ಕನ್ನಡಪ್ರಭ ವಾರ್ತೆ ಚಾಮರಾಜನಗರ
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಾನಪದ ಜಾತ್ರೆ ರೂಪುರೇಷೆಗಳ ಸಂಬಂಧ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪರಿಶಿಷ್ಟ ಜಾತಿ ಸಮುದಾಯದಲ್ಲಿ ಇರುವ ಕಲೆಗಳನ್ನು ಪುನಶ್ಚೇತನಗೊಳಿಸಿ ಮತ್ತು ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ಸಲುವಾಗಿ ಜಾನಪದ ಜಾತ್ರೆ ಶೀರ್ಷಿಕೆಯಡಿಯಲ್ಲಿ ರಾಜ್ಯ ಸರ್ಕಾರ ವಿವಿಧ ಪ್ರಕಾರದ ಜಾನಪದ ಕಲೆಗಳನ್ನು ಒಂದೇ ಸೂರಿನಡಿ ತಂದು ಕಲಾವಿದರಿಗೆ ವೇದಿಕೆ ಕಲ್ಪಿಸಿಕೊಡುವುದು ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ರಾಜ್ಯಮಟ್ಟದ ಜಾನಪದ ಜಾತ್ರೆ ಕಾರ್ಯಕ್ರಮ ಆಯೋಜನೆಗೆ ಮಲೆ ಮಹದೇಶ್ವರಬೆಟ್ಟವನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು ಜಿಲ್ಲೆಗೆ ಈ ಅವಕಾಶ ದೊರೆತಿರುವುದನ್ನು ಸದುಪಯೋಗಪಡಿಸಿಕೊಳ್ಳಬೇಕು. ರಾಜ್ಯದ ವಿವಿಧ ಜಾನಪದ ಕಲಾತಂಡಗಳನ್ನು ಗುರುತಿಸಿ 40 ರಿಂದ 45 ವಿವಿಧ ಕಲಾ ಪ್ರಕಾರಗಳ ತಂಡಗಳಿಗೆ ತರಬೇತಿ ಮತ್ತು ಪ್ರದರ್ಶನಕ್ಕೆ ಅವಕಾಶವಾಗುತ್ತಿದೆ ಎಂದು ತಿಳಿಸಿದರು.ಜಾನಪದ ಜಾತ್ರೆ ಕಾರ್ಯಕ್ರಮ ಮಲೆಮಹದೇಶ್ವರ ಬೆಟ್ಟದ ರಂಗಮಂದಿರದಲ್ಲಿ ಫೆ.21ರಂದು ಸಂಜೆ ನಿಗದಿಯಾಗಿದೆ. ಚಾಮರಾಜನಗರ ಜಿಲ್ಲೆಯ ಜಾನಪದ ಕಲಾವಿದರಿಗೂ ಹೆಚ್ಚಿನ ಅವಕಾಶ ಹಾಗೂ ಆದ್ಯತೆ ನೀಡಬೇಕು. ರಾಜ್ಯದ ವಿವಿಧ ಭಾಗಗಳಿಂದ ಅಂದಾಜು 500 ಕಲಾವಿದರು ಭಾಗವಹಿಸುವ ನಿರೀಕ್ಷೆಯಿದೆ. ಈ ಎಲ್ಲ ಕಲಾವಿದರಿಗೆ ವಾಸ್ತವ್ಯ, ಊಟ ಉಪಹಾರ ಸೇರಿದಂತೆ ಎಲ್ಲ ಅಗತ್ಯ ಸೌಕರ್ಯಗಳನ್ನು ಅಚ್ಚುಕಟ್ಟಾಗಿ ಒದಗಿಸಬೇಕೆಂದು ಸೂಚಿಸಿದರು.
ಜಾನಪದ ಜಾತ್ರೆ ಸುಸೂತ್ರವಾಗಿ ನಡೆಯಲು ವಿವಿಧ ಸಮಿತಿಗಳನ್ನು ನೇಮಕ ಮಾಡಿ ಜವಾಬ್ದಾರಿ ನೀಡಲಾಗುತ್ತದೆ. ಶಿಷ್ಟಾಚಾರದ ಪ್ರಕಾರ ಆಹ್ವಾನ ಪತ್ರಿಕೆ ಮುದ್ರಣ ಇನ್ನಿತರ ಪ್ರಕ್ರಿಯೆಗಳು ಕೈಗೊಳ್ಳಬೇಕಿದೆ. ಯಾವುದೇ ಗೊಂದಲಕ್ಕೆ ಅವಕಾಶವಾಗದಂತೆ ಸಾಕಷ್ಟು ಮುಂಚಿತವಾಗಿಯೇ ಎಲ್ಲ ಸಿದ್ದತೆಗಳನ್ನು ಮಾಡಿಕೊಳ್ಳಬೇಕು. ರಾಜ್ಯಮಟ್ಟದ ಜಾನಪದ ಜಾತ್ರೆ ಯಶಸ್ವಿಗೊಳಿಸಲು ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಿ ಎಂದು ತಿಳಿಸಿದರು.
ಜಿಪಂ ಸಿಇಒ ಮೋನಾರೋತ್, ಎಡಿಸಿ ಗೀತಾ ಹುಡೇದ, ಮಲೆಮಹದೇಶ್ವರ ಕ್ಷೇತ್ರ ಅಭಿವೃದ್ದಿ ಪ್ರಾಧಿಕಾರದ ಕಾರ್ಯದರ್ಶಿ ಎ.ಈ ರಘು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮೈಸೂರು ವಿಭಾಗದ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನಸ್ವಾಮಿ, ಚಾಮರಾಜನಗರ ಜಿಲ್ಲೆಯ ಸಹಾಯಕ ನಿರ್ದೇಶಕ ಉದಯ್ ಕುಮಾರ್, ಜಾನಪದ ಜಾತ್ರೆ ಕಾರ್ಯಕ್ರಮದ ಪ್ರಧಾನ ನಿರ್ದೇಶಕ ಕುಂತೂರು ಕುಮಾರ್, ನಿರ್ದೇಶಕ ಹನುಮಂತನಾಯಕ, ಸಂಚಾಲಕರಾದ ಡಾ. ಸಬ್ಬನಹಳ್ಳಿ ರಾಜು, ಕೆ. ನಾಗರಾಜು, ಹೆಚ್.ಸಿ. ನಿಂಗರಾಜು, ಬಿ. ಅನಿಲ್ ಕುಮಾರ್, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕ ಯೋಗಾನಂದ್, ಹನೂರು ತಹಸೀಲ್ದಾರ್ ಗುರುಪ್ರಸಾದ್, ತಾಪಂ ಇಒ ಉಮೇಶ್ ಇನ್ನಿತರ ಅಧಿಕಾರಿಗಳು ಇದ್ದರು.