ರಾಜ್ಯಾಧ್ಯಕ್ಷ ಡಾ.ಮಹೇಶ ಜೋಷಿ ವಜಾಗೊಳಿಸಿ

KannadaprabhaNewsNetwork |  
Published : Jun 18, 2025, 02:49 AM IST
17ಕೆಡಿವಿಜಿ3, 4-ದಾವಣಗೆರೆಯಲ್ಲಿ ಮಂಗಳವಾರ ಪ್ರೊ.ಎಸ್.ಜಿ.ಮರುಳಸಿದ್ದಯ್ಯ, ಜಾಣಗೆರೆ ವೆಂಕಟರಾಮಯ್ಯ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಸರ್ವಾಧಿಕಾರಿ ಧೋರಣೆ ತೋರುತ್ತಿರುವ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಷಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಅಮಾನತುಪಡಿಸಿ, ಕಸಾಪ ಕಾರ್ಯಕಾರಿ ಸಮಿತಿ ವಿಸರ್ಜಿಸಿ, ಆಡಳಿತಾಧಿಕಾರಿ ನೇಮಿಸುವಂತೆ ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಮರುಳಸಿದ್ದಯ್ಯ, ಜಾಣಗೆರೆ ವೆಂಕಟರಾಮಯ್ಯ ಸೇರಿದಂತೆ ಸಾಹಿತಿಗಳು, ಲೇಖಕರು, ಚಿಂತಕರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

- ಕ.ಸಾ.ಪ.ದಲ್ಲಿ ಸರ್ವಾಧಿಕಾರಿ ಧೋರಣೆ: ಪ್ರೊ.ಮರುಳಸಿದ್ದಯ್ಯ ಆರೋಪ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಸರ್ವಾಧಿಕಾರಿ ಧೋರಣೆ ತೋರುತ್ತಿರುವ ರಾಜ್ಯಾಧ್ಯಕ್ಷ ಡಾ.ಮಹೇಶ ಜೋಷಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಅಮಾನತುಪಡಿಸಿ, ಕಸಾಪ ಕಾರ್ಯಕಾರಿ ಸಮಿತಿ ವಿಸರ್ಜಿಸಿ, ಆಡಳಿತಾಧಿಕಾರಿ ನೇಮಿಸುವಂತೆ ಹಿರಿಯ ಸಾಹಿತಿ ಪ್ರೊ. ಎಸ್.ಜಿ. ಮರುಳಸಿದ್ದಯ್ಯ, ಜಾಣಗೆರೆ ವೆಂಕಟರಾಮಯ್ಯ ಸೇರಿದಂತೆ ಸಾಹಿತಿಗಳು, ಲೇಖಕರು, ಚಿಂತಕರು ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರೊ. ಎಸ್.ಜಿ. ಮರುಳಸಿದ್ದಯ್ಯ ಅವರು, ಕನ್ನಡ ಸಾಹಿತ್ಯ ಪರಿಷತ್‌ ಕೇಂದ್ರ ಸಮಿತಿಯಲ್ಲಿ ಅಶಿಸ್ತು ತಾಂಡವವಾಡುತ್ತಿದೆ. ನಿಯಮಬಾಹಿರ ಸಭೆಗಳು, ಒಡೆದು ಆಳುವ ನೀತಿ ಅನುಸರಿಸುತ್ತಿರುವ ಡಾ.ಮಹೇಶ ಜೋಷಿ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ತಕ್ಷಣವೇ ವಜಾ ಮಾಡಬೇಕು ಎಂದರು.

ಡಾ.ಮಹೇಶ ಜೋಷಿ ಪ್ರಶ್ನಿಸಿದವರನ್ನೇ ತೇಜೋವಧೆ ಮಾಡುತ್ತಿದ್ದಾರೆ. ನೋಟೀಸ್ ಕಳಿಸುವುದು, ಕಸಾಪ ಸದಸ್ಯತ್ವದಿಂದ ಅಮಾನತುಪಡಿಸುವ ಬೆದರಿಕೆ ಕೆಲಸ ನಡೆದಿದೆ. ಕಸಾಪದಲ್ಲಿ ಆರ್ಥಿಕ ಅಶಿಸ್ತು ಹೊಂದಿದ್ದಾರೆ. ಸಾಹಿತ್ಯಿಕ ಚಟುವಟಿಕೆ ನಡೆಸದೇ ರಾಜಕೀಯ ಕೆಲಸ ಮಾಡುತ್ತಿದ್ದಾರೆ. ಅಂಥ ವ್ಯಕ್ತಿ ವಿರುದ್ಧ ರಾಜ್ಯ ಸರ್ಕಾರ ಸಮಿತಿ ರಚಿಸಿ, ತನಿಖೆ ಮಾಡಿಸಿ, ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ರಾಜ್ಯದ 31 ಜಿಲ್ಲೆಗಳ ಪೈಕಿ 29 ಜಿಲ್ಲೆಗಳ ಕಸಾಪ ಜಿಲ್ಲಾಧ್ಯಕ್ಷರು ಜೋಷಿ ಹೇಳಿದ್ದು ಕೇಳುತ್ತಾರೆ. ಆದರೆ, ಶಿವಮೊಗ್ಗ, ಬೆಂಗಳೂರು ಜಿಲ್ಲೆಗಳ ಅಧ್ಯಕ್ಷರು ಜೋಷಿ ಅವರಿಗೆ ಸೊಪ್ಪು ಹಾಕುವುದಿಲ್ಲ. ಶತಮಾನದ ಇತಿಹಾಸವಿರುವ ಕ.ಸಾ.ಪ.ಗೆ ಈವರೆಗೆ ಕೇವಲ 6 ಸಲ ತಿದ್ದುಪಡಿಯಾಗಿದೆ. ಆದರೆ, ಮಹೇಶ ಜೋಷಿ ಅಧ್ಯಕ್ಷರಾದ ಮೂರೂವರೆ ವರ್ಷದಲ್ಲೇ 3 ತಿದ್ದುಪಡಿಯಾಗಿದೆ. ಅಧ್ಯಕ್ಷರ ಅವಧಿ 5 ವರ್ಷಕ್ಕೆ ಹೆಚ್ಚಿಸಿದ್ದಾರೆ. ಸಾಹಿತ್ಯ ಸಮ್ಮೇಳನಕ್ಕೆ ₹40 ಕೋಟಿ ಅನುದಾನ ಕೇಳಿದ್ದಾರೆ. ಸಮ್ಮೇಳನಕ್ಕೆ ದುಂದುವೆಚ್ಚದ ಅವಶ್ಯಕತೆ ಇಲ್ಲ. ಅದೇ ಹಣದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಸರ್ಕಾರ ಕಾಯಕಲ್ಪ ನೀಡಲಿ. ಸಮ್ಮೇಳನವನ್ನು ಬೇಡ ಎನ್ನುವುದಿಲ್ಲ. ಆದರೆ, ಸಮ್ಮೇಳನದ ಹೆಸರಿನಲ್ಲಿ ಯಾರೋ ತಮ್ಮ ಬೇಳೆ ಬೇಯಿಸಿಕೊಳ್ಳಲು ಅವಕಾಶ ಮಾಡಿಕೊಡಬಾರದು ಎಂದು ಸ್ಪಷ್ಟಪಡಿಸಿದರು.

ಮಾಜಿ ಶಾಸಕ ಮಹಿಮಾ ಜೆ. ಪಟೇಲ್, ಸಾಹಿತಿಗಳಾದ ವಸುಂಧರಾ ಭೂಪತಿ, ಡಾ.ಮಲ್ಲಿಕಾರ್ಜುನ ಕಲಮನರಹಳ್ಳಿ, ಆರ್.ಜಿ.ಹಳ್ಳಿ ನಾಗರಾಜ, ಸುಕನ್ಯಾ ತ್ಯಾವಣಿಗೆ ಇತರರು ಇದ್ದರು.

- - -

(ಕೋಟ್‌)

ಸಮಿತಿ ವರದಿ ಬರುವವರೆಗೂ ಮಹೇಶ ಜೋಷಿ ಅವರನ್ನು ಕ.ಸಾ.ಪ.ದಿಂದ ಅಮಾನತುಪಡಿಸಿ, ಪರಿಷತ್‌ಗೆ ಆಡಳಿತಾಧಿಕಾರಿ ನೇಮಿಸಬೇಕು. ವರದಿ ಬಂದ ನಂತರ ಪರಿಷತ್‌, ಸರ್ವ ಸದಸ್ಯರ ಪರವಾಗಿ ಡಾ.ಮಹೇಶ ಜೋಷಿ ಇದ್ದರೆ ಮುಂದುವರಿಸಲಿ. ಇಲ್ಲವಾದರೆ, ಅಂತಹವರನ್ನು ಕಸಾಪ ಸದಸ್ಯತ್ವದಿಂದಲೇ ವಜಾ ಮಾಡಬೇಕು. ಸಂಡೂರಿನಲ್ಲಿ ಜೂ.27ರಂದು ಕರೆದಿರುವ ಸಾಮಾನ್ಯ ಸಭೆ ರದ್ದುಪಡಿಸಿ, ಬೆಂಗಳೂರು, ದಾವಣಗೆರೆ ಅಥವಾ ಮಂಡ್ಯದಲ್ಲಿ ನಡೆಸಬೇಕು

- ಪ್ರೊ. ಎಸ್.ಜಿ. ಮರುಳಸಿದ್ದಯ್ಯ

- - -

-17ಕೆಡಿವಿಜಿ3, 4:

ಸುದ್ದಿಗೋಷ್ಠಿಯಲ್ಲಿ ಪ್ರೊ. ಎಸ್.ಜಿ. ಮರುಳಸಿದ್ದಯ್ಯ ಮಾತನಾಡಿದರು. ಜಾಣಗೆರೆ ವೆಂಕಟರಾಮಯ್ಯ, ಮಹಿಮಾ ಪಟೇಲ್, ವಸುಂಧರಾ ಭೂಪತಿ ಇತರರು ಇದ್ದರು.

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ