ಕನ್ನಡಪ್ರಭ ವಾರ್ತೆ ಚಾಮರಾಜನಗರ
ಆಗಸ್ಟ್ 28 ರಂದು ಮೈಸೂರಿನಲ್ಲಿ ನಡೆಯುವ ಕರ್ನಾಟಕ ರಾಜ್ಯ ಪತ್ರಿಕಾ ವಿತರಕರ ರಾಜ್ಯಮಟ್ಟದ ಸಮಾವೇಶವನ್ನು ಯಶಸ್ವಿಗೊಳಿಸಲು ಎಲ್ಲಾ ಸದಸ್ಯರು ಸಹಕರಿಸಬೇಕೆಂದು ಜಿಲ್ಲಾ ಪತ್ರಿಕಾ ವಿತರಕರ ಸಂಘದ ಅಧ್ಯಕ್ಷ ಪುರುಷೋತ್ತಮ್ ಮನವಿ ಮಾಡಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಪತ್ರಿಕಾ ವಿತರಕರ ಸಂಘದಿಂದ ಆಯೋಜಿಸಿದ ಸ್ಮಾರ್ಟ್ ಕಾರ್ಡ್ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿ, ಕರ್ನಾಟಕ ರಾಜ್ಯ ಪತ್ರಿಕಾ ವಿತರಣಾ ಸಂಘದ ಒಕ್ಕೂಟವು ಮೈಸೂರಿನಲ್ಲಿ ಐದನೇ ರಾಜ್ಯಮಟ್ಟದ ಸಮಾವೇಶ ಆಯೋಜಿಸಲಾಗಿದೆ. ಈ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕಾರ್ಮಿಕ ಸಚಿವ ಸಂತೋಷ್ ಲಾಡ್ ಸೇರಿ ಅನೇಕ ಗಣ್ಯರು ಭಾಗವಹಿಸಲಿದ್ದಾರೆ, ಹೀಗಾಗಿ ಪತ್ರಕರ್ತರ ಸಂಘದ ಎಲ್ಲಾ ಸದಸ್ಯರು ತಪ್ಪದೇ ಭಾಗವಹಿಸಬೇಕೆಂದು ತಿಳಿಸಿದರು.
ಪತ್ರಿಕಾ ವಿತರಕರ ಕ್ಷೇಮಕ್ಕಾಗಿ ರಾಜ್ಯ ಸಂಘವು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದೆ, ಈಗಾಗಲೇ ಕಾರ್ಮಿಕ ಸಂಘದಿಂದ ಸದಸ್ಯರಿಗೆ ಸ್ಮಾರ್ಟ್ ಕಾರ್ಡನ್ನು ಕೊಡಿಸಲು ಯಶಸ್ವಿಯಾಗಿದೆ, ಮುಂದಿನ ದಿನಗಳಲ್ಲಿ ಪಿಂಚಣಿ ಸೌಲಭ್ಯ ಹಾಗೂ ನಿವೇಶನ ಕಲ್ಪಿಸಲು ಕ್ರಮ ವಹಿಸಲಿದೆ ಎಂದು ತಿಳಿಸಿದರು.ಸಂಘದ ಗೌರವ ಅಧ್ಯಕ್ಷ ಎಚ್.ಎಸ್. ಚಂದ್ರಶೇಖರ್ ಮಾತನಾಡಿ, ಪತ್ರಿಕೆಗಳನ್ನು ನಡೆಸುವುದು ಏಜೆಂಟರು ಮತ್ತು ವಿತರಿಕರಿಗೆ ಸವಾಲಿನ ಕೆಲಸವಾಗಿದೆ, ಚಳಿ, ಮಳೆ, ಗಾಳಿ ಎನ್ನದೆ ಪ್ರತಿನಿತ್ಯ ಪತ್ರಿಕೆಗಳ ವಿತರಣೆ ಕೆಲಸ ಮಾಡುತ್ತಿದ್ದಾರೆ. ಆದರೆ, ಇತ್ತೀಚಿನ ದಿನಗಳಲ್ಲಿ ಅಗತ್ಯ ದಿನ ಬಳಕೆ ವಸ್ತುಗಳು ಗಗನಕ್ಕೇರಿವೆ, ಪತ್ರಿಕಾ ಸಂಸ್ಥೆಗಳ ಮಾಲೀಕರು ಕೊಡುತ್ತಿರುವ ಕಮಿಷನ್ ತುಂಬಾ ಕಡಿಮೆಯಾಗಿದೆ, ಅಲ್ಲದೆ ಪತ್ರಿಕಾ ವಿತರಕರ ಸಭೆ ಕರೆದು ಸಮಸ್ಯೆಗಳನ್ನು ಆಲಿಸಿ, ಸಾಧ್ಯವಾದಷ್ಟು ಸಹಾಯ ಮಾಡಬೇಕೆಂದು ಸಲಹೆ ನೀಡಿದರು. ಪತ್ರಿಕೆ ಬೆಲೆ ಕೇವಲ ಐದು ರುಪಾಯಿಗಳಾಗಿದ್ದು, ಇದರ ದರವನ್ನು ಸಹ ಹೆಚ್ಚಳ ಮಾಡಬೇಕು, ಈ ಮೂಲಕ ಕಮಿಷನ್ ದರ ಹೆಚ್ಚಿಸಬೇಕೆಂದು ತಿಳಿಸಿ, ಇತ್ತೀಚಿನ ದಿನಗಳಲ್ಲಿ ಪತ್ರಿಕಾ ವಿತರಕರ ಸಂಖ್ಯೆ ಕಡಿಮೆಯಾಗುತ್ತಿದೆ, ಏಜೆಂಟರು ಪತ್ರಿಕೆ ವಿತರಣೆ ಮಾಡುವ ಪರಿಸ್ಥಿತಿ ಬಂದಿದೆ, ಇದರಿಂದ ಮಾನಸಿಕ ಒತ್ತಡ ಹಾಗೂ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ, ಈ ಬಗ್ಗೆ ಸಹ ಪತ್ರಿಕಾ ಸಂಸ್ಥೆಯು ಹಾಗೂ ಸರ್ಕಾರ ಗಂಭೀರ ಚಿಂತನೆ ಮಾಡಬೇಕೆಂದು ತಿಳಿಸಿದರು.
ಹಿರಿಯ ಪತ್ರಿಕಾ ವಿತರಕ ಲಿಂಗಪ್ಪ ಮಾತನಾಡಿ, ಪ್ರತಿಯೊಬ್ಬ ಪತ್ರಿಕಾ ವಿತರಕರು ಸಂಘದ ಸದಸ್ಯತ್ವ ಪಡೆದು ಕಾರ್ಮಿಕ ಇಲಾಖೆ ನೀಡುವ ಸ್ಮಾರ್ಟ್ ಕಾರ್ಡ್ ಪಡೆದು ಅದರಿಂದ ಸಿಗುವ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು.ಪತ್ರಿಕ ವಿತರಕರಿಗೆ ಕಾರ್ಮಿಕ ಇಲಾಖೆಯಿಂದ ಸ್ಮಾರ್ಟ್ ಕಾರ್ಡ್ ಅನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಎನ್. ಅಕ್ಷಯ್, ಉಪಾಧ್ಯಕ್ಷರಾದ ಎಸ್. ಮಹದೇವು ಶೇಖರಪ್ಪ, ಸಹ ಕಾರ್ಯದರ್ಶಿ ಎಲ್. ಶಿವಲಿಂಗ ಮೂರ್ತಿ ಸೇರಿ ಪದಾಧಿಕಾರಿಗಳು ಹಾಗೂ ವಿತರಕರು ಭಾಗವಹಿಸಿದ್ದರು.