ಕನಕಗಿರಿ: ಪಟ್ಟಣದ ಶ್ರೀಪಂಪಣ್ಣ ಶರಣಪ್ಪ ಗುಗ್ಗಳಶೆಟ್ರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಕೋಶ, ಆಂತರಿಕ ಗುಣಮಟ್ಟ ಭರವಸೆ ಕೋಶ (ಐಕ್ಯೂಎಸಿ) ಹಾಗೂ ಕೊಪ್ಪಳ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ ಇವರ ಸಹಯೋಗದಲ್ಲಿ ಉದ್ಯೋಗ ಮೇಳವು ಶುಕ್ರವಾರ ನಡೆಯಿತು.
ವೃತ್ತಿ ಮಾರ್ಗದರ್ಶನ ಮತ್ತು ಉದ್ಯೋಗ ಕೋಶದ ಸಂಯೋಜಕ ಡಾ.ವೀರೇಶ ಕೆಂಗಲ್ ಪ್ರಾಸ್ತಾವಿಕವಾಗಿ ಮಾತನಾಡಿ, ಶಿಕ್ಷಣದ ಜತೆಗೆ ಸರ್ಟಿಫಿಕೇಟ್ ನೀಡುವುದು ಮಾತ್ರ ಶಿಕ್ಷಣ ಸಂಸ್ಥೆಗಳ ಕೆಲಸ ಆಗಬಾರದು. ವಿದ್ಯೆಯ ಜತೆಗೆ ಜೀವನ ಕಟ್ಟಿಕೊಳ್ಳುವ ಮಾರ್ಗ ಕಲ್ಪಿಸುವ ಅಥವಾ ತೋರಿಸುವ ಕೆಲಸವೂ ಅವುಗಳಿಂದಾಗಬೇಕು. ಈ ಹಿಂದೆ ಕಾಲೇಜಿನಿಂದ ಆಯೋಜಿಸಲಾಗಿದ್ದ ಉದ್ಯೋಗ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತ್ತು. ಅದನ್ನೇ ಪ್ರೇರಣೆಯಾಗಿಸಿಕೊಂಡು ಈ ವರ್ಷವೂ ಉದ್ಯೋಗ ಮೇಳ ಆಯೋಜಿಸಿದ್ದೇವೆ. ಜೀವನ ಪಯಣದಲ್ಲಿ ಎದುರಾಗುವ ಸೋಲು ಅನುಭವ ಕೊಟ್ಟರೆ, ಗೆಲುವು ಆತ್ಮವಿಶ್ವಾಸ ಕೊಡುತ್ತದೆ. ಈ ಎರಡೂ ಯಶಸ್ಸಿಗೆ ಬೇಕಾದ ಮೆಟ್ಟಿಲುಗಳೇ ಆಗಿವೆ. ಸೋಲುಗಳಿಗೆ ಎದೆಗುಂದದೆ ಸಾಗುವ ಧನಾತ್ಮಕ ಮನಸ್ಥಿತಿ ನಮ್ಮೆಲ್ಲರಿಗೂ ಬೇಕು. ಇದೇ ನಮ್ಮ ಕೌಟುಂಬಿಕ ಸೇರಿದಂತೆ ವೃತ್ತಿ ಜೀವನದಲ್ಲಿ ಯಶಸ್ವಿಯಾಗಿಸುತ್ತೆ ಎಂದು ಕಿವಿಮಾತು ಹೇಳಿದರು.
ಎಸ್ಸೆಸ್ಸೆಲ್ಸಿ,ಪಿಯುಸಿ, ಐಟಿಐ, ಡಿಪ್ಲೋಮಾ, ಕಂಪ್ಯೂಟರ್ ತರಬೇತಿ ಹಾಗೂ ಯಾವುದೇ ಪದವಿ ವಿದ್ಯಾರ್ಹತೆಯ ಅಭ್ಯರ್ಥಿಗಳಿಗೆ ಈ ಉದ್ಯೋಗ ಮೇಳದಲ್ಲಿ ಭಾಗವಹಿಸಲು ಅವಕಾಶ ಮಾಡಿಕೊಡಲಾಗಿತ್ತು. 500ಕ್ಕೂ ಹೆಚ್ಚು ಖಾಲಿ ಹುದ್ದೆಗಳ ನೇಮಕಾತಿಗಾಗಿ ನಡೆದ ಉದ್ಯೋಗ ಮೇಳದಲ್ಲಿ ಹೊಸಪೇಟೆ ಉಕ್ಕು ನಿಯಮಿತ, ಎಚ್.ಡಿ.ಎಫ್.ಸಿ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್, ಟೊಯೋಟಾ ಕಿರ್ಲೋಸ್ಕರ್, ಮೆಡ್-ಪ್ಲಸ್, ದೊಡ್ಲಾ ಡೈರಿ, ನವ ಭಾರತ್ ಗೊಬ್ಬರ ಖಾಸಗಿ ನಿಯಮಿತ, ಕ್ರೆಡಿಟ್ ಆ್ಯಕ್ಸೆಸ್ ಗ್ರಾಮೀಣ್ ಕೋಟಾ ಲಿಮಿಟೆಡ್, ಆಗು ನೀ ಅನಿಕೇತನ ಫೌಂಡೇಶನ್ ಹಾಗೂ ವಾಯ್ಸ್ ಆಫ್ ನೀಡಿ ಫೌಂಡೇಶನ್, ಕ್ರಿಯೇಟಿವ್ ಇಂಜಿನಿಯರ್ಸ್ ಪ್ರೈವೇಟ್ ಲಿಮಿಟೆಡ್, ಇಶಾನ್ ಗ್ಲೋಬಲ್ ಪ್ರೈವೇಟ್ ಲಿಮಿಟೆಡ್ ಸೇರಿದಂತೆ 15ಕ್ಕೂ ಹೆಚ್ಚು ಪ್ರತಿಷ್ಠಿತ ಕಂಪನಿಗಳು ಭಾಗವಹಿಸಿದ್ದವು.ಈ ಸಂದರ್ಭದಲ್ಲಿ ಐಕ್ಯೂಎಸಿ ಘಟಕದ ಸಂಯೋಜಕ ರಕ್ಷಿತ್.ಎ, ಸಾಂಸ್ಕೃತಿಕ ಘಟಕದ ಸಂಯೋಜಕಿ ಲಲಿತಾ.ಎನ್.ಕೆ, ರೆಡ್ ಕ್ರಾಸ್ ಘಟಕದ ಸಂಯೋಜಕ ಸರ್ವಮಂಗಳಮ್ಮ ಟಿ.ಆರ್, ಹಿರಿಯ ಉಪನ್ಯಾಸಕ ಅಮರೇಶ್.ವಿ, ಜಿಲ್ಲಾ ಉದ್ಯೋಗ ಅಭಿವೃದ್ಧಿ ನಿರ್ವಾಹಕ (ಕೊಪ್ಪಳ) ಹನುಮೇಶ್ ತೊಂಡಿಹಾಳ ಹಾಗೂ ವಿವಿಧ ಕಂಪನಿಗಳ ಪ್ರತಿನಿಧಿ ರವಿಚಂದ್ರ, ಚನ್ನಬಸವ ವೇದಿಕೆ ಮೇಲೆ ಉಪಸ್ಥಿತರಿದ್ದರು.