ಕನ್ನಡಪ್ರಭ ವಾರ್ತೆ ನಾಗಮಂಗಲ
ನಾಗಮಂಗಲ ಕನ್ನಡ ಸಂಘವು ನ.23ರಿಂದ 29ರವರೆಗೆ ಕನ್ನಡ ರಾಜ್ಯೋತ್ಸವದ ಅಂಗವಾಗಿ 17ನೇ ವರ್ಷದ ರಾಜ್ಯಮಟ್ಟದ ನಾಗರಂಗ ನಾಟಕೋತ್ಸವಕ್ಕೆ ಸಕಲ ಸಿದ್ಧತೆ ನಡೆಸುತ್ತಿದೆ ಎಂದು ಅಧ್ಯಕ್ಷೆ ಪುಟ್ಟಮ್ಮ ಮಾಯಣ್ಣಗೌಡ ತಿಳಿಸಿದರು.ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಶುಕ್ರವಾರ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 5 ದಶಕಗಳಿಂದ ವಿವಿಧ ಅಭಿರುಚಿಯ ಕಾರ್ಯಕ್ರಮಗಳನ್ನು ಆಯೋಜಿಸುವ ಜೊತೆಗೆ ಸಾಹಿತ್ಯ ಹಾಗೂ ಸಾಂಸ್ಕೃತಿಕ ಸೊಬಗನ್ನು ಸಾರ್ವಜನಿಕರಿಗೆ ಉಣಬಡಿಸಿಕೊಂಡು ಬಂದಿರುವ ಕನ್ನಡ ಸಂಘವು ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ನಡೆಸುವುದಲ್ಲದೆ, ನಾಡು, ನುಡಿಗೆ ಸೇವೆ ಸಲ್ಲಿಸುವ ಶ್ರೇಷ್ಠರನ್ನು ಆಹ್ವಾನಿಸಿ ಗೌರವಿಸುವುದನ್ನು ರೂಢಿಸಿಕೊಂಡು ಬಂದಿದೆ ಎಂದರು.
ಕಲೆ, ಸಾಹಿತ್ಯ, ಜಾನಪದ ಮತ್ತು ರಂಗಭೂಮಿ ಕ್ಷೇತ್ರದಲ್ಲಿ ನಾಡಿನ ಗಮನಸೆಳೆದಿರುವ ಜಾನಪದ ಲೋಕದ ತವರು ನೆಲದಲ್ಲಿ ಏಳು ದಿನಗಳ ಕಾಲ ರಂಗಾಸಕ್ತರಿಗೆ ನಾಟಕಗಳ ರಸದೌತಣ ನೀಡಲು ಉತ್ಸುಕವಾಗಿದೆ ಎಂದು ಹೇಳಿದರು.ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದ ಡಾ.ಎಸ್.ಎಲ್.ಭೈರಪ್ಪ ನೆನಪಿನ ವೇದಿಕೆಯಲ್ಲಿ ನ.23ರ ಸಂಜೆ 6.30ಕ್ಕೆ ನಾಗರಂಗ ನಾಟಕೋತ್ಸವಕ್ಕೆ ಚಾಲನೆ ಸಿಗಲಿದೆ. ಉದ್ಘಾಟನಾ ಸಮಾರಂಭದ ವೇದಿಕೆಯಲ್ಲಿ ಮೈಸೂರಿನ ಖ್ಯಾತ ಅನುವಾದಕ ಪ್ರಧಾನ್ ಗುರುದತ್ ಅವರಿಗೆ ನುಡಿ ಗೌರವ ಮತ್ತು ಹಿರಿಯ ರಂಗಕರ್ಮಿ ಹಾಗೂ ಚಿತ್ರನಟಿ ಎಂ.ಎನ್.ಲಕ್ಷ್ಮೀದೇವಿ ಅವರಿಗೆ ರಂಗಗೌರವ ಸಲ್ಲಿಸಲಾಗುವುದು ಎಂದರು.
ನ.29ರ ಸಂಜೆ 6.30ಕ್ಕೆ ಜರುಗುವ ಸಮಾರೋಪ ಸಮಾರಂಭದಲ್ಲಿ ರಂಗಕರ್ಮಿ ಹಾಗೂ ಚಿತ್ರನಟ ಕಿಶೋರ್ ಮತ್ತು ಮೈಸೂರಿನ ರಂಗಾಯಣ ನಿರ್ದೇಶಕ ಸತೀಶ್ ತಿಪಟೂರು ಅತಿಥಿಗಳಾಗಿ ಪಾಲ್ಗೊಳ್ಳುವರು. ಸಂಘದ ಅಧ್ಯಕ್ಷೆ ಪುಟ್ಟಮ್ಮ ಮಾಯಣ್ಣಗೌಡ ಅಧ್ಯಕ್ಷತೆ ವಹಿಸುವರು ಎಂದು ಹೇಳಿದರು.ಸಂಘದ ಮಾಜಿ ಅಧ್ಯಕ್ಷ ಲ.ಬಾಲಕೃಷ್ಣ ಮಾತನಾಡಿ, ನ.23ರ ಸಂಜೆ ನಾಗರಂಗ ನಾಟಕೋತ್ಸವ ಉದ್ಘಾಟನಾ ಸಮಾರಂಭದ ನಂತರ ಬೆಂಗಳೂರಿನ ಐಕ್ಯ ತಂಡ ಪ್ರಸ್ತುತಪಡಿಸುವ ಗಣೇಶ್ ಮಂದಾರ್ತಿ ನಿರ್ದೇಶನದ ‘ನಟಧರ್ಮ’ ನಾಟಕ ಪ್ರದರ್ಶನಗೊಳ್ಳಲಿದೆ. ನ.24ರ ಸಂಜೆ ಶ್ರೀರಂಗಪಟ್ಟಣದ ನಿರ್ದಿಗಂತ ಪ್ರಸ್ತುತಪಡಿಸುವ ಶಕೀಲ್ ಅಹ್ಮದ್ ನಿರ್ದೇಶನದ ‘ಕೊಡಲ್ಲ ಅಂದ್ರೆ ಕೊಡಲ್ಲ’. ನ.25ರ ಸಂಜೆ ಹೆಗ್ಗೋಡು ನೀನಾಸಂ ಪ್ರಸ್ತುತಪಡಿಸುವ ಕೊಡಗು ಮಂಜು ನಿರ್ದೇಶನದ ‘ಮೀಡಿಯಾ’. ನ.26ರ ಸಂಜೆ ಸಾಗರದ ಸ್ಪಂದನ ರಿಜಿಸ್ಟರ್ ಪ್ರಸ್ತುತಿಯ ಬಡಿಗೇರ್ ಮಂಜುನಾಥ್ ನಿರ್ದೇಶನದ ‘ಪ್ರಾಣಪದ್ಮಿನಿ’. ನ.27ರ ಸಂಜೆ ಬೆಂಗಳೂರಿನ ಬಿಎಂಟಿಸಿ ನೌಕರರು ಪ್ರಸ್ತುತಪಡಿಸುವ ಆರ್.ಕುಮಾರಸ್ವಾಮಿ ನಾಯಕ್ ನಿರ್ದೇಶನದ ‘ತಾರಕ್ಕ ಬಿಂದಿಗೆ’. ನ.28ರ ಸಂಜೆ ಬೆಂಗಳೂರಿನ ನೆನಪು ಕಲ್ಚರಲ್ ಆ್ಯಂಡ್ ಎಜುಕೇಷನಲ್ ಚಾರಿಟಬಲ್ ಟ್ರಸ್ಟ್ ಪ್ರಸ್ತುತಿಯ ಪುನೀತ್ ರಂಗಾಯಣ ನಿರ್ದೇಶನದ ‘ಮಾಯಾ ದ್ವೀಪ’. ಹಾಗೂ ನ.29ರ ಸಂಜೆ ಮೂಡಬಿದರೆಯ ಆಳ್ವಾಸ್ ರಂಗ ಅಧ್ಯಯನ ತಂಡ ಪ್ರಸ್ತುತಿಯ ಡಾ.ಜೀವನ್‌ರಾಂ ಸುಳ್ಯ ನಿರ್ದೇಶನದ ‘ನಾಯಿಮರಿ’ ಎಂಬ ನಾಟಕಗಳು ಪ್ರದರ್ಶನಗೊಳ್ಳಲಿವೆ ಎಂದರು.
ಸಂಘದ ಸಂಚಾಲಕ ಎನ್.ನಟರಾಜ್ ಮಾತನಾಡಿ, ಏಳು ದಿನಗಳ ಕಾಲ ನಡೆಯುವ ಈ ರಂಗ ಸಪ್ತಾಹದಲ್ಲಿ ಪುಸ್ತಕ ಮಳಿಗೆ ಸೇರಿದಂತೆ ಉತ್ತರ ಕರ್ನಾಟಕ ಶೈಲಿಯ ತಿಂಡಿ ತಿನಿಸುಗಳು, ಅಪ್ಪಟ ಖಾದಿಯ ಸಿದ್ಧ ಉಡುಪುಗಳು, ಗೃಹೋಪಯೋಗಿ ಕರಕುಶಲ ಪದಾರ್ಥಗಳ ಹತ್ತಾರು ಮಳಿಗೆಗಳು ತೆರೆಯಲಿವೆ ಎಂದರು.ಸುದ್ಧಿಗೋಷ್ಠಿಯಲ್ಲಿ ಕನ್ನಡ ಸಂಘದ ಪದಾಧಿಕಾರಿಗಳು ಹಾಜರಿದ್ದರು.