ಕನ್ನಡಪ್ರಭ ವಾರ್ತೆ ನಾಗಮಂಗಲ
ಶಿವಮೊಗ್ಗದ ಜಾವಳ್ಳಿಯ ಜ್ಞಾನದೀಪ ಶಾಲೆಯ 9ನೇ ತರಗತಿ ವಿದ್ಯಾರ್ಥಿ ಕು.ಪಿ.ಬಿ.ಶ್ರೀಕಾಂತ್ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸುವರು. ಶಿಗ್ಗಾಂವಿಯ ಜಕ್ಕನಕಟ್ಟದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆ ಕನ್ನಡ ಕಣ್ಮಣಿ, ಕನ್ನಡ ಮಾಣಿಕ್ಯ, ಕನ್ನಡ ಭೂಷಣ, ಕನ್ನಡ ಕಲಾರತ್ನ ಹಾಗೂ ಸಾವಿತ್ರಿಬಾಯಿಪುಲೆ ಪ್ರಶಸ್ತಿ ಪುರಸ್ಕೃತೆ 9ನೇ ತರಗತಿ ವಿದ್ಯಾರ್ಥಿನಿ ಕು.ಅನುಷಾ ಕರಿಬಸಯ್ಯ ಹಿರೇಮಠ ಸಮ್ಮೇಳನವನ್ನು ಉದ್ಘಾಟಿಸುವರು.
ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯ ವಹಿಸುವರು. ಶಿವಮೊಗ್ಗ ಜಿಲ್ಲಾ ಕಸಾಪ ಅಧ್ಯಕ್ಷ ಡಿ.ಮಂಜುನಾಥ್ ಪ್ರಾಸ್ತಾವಿಕ ನುಡಿಗಳಾಡುವರು. ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಮಠದ ಪ್ರಧಾನ ಕಾರ್ಯದರ್ಶಿ ಪ್ರಸನ್ನನಾಥ ಸ್ವಾಮೀಜಿ, ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಡಾ.ಹಿ.ಚಿ.ಬೋರಲಿಂಗಯ್ಯ, ದಾವಣಗೆರೆ ಪೂರ್ವ ವಲಯದ ಪೊಲೀಸ್ ಮಹಾನಿರ್ದೇಶಕ ಡಾ.ಬಿ.ಆರ್. ರವಿಕಾಂತೇಗೌಡ, ಖ್ಯಾತ ವಾಗ್ಮಿ ಪ್ರೊ.ಕೃಷ್ಣೇಗೌಡ, ಮೈಸೂರಿನ ಡಾ.ಪೃಥು ಪಿ.ಅದ್ವೈತ್, ತರೀಕೆರೆಯ ಕು. ಓ.ಜೆ. ಘಮನ್‌ಮೂರ್ತಿ, ಮಕ್ಕಳ ಸಾಹಿತ್ಯ ಪರಿಷತ್‌ನ ರಾಜ್ಯ ಸಂಘಟನಾ ಕಾರ್ಯದರ್ಶಿ ಎಂ.ಎನ್.ಮಂಜುನಾಥ್ ಸೇರಿದಂತೆ ವಿವಿಧ ಶಾಖಾಮಠಗಳ ಶ್ರೀಗಳು ಅತಿಥಿಗಳಾಗಿ ಪಾಲ್ಗೊಳ್ಳುವರು.ಕಾರ್ಯಕ್ರಮಕ್ಕೂ ಮುನ್ನ ಶ್ರೀಮಠದ ಗಣಪತಿ ದೇವಸ್ಥಾನದಿಂದ ವೇದಿಕೆವರೆಗೆ ವಿವಿಧ ಜಾನಪದ ಕಲಾತಂಡಗಳೊಂದಿಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಲಿದೆ. ಶಿವಮೊಗ್ಗದ ಗುರುಪುರ ಬಿಜಿಎಸ್ ಆಂಗ್ಲಮಾಧ್ಯಮ ಶಾಲೆ ಅಂತಾರಾಷ್ಟ್ರೀಯ ಷಟಲ್ ಬ್ಯಾಡ್ಮಿಂಟನ್ ಆಟಗಾರರಾದ ಎಸ್.ಪವನ್ ಮತ್ತು ಎಸ್.ಪುನೀತ್ ರಾಷ್ಟ್ರಧ್ವಜಾರೋಹಣ ಮಾಡುವರು. ಮದೆ ಬಿಜಿಎಸ್ ಪಬ್ಲಿಕ್‌ಶಾಲೆ ಗೋಲ್ಡನ್ ಬುಕ್‌ಆಫ್ ವರ್ಲ್ಡ್ ರೆಕಾರ್ಡ್ ಯೋಗ ವಿದ್ಯಾರ್ಥಿ ಕು.ಬಿ.ಕೆ.ಸಿಂಚನಾ ನಾಡಧ್ವಜಾರೋಹಣ ನೆರವೇರಿಸುವರು.
ಉದ್ಘಾಟನಾ ಕಾರ್ಯಕ್ರಮದ ನಂತರ ಬಿಜಿಎಸ್ ಸಭಾ ಭವನದಲ್ಲಿ ಮೈಸೂರಿನ ನಾದಶ್ರೀ ಆರ್.ಭಟ್ ಅಧ್ಯಕ್ಷತೆಯಲ್ಲಿ ವಿಚಾರಗೋಷ್ಠಿ ನಡೆದರೆ, ಕ್ಷೇತ್ರದ ಬೆಟ್ಟದ ಮೇಲ್ಭಾಗದ ಗುರುಭವನದಲ್ಲಿ ಬೆಂಗಳೂರಿನ ಎನ್.ಸೃಜನಾ ಅಧ್ಯಕ್ಷತೆಯಲ್ಲಿ ಕವಿಗೋಷ್ಠಿ ನಡೆಯಲಿದೆ. ಆದಿಶಕ್ತಿ ಸಮುದಾಯ ಭವನದಲ್ಲಿ ಶಿವಮೊಗ್ಗ ಪುರಲೆ ಗುರುಪುರದ ಬಿಜಿಎಸ್ ಆಂಗ್ಲಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಎಂ.ಮಾನ್ವಿ ಅಧ್ಯಕ್ಷತೆಯಲ್ಲಿ ಕಥಾಗೋಷ್ಠಿ ನಡೆಯಲಿದೆ.ಸಮ್ಮೇಳನಾಧ್ಯಕ್ಷರ ಪರಿಚಯ:ಶಿವಮೊಗ್ಗ ನಗರದ ಉದ್ಯಮಿ ಬಿ.ಎಚ್.ಪ್ರಕಾಶ್ ಮತ್ತು ಶಿಕ್ಷಕಿ ಎಂ.ದೀಪಾ ದಂಪತಿ ಪುತ್ರ ಪಿ.ಬಿ.ಶ್ರೀಕಾಂತ್ 2011ರ ಏಪ್ರಿಲ್ 25 ರಂದು ಶಿವಮೊಗ್ಗ ನಗರದ ಗುರುಪುರದಲ್ಲಿ ಜನಿಸಿದ್ದು, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕಿನ ಕುವೆಂಪು ವಿದ್ಯಾಸಂಸ್ಥೆ ಹಾಗೂ ರಾಮಕೃಷ್ಣ ವಿದ್ಯಾಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದು ಪ್ರಸ್ತುತ ಶಿವಮೊಗ್ಗದ ಜಾವಳ್ಳಿ ಜ್ಞಾನದೀಪ ಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದಾರೆ.
ಪಿ.ಬಿ.ಶ್ರೀಕಾಂತ್ ಉತ್ತಮ ಭಾಷಣಕಾರ, ಹಾಡುಗಾರ ಹಾಗೂ ಕವಿಯಾಗಿ ಇದುವರೆಗೂ 50ಕ್ಕೂ ಹೆಚ್ಚು ಕವನಗಳನ್ನು ರಚಿಸಿದ್ದಾರೆ. ಈಗಾಗಲೇ ಕವನ ಸಂಕಲನ ಬಿಡುಗಡೆಗೆ ತಯಾರಿಯಲ್ಲಿದೆ. ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. 2024ರಲ್ಲಿ ಶಿವಮೊಗ್ಗದಲ್ಲಿ ನಡೆದ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ವಿಚಾರಗೋಷ್ಠಿಯಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಶಿವಮೊಗ್ಗದಲ್ಲಿ ನಡೆದ ತಾಲೂಕು ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ಹಾಗೂ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಉದ್ಘಾಟಕರಾಗಿ ಆಯ್ಕೆಗೊಂಡಿದ್ದರು.ಕಳೆದ ಸಾಲಿನಲ್ಲಿ ನಡೆದ ಶಾಸ್ತ್ರೀಯ ಸಂಗೀತ ಸ್ಪರ್ಧೆಯಲ್ಲಿ ಶಿವಮೊಗ್ಗ ಜಿಲ್ಲೆಗೆ ಪ್ರಥಮ ಸ್ಥಾನ. 2022-23ನೇ ಸಾಲಿನಲ್ಲಿ ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಡೆಸಿದ ಮಕ್ಕಳ ಹಬ್ಬದಲ್ಲಿ ಸ್ವರಚಿತ ಕವನವಾಚನದಲ್ಲಿ ಶಿವಮೊಗ್ಗ ಜಿಲ್ಲೆಗೆ ಪ್ರಥಮ, ಪ್ರಸ್ತುತ ವರ್ಷದಲ್ಲಿ ಧಾರವಾಡದ ಕರ್ನಾಟಕ ಬಾಲ ವಿಕಾಸ ಅಕಾಡೆಮಿ ವತಿಯಿಂದ ನಡೆದ ಮಕ್ಕಳ ದಿನಾಚರಣೆ ಕಾರ್ಯಕ್ರಮದ ಜಿಲ್ಲಾಮಟ್ಟದ ಭಾಷಣ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದು ಈಗ ಆದಿಚುಂಚನಗಿರಿ ಕ್ಷೇತ್ರದಲ್ಲಿ ಜ.16ರಂದು ನಡೆಯುವ ರಾಜ್ಯಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.