ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕೆಆರ್ ಎಸ್ ಜಲಾಶಯಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಣೆಕಟ್ಟೆಯಲ್ಲಿ 6 ಟಿಎಂಸಿ ಮಾತ್ರ ನೀರಿದೆ. ಪ್ರತಿ ತಿಂಗಳು ಕುಡಿಯುವ ಅಗತ್ಯತೆಗಾಗಿ 3 ಟಿಎಂಸಿ ನೀರು ಬೇಕು. ಈಗ ಸಂಗ್ರಹವಾಗಿರುವ ನೀರು ಕೇವಲ ಎರಡು ತಿಂಗಳಿಗಷ್ಟೇ ಆಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಾವೇರಿ ಜಲಾನಯನ ವ್ಯಾಪ್ತಿ ರೈತರು 1 ಲಕ್ಷ ಹೆಕ್ಟೇರ್‌ಗೂ ಹೆಚ್ಚು ಬೆಳೆ ಬೆಳೆದಿದ್ದಾರೆ. ಬೆಳೆ ಬೆಳೆಯಬೇಡಿ ನೀರಿಲ್ಲ ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಈಗಾಗಲೇ ಜಲಾಶಯ ನಂಬಿ ಬೆಳೆ ಬೆಳೆಯದಂತೆ ರೈತರಿಗೆ ಸರ್ಕಾರದಿಂದ ಸೂಚನೆ ನೀಡಿದೆ. ಆದರೆ, ಬೆಂಗಳೂರಿಗೆ ಕುಡಿಯುವ ನೀರಿನ ನೆಪದಲ್ಲಿ ಕಾವೇರಿ ನದಿ ಮೂಲಕ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ ಎಂದು ಆರೋಪಿಸಿದರು.ಯುದ್ಧ ನಡೆಯುವಾಗ ಚಿನ್ನ ಖರೀದಿಸಬೇಡಿ ಎಂದು ಪ್ರಧಾನಿ ಮೋದಿಯವರ ಹೇಳಿದ್ದಕ್ಕೆ ಇದರ ವಿರುದ್ಧ ಕಾಂಗ್ರೆಸ್‌ನವರು ಬಾಯಿ ಬಡಿದುಕೊಂಡಿದ್ದರು. ಈಗ ರೈತರಿಗೆ ಬೆಳೆಯನ್ನೇ ಬೆಳೆಯಬೇಡಿ ಎನ್ನುತ್ತಾರೆ. ಧೈರ್ಯವಿದ್ದರೆ ತಮಿಳುನಾಡು ರೈತರು ಬೆಳೆ ಬೆಳೆಯಬಾರದು ಎಂದು ಕರೆ ನೀಡಬೇಕಿತ್ತು ಎಂದು ಸವಾಲು ಹಾಕಿದರು.
ಸಿಎಂಗೆ ರೈತರ ಬಗ್ಗೆ ಆಸಕ್ತಿ ಇಲ್ಲ:
ಸರ್ಕಾರದಲ್ಲಿ ಕೃಷಿ ಸಚಿವರಿಲ್ಲ, ಸಂಪುಟ ಪೂರ್ಣಗೊಂಡಿಲ್ಲ. ಸಚಿವರನ್ನು ನೇಮಕ ಮಾಡದೆ ಪೇಮೆಂಟ್ ಕ್ಯಾಬಿನೆಟ್‌ಗೆ ಕಾಯುತ್ತಿದ್ದಾರೆ ಅನಿಸುತ್ತಿದೆ. ಕಾಂಗ್ರೆಸ್ ನವರು ದೆಹಲಿಯವರಿಗೆ ದುಡ್ಡು ಕೊಟ್ಟು ಕ್ಯಾಬಿನೆಟ್ ಸ್ಥಾನ ಪಡೆಯಬೇಕು. ಅದರಲ್ಲಿ ಅನುಮಾನವೇ ಇಲ್ಲ. ಸಿಎಂಡಿ.ಕೆ ಶಿವಕುಮಾರ್ ಸರ್ಕಾರ ದೆಹಲಿ ಹೈಕಮಾಂಡ್ ಗೆ ಎಟಿಎಂ ಆಗಿದೆ ಎಂದು ಆರೋಪಿಸಿದರು.
ಈ ಸರ್ಕಾರ ಬರಗಾಲಕ್ಕೆ ಯಾವುದೇ ಸಿದ್ಧತೆ ಮಾಡಿಕೊಂಡಿಲ್ಲ. ರೈತರು ಬದಲಿ ಬೆಳೆ ಬೆಳೆಯಲು ಸಲಹೆ ನೀಡುತ್ತಾರೆಯೇ ಹೊರತು ಯಾವುದೇ ಕ್ರಮ ವಹಿಸಿಲ್ಲ. ರೈತರಿಗಾಗುವ ನಷ್ಟವನ್ನು ಕೊಡುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಬೇಕಿತ್ತು. ಬಿಜೆಪಿ ಅವಧಿಯಲ್ಲಿ ದುಪ್ಪಟ್ಟು ಪರಿಹಾರ ನೀಡಬೇಕಿತ್ತು. ಈಗ ಎಕರೆಗೆ 50 ಸಾವಿರ ರು. ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟಿಸಿದ ರೈತರಿಗೆ ಲಾಠಿ ಏಟು:
ಬಿಡದಿಯಲ್ಲಿ ಮೂರುವರೆ ಸಾವಿರ ಎಕರೆ ಸರ್ಕಾರಿ ಜಾಗವನ್ನು ಕಬಳಿಸಲು ಸರ್ಕಾರ ಅವಕಾಶ ನೀಡಿದೆ. ಡಿ.ಕೆ.ಶಿವಕುಮಾರ್ ಬಿಸಿನೆಸ್ ಮ್ಯಾನ್ ಎಂದು ಹೇಳಿಕೊಂಡಿರುವುದರಿಂದ ಅವರಿಂದ ಹೆಚ್ಚು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಟೀಕಿಸಿದರು.
ಎಸ್‌ಐಆರ್‌ನಲ್ಲಿ ಅಧಿಕಾರಿಗಳು ಮನೆಗೆ ಹೋಗಿ ಅರ್ಜಿ ಭರ್ತಿ ಮಾಡಿಸಬೇಕು. ಬಾಂಗ್ಲಾ, ಪಾಕಿಸ್ತಾನಿ ಜನರ ಅನುಕೂಲಕ್ಕಾಗಿ ಮಸೀದಿಗಳಲ್ಲಿ ಅರ್ಜಿ ಭರ್ತಿ ಮಾಡುವುದನ್ನು ನಾನು ವಿರೋಧಿಸಿದ್ದೇನೆ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದೇನೆ ಎಂದರು.
ಇದು ಬಾಂಗ್ಲಾದೇಶದ ಅಕ್ರಮ ವಲಸಿಗರ ಮತ ಉಳಿಸಲು ಪ್ರಯತ್ನವಾಗಿದೆ. ಮನೆ ಮನೆಗೆ ತೆರಳಿ ಪ್ರಕ್ರಿಯೆ ನಡೆಸಲು ನಿಯಮವಿದ್ದರೂ ಸಮುದಾಯ ಭವನಗಳಲ್ಲಿ ಪರಿಷ್ಕರಣೆ ನಡೆಸುತ್ತಿದ್ದಾರೆ. ಮತಪರಿಷ್ಕರಣೆ ಮಾಡದಿದ್ದರೆ ಗ್ಯಾರಂಟಿ ಯೋಜನೆ ಕಡಿತ ಎನ್ನುವ ಮೂಲಕ ಬಾಂಗ್ಲಾ ವಲಸಿಗರಿಗೆ ಇಲ್ಲೇ ಮತ ಉಳಿಸಿಕೊಳ್ಳಿ ಎಂಬ ಸಂದೇಶವನ್ನೂ ಸರ್ಕಾರ ಕೊಟ್ಟಿದ್ದಾರೆ ಎಂದು ದೂರಿದರು.ಈ ವೇಳೆ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕ ಛಲವಾಧಿ ನಾರಾಯಣಸ್ವಾಮಿ, ಮಾಜಿ ಸಂಸದ ಪ್ರತಾಪ್ ಸಿಂಹ, ಶಾಸಕ ಶ್ರೀವತ್ಸ, ಮಾಜಿ ಶಾಸಕ ಎಲ್.ನಾಗೇಂದ್ರ, ಅಶೋಕ್ ಜಯರಾಂ, ಸಾದೊಳಲು ಸ್ವಾಮಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಡಾ.ಇಂದ್ರೇಶ್, ಬಿಜೆಪಿ ಮುಖಂಡ ಇಂಡವಾಳು ಸಚ್ಚಿದಾನಂದ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಟಿ.ಶ್ರೀಧರ್, ಬಿಜೆಪಿ ಮುಖಂಡ ಮಂಜುನಾಥ್, ಶ್ರೀರಂಗಪಟ್ಟಣ ಬಿಜೆಪಿ ಮಂಡಲ ಅಧ್ಯಕ್ಷ ರಮೇಶ್ ಪೀಹಳ್ಳಿ ಸೇರಿದಂತೆ ನೀರಾವರಿ ಇಲಾಖೆ ಕಾರ್ಯಪಾಲಕ ಎಂಜಿನಿಯರ್ ವೆಂಕಟರವಣಪ್ಪ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಫರೂಕ್ ಅಬು, ಎಇಇ ಕಿಶೋರ್ ಸೇರಿದಂತೆ ಇತರ ಸಿಬ್ಬಂದಿ ಹಾಜರಿದ್ದರು. ಡಿವೈಎಸ್ಪಿ ಕೃಷ್ಣ ಕುಮಾರ್ ನೇತೃತ್ವದಲ್ಲಿ ಜಲಾಶಯಕ್ಕೆ ಬಿಗಿ ಭದ್ರತೆ ಹಾಕಲಾಗಿತ್ತು.
ವಿಪಕ್ಷ ನಾಯಕರಿಂದ ಕೆಆರ್‌ಎಸ್ ಜಲಾಶಯ ವೀಕ್ಷಣೆ, ನೀರಿನ ಬಗ್ಗೆ ಅಧಿಕಾರಿಗಳ ಮಾಹಿತಿಶ್ರೀರಂಗಪಟ್ಟಣ:
ತಾಲೂಕಿನ ಕೃಷ್ಣರಾಜ ಸಾಗರ ಜಲಾಶಯಕ್ಕೆ ವಿಧಾನಸಭೆ ಹಾಗೂ ವಿಧಾನ ಪರಿಷತ್ ವಿಪಕ್ಷ ನಾಯಕರಾದ ಆರ್.ಅಶೋಕ್ ಹಾಗೂ ಛಲವಾಧಿ ನಾರಾಯಣಸ್ವಾಮಿ ಭೇಟಿ ನೀಡಿ ಜಲಾಶಯ ವೀಕ್ಷಣೆ ಬಳಿಕ ನಿಗಮದ ಅಧಿಕಾರಿಗಳಿಂದ ನೀರಿನ ಬಗ್ಗೆ ಮಾಹಿತಿ ಪಡೆದುಕೊಂಡರು.ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಕೆಆರ್‌ಎಸ್ ಜಲಾಶಯದ ಒಳ ನೀರಿನ ಪ್ರಮಾಣ ಕಡಿಮೆಯಾಗಿ ಪ್ರಸ್ತುತ ಜಲಾಶಯದಲ್ಲಿ ನೀರಿನ ಸಂಗ್ರಹಣೆ, ಕುಡಿಯುವ ನೀರಿನ ಪೂರೈಕೆ ಹಾಗೂ ರೈತರ ಜಮೀನುಗಳಲ್ಲಿ ಬೆಳೆದಿರುವ ಬೆಳೆಗಳಿಗೆ ನೀರು ಕೊಡಬಹುದಾ ಎಂಬುದರ ಬಗ್ಗೆ ಮಾಹಿತಿ ಪಡೆದರು.
ಸದ್ಯ ಕೆಆರ್‌ಎಸ್ ಡ್ಯಾಂಗೆ 900 ಕ್ಯುಸೆಕ್ ಒಳಹರಿವಿದೆ. ಮಳೆ ಅಭಾವ ಉಂಟಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳಬೇಕಾದ ಸರ್ಕಾರ ಇನ್ನೂ ನಿದ್ದೆಯಿಂದ ಎದ್ದೆಯಿಲ್ಲ. ಎರಡೂ ತಿಂಗಳು ಮಳೆ ಬರಲಿಲ್ಲ ಅಂದರೆ ಪರಿಸ್ಥಿತಿ ಹೇಗೆ ನಿಭಾಯಿಸುತ್ತಾರೆ. ರಾಜ್ಯದ ಎಲ್ಲಾ ಜಲಾಶಯಗಳ ಪರಿಸ್ಥಿತಿಯೂ ಇದೇ ರೀತಿಯಾಗಿದೆ. ಸಮರೋಪಾದಿಯಲ್ಲಿ ಸರ್ಕಾರ ಕೆಲಸ ಮಾಡಲಿಲ್ಲ ಅಂದರೆ ರೈತರ ಆಕ್ರೋಶ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.ಬಿಜೆಪಿ ಮಂಡಲ ಅಧ್ಯಕ್ಷರನ್ನು ಬಿಡದೆ ಹೊರ ತಳ್ಳಿದ ಪೊಲೀಸರು
ಶ್ರೀರಂಗಪಟ್ಟಣ:ವಿಪಕ್ಷ ನಾಯಕ ಆರ್.ಅಶೋಕ್ ಕೆಆರ್‌ಎಸ್ ಜಲಾಶಯ ವೀಕ್ಷಣೆಗೆ ಬಂದ ವೇಳೆ ಬಿಜೆಪಿ ಮಂಡಲ ಅಧ್ಯಕ್ಷರನ್ನು ಅವರೊಂದಿಗೆ ಹೋಗಲು ಬಿಡದೆ ಬ್ಯಾರಿಕೇಡ್‌ನಿಂದ ಪೊಲೀಸರು ಹೊರ ತಳ್ಳಿದ ಘಟನೆ ನಡೆಯಿತು.ಜಲಾಶಯ ವೀಕ್ಷಣೆಗೆ ಆಗಮಿಸಿದ್ದ ಆರ್.ಅಶೋಕ್ ಅವರೊಂದಿಗೆ ಮಾಜಿ ಸಂಸದರು, ಶಾಸಕರು, ಜಿಲ್ಲೆಯ ಬಿಜೆಪಿ ಅಧ್ಯಕ್ಷರು ಹಾಗೂ ಹಿರಿಯ ಮುಖಂಡರು ಅವರ ಹಿಂದೆ ತಾಲೂಕು ಬಿಜೆಪಿ ಮಂಡಲ ಅಧ್ಯಕ್ಷ ಪೀಹಳ್ಳಿ ರಮೆಶ್ ತೆರಳುತ್ತಿದ್ದ ವೇಳೆ ಅವರನ್ನು ಪೊಲೀಸರು ತಡೆದು ಬ್ಯಾರಿಕೇಡ್ ತೆಗೆದು ಹೊರ ತಳ್ಳಿದರು.ನಂತರ ರಮೇಶ್ ಈ ಕ್ಷೇತ್ರದ ಬಿಜೆಪಿ ಪಕ್ಷದ ಮಂಡಲ ಅಧ್ಯಕ್ಷ ನಾನು ಎಂದು ಪೊಲೀಸರಿಗೆ ತಿಳಿಸಿದರು. ಅಲ್ಲದೇ, ಅಕ್ಕ ಪಕ್ಕದಲ್ಲಿ ನಿಂತಿದ್ದ ಬಿಜೆಪಿ ಮುಖಂಡರು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಸಿ ಅವರೊಬ್ಬರನ್ನು ಒಳ ಬಿಡುವಂತೆ ಕೋರಿಕೊಂಡರೂ ಬಿಡದೆ ಹೊರ ತಳ್ಳಿದರು. ಈ ವೇಳೆ ಸ್ಥಳದಲ್ಲಿದ್ದ ಬಿಜೆಪಿ ಕಾರ್ಯಕರ್ತರಿಗೆ ಬೇಸರಗೊಂಡು ಪೊಲೀಸರ ನಡೆ ವಿರುದ್ಧ ಅಸಮಾಧಾನಗೊಂಡರು. ಇದರಿಂದ ಬೇಸತ್ತ ಬಿಜೆಪಿ ಅಧ್ಯಕ್ಷ ರಮೇಶ್ ಪೀಹಳ್ಳಿ ಮೌನ ವಹಿಸಿ ಕಾರು ಹತ್ತಿ ಶ್ರೀರಂಗಪಟ್ಟಣದತ್ತ ಪ್ರಯಾಣ ಬೆಳೆಸಿದರು.