ರೋಣ: ಸಹಕಾರ ಕ್ಷೇತ್ರದಲ್ಲಿ ಕರ್ನಾಟಕವು ಹಾಲಿನ ಉತ್ಪಾದನೆಯಲ್ಲಿ ಇಡೀ ದೇಶದಲ್ಲಿ ೨ನೇ ಸ್ಥಾನದಲ್ಲಿದ್ದು, ಧಾರವಾಡ ಹಾಲು ಒಕ್ಕೂಟ ವೈಜ್ಞಾನಿಕ ಮಾದರಿಯಲ್ಲಿ ಹಾಲು ಶೇಖರಣೆ ಮತ್ತು ರೈತರ ಹಿತರಕ್ಷಣೆಗೆ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ನೀಲಕಂಠ ಅಸೂಟಿ ತಿಳಿಸಿದರು.
ರೈತರಿಗೆ ಸೂಕ್ತ ತರಬೇತಿ, ಮೇವಿನ ಬಿತ್ತನೆ ಬೀಜ, ಪಶು ಆಹಾರ, ಜಾನುವಾರುಗಳಿಗೆ ಉಚಿತ ತುರ್ತು ಪಶುವೈದ್ಯಕೀಯ ಸೇವೆಗಳನ್ನು ಮನೆ ಬಾಗಿಲಿಗೆ ಒದಗಿಸಲಾಗುತ್ತಿದೆ. ರೈತರ ಹಿತದೃಷ್ಟಿಯಿಂದ ಜಾನುವಾರುಗಳಿಗೆ ವಿಮೆ ಸೌಲಭ್ಯ ಒದಗಿಸಲಾಗುತ್ತಿದೆ. ಮಿಲ್ಕ ಪೌಡರ್, ಪನ್ನೀರ್ ತಯಾರಿಕೆ, ಒಕ್ಕೂಟದಿಂದ ಅತ್ಯಾಧುನಿಕ ಮಿಲ್ಕ್ ಪೌಡರ್ ಪ್ಲಾಂಟ್ ಸ್ಥಾಪಿಸಲಾಗಿದೆ. ನಿತ್ಯ ಸುಮಾರು 30 ಸಾವಿರ ಕೆಜಿ ಹಾಲಿನ ಪುಡಿಯನ್ನು ಉತ್ಪಾದಿಸಿ ಅದರಿಂದ ಬಂದ ಲಾಭಾಂಶವನ್ನು ನೇರವಾಗಿ ರೈತರಿಗೆ ತಲುಪಿಸಲಾಗುತ್ತಿದೆ. ಡೈರಿ ರಂಗದಲ್ಲಿ ಉದ್ಯೋಗ ಮತ್ತು ಉತ್ಪಾದನೆ ಹೆಚ್ಚಿಸಲು ಪನ್ನಿರ್ ತಯಾರಿಕಾ ಘಟಕಗಳಿಗೆ ಹೆಚ್ಚಿನ ಉತ್ತೇಜನ ನೀಡಲಾಗಿದೆ ಎಂದರು.
ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಿ.ಟಿ. ಕಳಸದ ಮಾತನಾಡಿ, ರಾಜ್ಯದಲ್ಲಿ ಒಟ್ಟು 16 ಒಕ್ಕೂಟಗಳಿದ್ದು, ಅದರಲ್ಲಿ 10 ತಿಂಗಳ ಪ್ರಗತಿ ಚಿತ್ರಣ ನೋಡಿದಾಗ ಧಾರವಾಡ ಹಾಲು ಒಕ್ಕೂಟ 1ನೇ ಸ್ಥಾನದಲ್ಲಿದೆ. ಒಕ್ಕೂಟವು ಸುಮಾರು ₹21 ಕೋಟಿ ಲಾಭ ಗಳಿಸಿದ್ದು, ಅದರಲ್ಲಿ ₹18 ಕೋಟಿಗೂ ಹೆಚ್ಚು ನಿವ್ವಳ ಲಾಭವನ್ನು ರೈತರು ಮತ್ತು ಹಾಲು ಉತ್ಪಾದಕರ ಸಂಘಗಳಿಗೆ ಪ್ರೋತ್ಸಾಹಧನವಾಗಿ ಮರು ಹಂಚಿಕೆ ಮಾಡಿದೆ. ಸಂಸ್ಥೆಯ ಪ್ರಗತಿಗೆ ಶ್ರಮಿಸಿದ ಸಂಘದ ಆಡಳಿತ ಮಂಡಳಿ ನಿರ್ದೇಶಕರು ಹಾಗೂ ಸದಸ್ಯರ ಪ್ರತಿಫಲವಾಗಿ ಹಾಗೂ ಕಟ್ಟಡ ಮುಂಗಡಕ್ಕಾಗಿ ತಲಾ ₹50 ಸಾವಿರ ಸಹಾಯಧನವನ್ನು ನೀಡಲಾಗಿದೆ ಎಂದರು.ರೋಣ ತಾಲೂಕಿನ ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರಶಾಂತ ಮುಧೋಳ ಮತನಾಡಿ, ಸಹಕಾರಿ ಸಂಘಗಳ ಯಶಸ್ಸು ಮತ್ತು ಸುಸ್ಥಿರತೆ ಅವುಗಳ ಪಾರದರ್ಶಕ ಆಡಳಿತ ಹಾಗೂ ಕಾನೂನುಬದ್ಧ ನಿಯಮಗಳ ಸರಿಯಾದ ಪಾಲನೆಯಲ್ಲಿ ಅಡಗಿದೆ ಎಂದರು.
ಅಧ್ಯಕ್ಷತೆಯನ್ನು ಜಿಲ್ಲಾ ಸಹಕಾರ ಯುನಿಯನ್ ನಿರ್ದೇಶಕಿ ಅನಿತಾ ಎ. ಕಲ್ಲಣ್ಣವರ ವಹಿಸಿದ್ದರು. ಪಿ.ಎಲ್. ಹಳೇಮನಿ, ಡಾ. ರಾಕೇಶ ತಲ್ಲೂರ, ಮಲ್ಲಿಕಾರ್ಜುನ ಉಣಚಗೇರಿ, ಡಾ. ವಿಜಯ ಮಹಾಂತೇಶ ಅಂಗಡಿ ಸೇರಿದಂತೆ ಇತರರು ಇದ್ದರು. ನರೇಗಲ್ಲ ಅನ್ನದಾನೀಶ್ವರ ಪಪೂ ಮಹಾವಿದ್ಯಾಲಯದ ವಿದ್ಯಾರ್ಥಿ ಅಮಿತಕುಮಾರ ಹುಡೇದ ಪ್ರಾರ್ಥಿಸಿದರು. ಜಿಲ್ಲಾ ಸಹಕಾರ ಯುನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ ಎಸ್. ಕರಿಯಪ್ಪನವರ ಸ್ವಾಗತಿಸಿ, ನಿರೂಪಿಸಿದರು. ವಿಸ್ತರಣಾಧಿಕಾರಿ ಜಿ.ಸಿ. ಸಾಲೋಟಗಿಮಠ ವಂದಿಸಿದರು.