ಮಾರ್ಚ್‌ 9ರಂದು ರಾಜ್ಯಮಟ್ಟದ ದತ್ತಿ ಪ್ರಶಸ್ತಿ ಪ್ರದಾನ

KannadaprabhaNewsNetwork | Published : Feb 28, 2025 12:47 AM

ಸಾರಾಂಶ

ಸಂಘದ ರಾಜಾಧ್ಯಕ್ಷ ಶಿವಾನಂದ ತಗಡೂರು ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು ಗವಿಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ರಾಜ್ಯದ ವಿವಿಧೆಡೆಯಿಂದ ಸಂಘದ ಪ್ರತಿನಿಧಿಗಳು ಆಗಮಿಸುವರು.

ಯಲಬುರ್ಗಾ:

ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಜಿಲ್ಲಾ ಘಟಕದ ವತಿಯಿಂದ ಕೊಪ್ಪಳದಲ್ಲಿ ಮಾ. 9ರಂದು ನಡೆಯುವ ರಾಜ್ಯದ ಮಟ್ಟದ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭಕ್ಕೆ ಸಹಕಾರ ನೀಡಿ ಯಶಸ್ವಿಗೊಳಿಸಬೇಕು ಎಂದು ಸಂಘದ ಜಿಲ್ಲಾಧ್ಯಕ್ಷ ಹನುಮಂತ ಹಳ್ಳಿಕೇರಿ ಕರೆ ನೀಡಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಹಮ್ಮಿಕೊಂಡಿದ್ದ ರಾಜ್ಯದ ಮಟ್ಟದ ದತ್ತಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಂದು ದತ್ತಿ ಪ್ರಶಸ್ತಿ ಪ್ರದಾನ ಹಾಗೂ ರಾಜ್ಯ ಕಾರ್ಯಕಾರಣಿ ಸಭೆ ನಡೆಯಲಿದೆ ಎಂದರು.

ಸಂಘದ ರಾಜಾಧ್ಯಕ್ಷ ಶಿವಾನಂದ ತಗಡೂರು ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು ಗವಿಸಿದ್ಧೇಶ್ವರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ರಾಜ್ಯದ ವಿವಿಧೆಡೆಯಿಂದ ಸಂಘದ ಪ್ರತಿನಿಧಿಗಳು ಆಗಮಿಸುವರು. ಆದರಿಂದ ಜಿಲ್ಲಾ ಘಟಕದ ಸೂಚಿಸುತ್ತಿರುವ ಜವಾಬ್ದಾರಿಯನ್ನು ಆಯಾ ತಾಲೂಕು ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಚಾಚುತಪ್ಪದೇ ಮಾಡಬೇಕು. ಸಮ್ಮೇಳನದ ಮಾದರಿಯಲ್ಲಿ ದತ್ತಿ ಪ್ರಶಸ್ತಿ ಸಮಾರಂಭ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪತ್ರಕರ್ತರು ಪಾಲ್ಗೊಳ್ಳಬೇಕು ಎಂದು ಹೇಳಿದರು.

ಸಂಘದ ರಾಜ್ಯ ಸಮಿತಿ ಸದಸ್ಯ ಎಂ. ಸಾಧಿಕ ಅಲಿ ಹಾಗೂ ರಾಜ್ಯ ವಿಶೇಷ ಕಾರ್ಯಕಾರಣಿ ಸದಸ್ಯ ಎಚ್.ಎಸ್. ಹರೀಶ ಮಾತನಾಡಿ, ಎಲ್ಲರೂ ಆಗಮಿಸಿ ಕಾರ್ಯಕ್ರಮಕ್ಕೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಈ ವೇಳೆ ನೂತನ ಜಿಲ್ಲಾಧ್ಯಕ್ಷ ಹನುಮಂತ ಹಳ್ಳಿಕೇರಿ ಹಾಗೂ ದತ್ತಿ ಪ್ರಶಸ್ತಿ ವಿಜೇತ ಎಚ್.ಎಸ್. ಹರೀಶ ಅವರನ್ನು ಸನ್ಮಾನಿಸಲಾಯಿತು.

ಈ ವೇಳೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈ. ನಾಗರಾಜ, ಜಿಲ್ಲಾ ಕಾರ್ಯದರ್ಶಿ ವೀರಣ್ಣ ಕಳ್ಳಿಮನಿ, ಆರ್.ಬಿ. ರಾಜು, ಮಂಜುನಾಥ ಅಂಗಡಿ, ತಾಲೂಕಾಧ್ಯಕ್ಷ ಶಿವಮೂರ್ತಿ ಇಟಗಿ, ತಾಲೂಕು ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಮಾಟರಂಗಿ, ಸಂಘದ ಗೌರವಾಧ್ಯಕ್ಷ ಇಮಾಮ್‌ ಸಂಕನೂರು ಹಾಗೂ ಸಂಘದ ಪದಾಧಿಕಾರಿಗಳು ಇದ್ದರು.

Share this article