ರಾಜ್ಯ ಮಟ್ಟದ ಪ್ರಸೂತಿ ಸ್ತ್ರೀರೋಗ ತಜ್ಞರ ಸಮಾವೇಶ

KannadaprabhaNewsNetwork | Published : Nov 6, 2024 11:55 PM

ಸಾರಾಂಶ

ಕರ್ನಾಟಕ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ವತಿಯಿಂದ ನವೆಂಬರ್ ೮ರಂದು ಹಿಮ್ಸ್ ಸಭಾಂಗಣದಲ್ಲಿ ೩೪ನೇ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷೆ ಡಾ. ಭಾರತಿ ರಾಜಶೇಖರ್‌ ತಿಳಿಸಿದರು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ಉತ್ತಮ ವಾಗ್ಮಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಕೂಡಿದ ವಿಚಾರ ವಿನಿಮಯಗಳಿಗೆ ಈ ಸಮಾವೇಶ ಸಜ್ಜಾಗಿದೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಕರ್ನಾಟಕ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ವತಿಯಿಂದ ನವೆಂಬರ್ ೮ರಂದು ಹಿಮ್ಸ್ ಸಭಾಂಗಣದಲ್ಲಿ ೩೪ನೇ ರಾಜ್ಯ ಮಟ್ಟದ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಸಂಘದ ಅಧ್ಯಕ್ಷೆ ಡಾ. ಭಾರತಿ ರಾಜಶೇಖರ್‌ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತಾಡಿದ ಅವರು, ವೈದ್ಯಕೀಯ ವಿಜ್ಞಾನ ಮುಂದುವರೆದಂತೆ ಜೊತೆ ಜೊತೆಯಲ್ಲಿ ವೃತ್ತಿಪರತೆಯನ್ನು ಸಹ ಅಭಿವೃದ್ಧಿಗೊಳಿಸಿಕೊಳ್ಳಬೇಕಿದೆ ಹಾಗೂ ಮಹಿಳೆಯ ಸಮಗ್ರ ಆರೋಗ್ಯ ರಕ್ಷಣೆಯಲ್ಲಿ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರ ಪಾತ್ರ ಬಹಳ ಪ್ರಮುಖವಾಗಿದ್ದು, ಈ ನಿಟ್ಟಿನಲ್ಲಿ ಕೆ.ಎಸ್.ಒ.ಜಿ.ಎ. ೩೪ನೇ ಸಮಾವೇಶ ಉತ್ತಮ ವೇದಿಕೆಯಾಗಿ ರೂಪಿತಗೊಂಡಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಪ್ರಖ್ಯಾತಿ ಪಡೆದಿರುವ ಉತ್ತಮ ವಾಗ್ಮಿಗಳು ಮತ್ತು ಸಂಪನ್ಮೂಲ ವ್ಯಕ್ತಿಗಳೊಂದಿಗೆ ಕೂಡಿದ ವಿಚಾರ ವಿನಿಮಯಗಳಿಗೆ ಈ ಸಮಾವೇಶ ಸಜ್ಜಾಗಿದೆ ಎಂದರು.

ವೈದ್ಯರಿಗಷ್ಟೇ ಸೀಮಿತವಾಗಿರದೆ ಸಮಾವೇಶದಲ್ಲಿ ಸಾರ್ವಜನಿಕ ವೇದಿಕೆಯ ಮುಖಾಂತರ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರಿಗೆ ಸ್ತನ ಕ್ಯಾನ್ಸರ್‌ ಮತ್ತು ಗರ್ಭಕೋರಳ ಕ್ಯಾನ್ಸರ್‌ ಬಗ್ಗೆ ಅರಿವಿನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜೊತೆಗೆ ಮಾನ್ಯತಾ ಕಾರ್ಯಕ್ರಮದಡಿಯಲ್ಲಿ ನರ್ಸಿಂಗ್ ವಿದ್ಯಾರ್ಥಿಗಳಿಗೆ ರೋಲ್ ಪ್ಲೇ ಮತ್ತು ಡ್ರಿಲ್ಸ್ ಮುಖಾಂತರ ಚಿಕಿತ್ಸಾ ವಿಧಾನಗಳನ್ನು ಪ್ರಾಯೋಗಿಕವಾಗಿ ತರಬೇತಿ ನೀಡಲು ಕಾರ್ಯಗಾರವನ್ನು ಆಯೋಜಿಸಲಾಗಿದೆ. ರಾಜ್ಯದ ಹಲವು ಜಿಲ್ಲೆಗಳಿಂದ ಸುಮಾರು ೭೦೦ಕ್ಕೂ ಹೆಚ್ಚು ವೈದ್ಯರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ, ಜೊತೆಗೆ ಕಾರ್ಯಕ್ರಮದಲ್ಲಿ ನುರಿತ ತಜ್ಞರಿಂದ ಉಪನ್ಯಾಸ ಹಾಗೂ ಆರೋಗ್ಯದ ಕಾಳಜಿ ಬಗ್ಗೆ ಮಾಹಿತಿ ನೀಡಲಿದ್ದಾರೆ ಎಂದು ಮಾಹಿತಿ ನೀಡಿದರು. ಇದೇ ವೇಳೆ ಡಾ. ಸಾವಿತ್ರಿ, ಡಾ. ಸೌಮ್ಯಮಣಿ ಕೂಡ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಪತ್ರಿಕಾಗೋಷ್ಠಿಯಲ್ಲಿ ಪ್ರಸೂತಿ ತಜ್ಞರಾದ ಡಾ. ಸುಧಾ, ಡಾ. ಗಿರಿಜಾ, ಡಾ. ಸೌಮ್ಯಮಣಿ, ಡಾ. ಪೂರ್ಣಿಮಾ, ಡಾ.ಶ್ರೀ ವಿದ್ಯಾ ಇತರರು ಉಪಸ್ಥಿತರಿದ್ದರು.

Share this article