ಹೊಸಕೋಟೆ: ಸುಪ್ರೀಂಕೋರ್ಟ್ ಆದೇಶದಂತೆ ಒಳಮೀಸಲಾತಿ ಹಂಚಿಕೆಗೆ ಬೇಕಾಗಿರುವ ದತ್ತಾಂಶವನ್ನು ಸಂಗ್ರಹಿಸಲು ಹೊಸ ಸಮೀಕ್ಷೆಯೇ ಅಂತಿಮ ವಿಧಾನವಾಗಿರುವ ಕಾರಣ ಒಳಮೀಸಲಾತಿ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣವನ್ನು ಮಾ.23ರ ಭಾನುವಾರದಂದು ಬೆಂಗಳೂರಿನ ವಸಂತ ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದೆ ಎಂದು ಹೋರಾಟಗಾರ ಹಾಗೂ ಹಿರಿಯ ವಕೀಲ ಡಾ.ಡಿ.ಜಿ.ಸಾಗರ್ ತಿಳಿಸಿದರು.
ದಲಿತ ಸಂಘರ್ಷ ಸಮಿತಿ ಕರ್ನಾಟಕ ಬೆಂಗಳೂರು ವಿಭಾಗೀಯ ಸಂಚಾಲಕ ಮಂಜುನಾಥ್ ಅಣ್ಣಯ್ಯ ಮಾತನಾಡಿ, ಒಳಮೀಸಲಾತಿ ವಿಚಾರವಾಗಿ ನ್ಯಾಯಮೂರ್ತಿಗಳಾದ ನಾಗಮೋಹನ ದಾಸ್ ಎಚ್.ಎನ್ ಅವರ ಏಕ ಸದಸ್ಯ ವಿಚಾರ ಆಯೋಗ ಅಧ್ಯಕ್ಷರಿಗೆ ಮನವಿ ಸಲ್ಲಿಸುವುದರ ಜೊತೆಗೆ ಮಧ್ಯಾಹ್ನ 2.30 ಗಂಟೆಗೆ ರಾಜ್ಯಮಟ್ಟದ ವಿಚಾರ ಸಂಕಿರಣ ಪ್ರಾರಂಭವಾಗಲಿದೆ. ಇದರಲ್ಲಿ ಕುಲಬಾಂಧವರು, ವಿಚಾರವಂತರು, ಗಣ್ಯರು, ವಕೀಲರು, ವಿದ್ಯಾರ್ಥಿಗಳು, ಸಾಮಾಜಿಕ ಕಾರ್ಯಕರ್ತರು ಹಾಗೂ ಕರ್ನಾಟಕ ರಾಜ್ಯ ಬಲಗೈ ಹೊಲೆಯ ಸಂಬಂಧಿತ ಜಾತಿಗಳ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದರು. ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಲೋಕೇಶ್, ತಾಲೂಕು ಸಂಚಾಲಕ ಎಸ್.ನಾರಾಯಣಸ್ವಾಮಿ ಹಾಜರಿದ್ದರು.