ಕನ್ನಡಪ್ರಭ ವಾರ್ತೆ ಮೈಸೂರು
ಮೊದಲ ದಿನ ಬೆಳಗ್ಗೆ 10ಕ್ಕೆ ರಾಣಿ ಬಹುದ್ದೂರ್ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ಉದ್ಘಾಟಿಸುವರು. ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಂ, ಮೈಸೂರು ವಿವಿ ಯೋಜನೆ ಮೇಲುಸ್ತುವಾರಿ ಮತ್ತು ಮೌಲ್ಯಮಾಪನ ಮಂಡಳಿ ನಿರ್ದೇಶಕ ಪ್ರೊ.ಎನ್. ನಾಗರಾಜ್ ಆಗಮಿಸುವರು.
ವಿಭಾಗದ ನಿವೃತ್ತ ಪ್ರಾಧ್ಯಾಪಕ ಕುಶಾಲ್ ಕುಮಾರ್, ಪತ್ರಕರ್ತ ದ.ಕೋ. ಹಳ್ಳಿ ಚಂದ್ರಶೇಖರ್, ಕಸ್ತೂರಿ ನಿಯತಕಾಲಿಕೆಯ ಸಂಪಾದಕಿ ಶಾಂತಲಾ ಧರ್ಮರಾಜ್, ಹಿರಿಯ ಪತ್ರಕರ್ತರಾದ ಆರ್.ಪಿ. ಜಗದೀಶ್, ಪ್ರೀತಿ ನಾಗರಾಜ್ ಅವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ನಂತರ ರಿಲ್ಸ್, ಛಾಯಾಚಿತ್ರ, ಕಥೆ ಬರವಣಿಗೆ, ವರದಿಗಾರಿಕೆ, ಚರ್ಚಾ ಸ್ಪರ್ಧೆ, ರಸಪ್ರಶ್ನೆ ಹಾಗೂ ಸುದ್ದಿ ನಿರೂಪಣೆ ಸ್ಪರ್ಧೆಗಳು ನಡೆಯಲಿವೆ. ಸಂಜೆ 5:30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಟ ಹಾಗೂ ಗಾಯಕ ಚಂದನ್ ಶೆಟ್ಟಿ ರಂಜಿಸುವರು.
ಎರಡನೆಯ ದಿನ ಪೋಸ್ಟರ್ ಮೇಕಿಂಗ್, ರೇಡಿಯೋ ಜಾಕಿ, ಜಾಹೀರಾತು ರಚನೆ, ಕಿರುಚಿತ್ರ ಸ್ಪರ್ಧೆ ನಡೆಯಲಿವೆ. ನಂತರದಲ್ಲಿ ಸಮಾರೋಪ ಮತ್ತು ಬಹುಮಾನ ವಿತರಣೆ ಸಮಾರಂಭದಲ್ಲಿ ಟಿವಿ5 ಕನ್ನಡ ಮಾಧ್ಯಮದ ಪ್ರಧಾನ ಸಂಪಾದಕ ರಮಾಕಾಂತ್ ಆರ್ಯನ್, ಹಾಯ್ ಬೆಂಗಳೂರು ವಾರಪತ್ರಿಕೆಯ ಸಂಪಾದಕಿ ಭಾವನ ಬೆಳಗೆರೆ, ವಿಕ್ರಾಂತ್ ಗೌಡ, ಎಚ್.ಎಂ. ಫೌಂಡೇಶನ್ ಸಂಸ್ಥಾಪಕ ಮುತ್ತುರಾಜ್ ಆಗಮಿಸುವರು.ಕಾರ್ಯಕ್ರಮದಲ್ಲಿ ವಿಭಾಗದ ಪ್ರಾಧ್ಯಾಪಕರಾದ ಸಿ.ಕೆ. ಪುಟ್ಟಸ್ವಾಮಿ, ಎನ್. ಮಮತಾ, ಅತಿಥಿ ಉಪನ್ಯಾಸಕರು ಸಂಶೋಧನಾ ವಿದ್ಯಾರ್ಥಿಗಳು ಪಾಲ್ಗೊಳ್ಳುವರು. ರಾಜ್ಯದ್ಯಂತ ಹಲವಾರು ಪ್ರತಿಷ್ಠಿತ ಸಂಸ್ಥೆಗಳ ಪತ್ರಿಕೋದ್ಯಮ ವಿದ್ಯಾರ್ಥಿಗಳು ಆಗಮಿಸುವುದಾಗಿ ವಿಭಾಗದ ಮುಖ್ಯಸ್ಥೆ ಪ್ರೊ.ಎಂ.ಎಸ್. ಸಪ್ನಾ ತಿಳಿಸಿದ್ದಾರೆ.