ಚಂದ್ರು ಕೊಂಚಿಗೇರಿ
ತುಂಗಭದ್ರಾ ನದಿ ತೀರದ ಪ್ರದೇಶದ ವ್ಯಾಪ್ತಿಯ ಗ್ರಾಮಗಳಲ್ಲಿ ಭತ್ತದ ಕಟಾವು ಭರದಿಂದ ಸಾಗಿದೆ. ಭತ್ತದ ಕಾಳು ಒಣಗಿಸಲು ರಸ್ತೆಯನ್ನೇ ಬಳಕೆ ಮಾಡುತ್ತಿದ್ದಾರೆ. ಜತೆಗೆ ಭತ್ತದ ಸೀಡ್ಸ್ ಉತ್ಪಾದನೆ ಕೂಡ ಇದೆ. ಇದರಲ್ಲಿ ಭತ್ತವನ್ನು ಹುಲ್ಲಿನಿಂದ ಬೇರ್ಪಡಿಸಲು ರಸ್ತೆ ಮೇಲೆ ಹಾಕಿದ್ದಾರೆ. ಆದರೆ ಆ ಹುಲ್ಲನ್ನು ಜಾನುವಾರುಗಳು ತಿನ್ನುವುದಿಲ್ಲವೆಂಬ ಕಾರಣಕ್ಕಾಗಿ ರಸ್ತೆ ಮೇಲೆ ಬಿಟ್ಟಿದ್ದಾರೆ. ಜತೆಗೆ ರಸ್ತೆ ತುಂಬೆಲ್ಲ ಭತ್ತದ ರಾಶಿ ಆವರಿಸಿದೆ. ಇದರಿಂದ ಸಂಚಾರಕ್ಕೆ ತೀವ್ರ ತೊಂದರೆ ಉಂಟಾಗುತ್ತಿದೆ.
ರಸ್ತೆಯಲ್ಲಿನ ರಾಶಿಗಳ ಪಕ್ಕದಲ್ಲಿ ದೊಡ್ಡ ಪ್ರಮಾಣದ ಕಲ್ಲುಗಳನ್ನು ಹಾಕುತ್ತಿದ್ದಾರೆ. ಇದರಿಂದ ಸಾಕಷ್ಟು ಬೈಕ್ ಸವಾರರು ರಾತ್ರಿ ವೇಳೆ ಆಯ ತಪ್ಪಿ ಬಿದ್ದು ಗಾಯಗೊಂಡಿರುವ ಉದಾಹರಣೆಗಳಿವೆ. ಇಷ್ಟಾದರೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಕಣ್ಮುಚ್ಚಿ ಕುಳಿತಿವೆ. ವಾಹನ ಸವಾರರು ಸಂಚರಿಸಲು ಹೈರಾಣಾಗಿ ರೋಸಿ ಹೋಗಿದ್ದಾರೆ.ರಾಜ್ಯ ಹೆದ್ದಾರಿಯನ್ನು ಒಕ್ಕಲುತನಕ್ಕೆ ಬಳಕೆ ಮಾಡಿಕೊಂಡಿರುವ ರೈತರು, ಭತ್ತದ ಹುಲ್ಲು ರಸ್ತೆ ಮೇಲೆ ಬಿಟ್ಟಿದ್ದಾರೆ. ಕೆಲವರು ಒಣಗಿದ ಬಳಿಕ ಹುಲ್ಲಿಗೆ ಬೆಂಕಿ ಹಚ್ಚಿದ್ದಾರೆ. ಇದರಿಂದ ರಸ್ತೆಗೆ ಹಾನಿಯಾಗುವ ಜತೆಗೆ ರಸ್ತೆ ಪಕ್ಕದ ಗಿಡ- ಮರಗಳು ಸುಟ್ಟು ಹೋಗಿವೆ.
ಇನ್ನು ಕೆಲವರು ಕೃಷಿ ಚಟುವಟಿಕೆಗಳಿಗೆ ಅಗತ್ಯವಿರುವ ಟ್ರ್ಯಾಕ್ಟರ್ ಸಾಮಗ್ರಿಗಳನ್ನು ಮಾಡಿಸುತ್ತಿದ್ದಾರೆ. ಇಂತಹ ಘಟನೆಗಳು ನಿರಂತರವಾಗಿ ನಡೆಯುತ್ತಿದ್ದರೂ ಇತ್ತ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಮತ್ತು ಪೊಲೀಸ್ ಇಲಾಖೆ ಈ ಕುರಿತು ನಮಗೆ ದೂರು ಬಂದಿಲ್ಲವೆಂದು ಕೈಚೆಲ್ಲುತ್ತಿದ್ದಾರೆ.
ರಸ್ತೆ ಬದಿಯಲ್ಲಿನ ಕಬ್ಬಿಣ ಕಂಬಿ ಕಳ್ಳತನವಾಗಿರುವ ಬಗ್ಗೆ ಲೋಕೋಪಯೋಗಿ ಇಲಾಖೆಯಿಂದ ಮಾಹಿತಿ ಪಡೆಯುತ್ತೇವೆ. ಪೊಲೀಸರು ನಿರಂತರವಾಗಿ ಬೀಟ್ ಮಾಡುತ್ತಿದ್ದಾರೆ ಎನ್ನುತ್ತಾರೆ ಹಿರೇಹಡಗಲಿ ಪೊಲೀಸ್ ಠಾಣೆ ಪಿಎಸ್‌ಐ ಅಶೋಕ ಬೇವೂರು.