ಸಿದ್ದಾಪುರ: ಪಟ್ಟಣದ ಕೊಂಡ್ಲಿ ಗ್ರಾಮದ ಸ.ನಂ. 100/ಬ ದಲ್ಲಿನ 1 ಎಕರೆ ಜಾಗ ಪಪಂ ಆಸ್ತಿಯಾಗಿದ್ದು. ಆರ್‌ಟಿಸಿಯಲ್ಲೂ ನಮೂದಾಗಿದೆ. ಕಾಲಂ ನಂ.11ರಲ್ಲಿ ಸಂತೆ ಮಾರುಕಟ್ಟೆ ಎಂದು ಸ್ಪಷ್ಟವಾಗಿ ಉಲ್ಲೇಖವಾಗಿದೆ. ಈ ಜಾಗದ ಸುಮಾರು 15 ಅಡಿ ಅತಿಕ್ರಮಣ ಮಾಡಿ ಆಸ್ತಿ ಕಬಳಿಸುವ ಹುನ್ನಾರ ನಡೆದಿದೆ ಎಂದು ಪಪಂ ನಿಕಟಪೂರ್ವ ಸದಸ್ಯ ಕೆ.ಜಿ.ನಾಯ್ಕ ಹಣಜೀಬೈಲ್ ಆರೋಪಿಸಿದರು.
ಈ ಜಾಗದ ಸ್ವಲ್ಪ ಭಾಗದಲ್ಲಿ ಉರ್ದು ಶಾಲಾ ಕಟ್ಟಡವಿದೆ. ಆ ಕಟ್ಟಡದ ಕುರಿತು ನಮ್ಮ ತಕರಾರಿಲ್ಲ. ಆದರೆ, ಆ ಜಾಗದಲ್ಲಿ ನೆರೆ ಪರಿಹಾರದಲ್ಲಿ ₹22 ಲಕ್ಷ ಮಂಜೂರಾಗಿ ಕಾಮಗಾರಿಯ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಶಾಲೆಗೆ ತಾಗಿದಂತೆ ತಡೆಗೋಡೆ ನಿರ್ಮಾಣ ಮಾಡಿದರೆ ನಮ್ಮ ಆಕ್ಷೇಪವಿಲ್ಲ. ಆದರೆ, ಅದರ ನೆಪದಲ್ಲಿ ಪಪಂ ಆಸ್ತಿ ಅತಿಕ್ರಮಣ ಮಾಡುವ ಬಗ್ಗೆ ವಿರೋಧವಿದೆ. ಈಗಾಗಲೇ ಪಪಂ ಆಸ್ತಿಯಾದ ನೆಹರೂ ಮೈದಾನದಲ್ಲಿ ಗಾಂಧಿ ಭವನ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ. ಪಪಂ ಕಚೇರಿ ಪಕ್ಕದ ಗೋದಾಮಿನ ಜಾಗವನ್ನು ಸ್ಥಳೀಯ ಸಂಸ್ಥೆಯೊಂದು ತನ್ನದಾಗಿಸಿಕೊಳ್ಳುವ ಪ್ರಯತ್ನ ನಡೆಸಿದೆ. ಸಮಾಜ ಮಂದಿರವಿರುವ ಸ್ಥಳವನ್ನು ರಾಷ್ಟ್ರೀಯ ಪಕ್ಷವೊಂದು ತನಗೆ ಸೇರಿದ್ದು ಎಂದು ಸಾಧಿಸುತ್ತಿದೆ. ಹೀಗೆ ಪಪಂನ ಒಂದೊಂದೇ ಆಸ್ತಿಗಳನ್ನು ಕಬಳಿಸುವ ಪ್ರಯತ್ನ ನಡೆದಿದೆ. ಸಂತೆ ಕೇವಲ ಪಟ್ಟಣ ವ್ಯಾಪ್ತಿಗಲ್ಲದೇ ಇಡೀ ತಾಲೂಕಿಗೆ ಅವಶ್ಯಕವಾದದ್ದು, ಅದಕ್ಕಾಗಿ ಮೀಸಲಾದ ಪಪಂ ಆಸ್ತಿ ಉಳಿಸುವ ಜವಾಬ್ದಾರಿ ನಮ್ಮೆಲ್ಲರದ್ದು. ಸಾರ್ವಜನಿಕರು ಇದಕ್ಕೆ ಬೆಂಬಲಿಸಬೇಕು ಎಂದರು.
ಕಳೆದ ವರ್ಷ ಮಳೆಯಿಂದಾಗಿ ಉರ್ದು ಶಾಲಾ ಪಕ್ಕದ ದರೆ ಕುಸಿದ ಕಾರಣ ಅಲ್ಲಿನ ಶಾಲೆಯನ್ನು ಸರ್ಕಾರಿ ಪ್ರಾಥಮಿಕ ಶಾಲೆಗೆ ವರ್ಗಾಯಿಸಿ ಆ ಶಾಲೆಯನ್ನು ಸ್ಥಗಿತಗೊಳಿಸಲಾಗಿತ್ತು. ಉರ್ದು ಶಾಲೆಗೆ ಹೊಸ ಕಟ್ಟಡಕ್ಕಾಗಿ ಸೂಕ್ತ ಸ್ಥಳವನ್ನೂ ಈ ಹಿಂದೆಯೇ ಸೂಚಿಸಲಾಗಿತ್ತು. ಆದರೂ ಇದೇ ಸ್ಥಳದಲ್ಲಿ ತಡೆಗೋಡೆ ನಿರ್ಮಿಸಲು ಮುಂದಾಗಿದ್ದಾರೆ. ಪಪಂಗೆ ಈಗಲೇ ಜಾಗದ ಕೊರತೆ ಇದೆ. ಬುಧವಾರ ಸಂತೆ ನಡೆಯುವ ಸ್ಥಳದಲ್ಲಿ ಮಾರುಕಟ್ಟೆ ನಿರ್ಮಾಣಕ್ಕೆ ಅನುದಾನದ ಕೊರತೆಯಿಂದ ಸಾಧ್ಯವಾಗಿಲ್ಲ. ನಾವು ಸ್ವಂತ ಆಸ್ತಿಗಾಗಿ ಹೋರಾಟ ನಡೆಸುತ್ತಿಲ್ಲ. ಹೀಗೆಯೇ ಬಿಟ್ಟರೆ ಮುಂದಿನ ದಿನಗಳಲ್ಲಿ ಪಪಂ ಆಸ್ತಿಗಳನ್ನು ಕಬಳಿಸುವದು ಹೆಚ್ಚುತ್ತದೆ. ನಾವು ಸಾರ್ವಜನಿಕ ಜೀವನದಲ್ಲಿದ್ದೇವೆ. ಆ ಕಾರಣದಿಂದ ಸರ್ಕಾರದ ಆಸ್ತಿಯನ್ನು ರಕ್ಷಿಸುವದು ನಮ್ಮ ಜವಾಬ್ದಾರಿ. ಸಾರ್ವಜನಿಕರೆಲ್ಲರ ಬೆಂಬಲದೊಂದಿಗೆ ಹೋರಾಟ ನಡೆಸುತ್ತೇವೆ. ಈ ಹೋರಾಟದಲ್ಲಿ ಜೈಲಿಗೆ ಹೋಗಲೂ ಸಿದ್ಧ. ಕೂಡಲೇ ಪಪಂ ಜಾಗದಲ್ಲಿನ ತಡೆಗೋಡೆ ಕಾಮಗಾರಿ ರದ್ದು ಪಡಿಸಬೇಕು ಎಂದು ಆಗ್ರಹಿಸಿದರು.ಪಪಂ ನಿಕಟಪೂರ್ವ ಸದಸ್ಯ ಮಾರುತಿ ನಾಯ್ಕ ಹೊಸೂರು, ವಿನಯ ಹೊನ್ನೆಗುಂಡಿ, ರವಿ ನಾಯ್ಕ ಜಾತಿಕಟ್ಟಾ, ಗುರುರಾಜ ಶಾನಭಾಗ, ನಂದನ ಬೋರ್ಕರ, ಸುಧೀರ ಕೊಂಡ್ಲಿ, ವಿಜಯೇಂದ್ರ ಗೌಡರ್, ಎನ್.ಜಿ. ವೆಂಕೋಬ, ಸಾಮಾಜಿಕ ಕಾರ್ಯಕರ್ತ ತಿಮ್ಮಪ್ಪ ಎಂ.ಕೆ., ದಿವಾಕರ ನಾಯ್ಕ ಹೆಮ್ಮನಬೈಲ್, ಸುಜಾತಾ ಹೆಗಡೆ, ಸವಿತಾ ಕಾಮತ್, ಎಸ್.ಕೆ. ಮೇಸ್ತ, ಸುರೇಶ ಬಾಲಿಕೊಪ್ಪ, ಮಂಜುನಾಥ ಭಟ್ಟ, ಮಾರುತಿ ನಾಯ್ಕ ಕಾನಗೋಡ, ವೆಂಕಟೇಶ ಹೊಸೂರು, ಜೆಡಿಎಸ್ ತಾಲೂಕಾಧ್ಯಕ್ಷ ಸತೀಶ ಹೆಗಡೆ ಸೇರಿದಂತೆ ಹಲವಾರು ಸಾರ್ವಜನಿಕರು ಉಪಸ್ಥಿತರಿದ್ದರು.