ ಹೋರಾಟ ಮಾಡುತ್ತೇವೆ. ಪ್ರತಿ ಜಿಲ್ಲೆ ಹಾಗೂ ತಾಲೂಕಿನಲ್ಲಿ ಜನರನ್ನು ಒಗ್ಗೂಡಿಸಿ ಬೀದಿಗಿಳಿದು ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.ಗೋಷ್ಠಿಯಲ್ಲಿ ಸಕಲೇಶಪುರ ಶಾಸಕ ಮಂಜು, ಮಾಜಿ ಶಾಸಕ ಬಾಲರಾಜು, ಬೆಳ್ಳಿ ಗಂಗಾಧರ್, ಡಾ.ಸಿದ್ದರಾಮಯ್ಯ, ಡಾ.ಎನ್.ಎಸ್.ಇಂದ್ರೇಶ್, ಅರುಣ್‌ಕುಮಾರ್, ಎಸ್.ಪಿ.ಲಿಂಬಿಯಾನಾಯಕ್, ಪ್ರಶಾಂತ್‌ಕುಮಾರ್, ಎಸ್.ಸಚ್ಚಿದಾನಂದ, ಅಶೋಕ್ ಜಯರಾಂ ಇದ್ದರು.