-ನರಗುಂದ ತಾಲೂಕು ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಿಂದ ಭುವನೇಶ್ವರಿ ರಥ ನಿರ್ಮಾಣ
ಕನ್ನಡಪ್ರಭ ವಾರ್ತೆ ನರಗುಂದ
ಕರ್ನಾಟಕ ಸುವರ್ಣ ಸಂಭ್ರಮದ ಸ್ಮರಣೆಯಲ್ಲಿ ತಾಲೂಕಿನ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದಿಂದ ನಾಡಿನಲ್ಲಿಯೇ ಪ್ರಪ್ರಥಮವಾಗಿ ಕನ್ನಡ ಮಾತೆ ಭುವನೇಶ್ವರಿ ದೇವಿಗಾಗಿಯೇ ವಿಶೇಷ ರಥ ನಿರ್ಮಿಸಲಾಗಿದ್ದು, ರಾಜ್ಯೋತ್ಸವ ದಿನದಂದು (ನ.1) ಲೋಕಾರ್ಪಣೆಗೊಳ್ಳಲಿದೆ.ಶ್ರೀಮಠದ ಪೀಠಾಧಿಪತಿ ಶ್ರೀ ಶಾಂತಲಿಂಗ ಸ್ವಾಮಿಗಳ ಪರಿಕಲ್ಪನೆಯಲ್ಲಿ ಮೂಡಿಬಂದ ಈ ಕನ್ನಡ ತೇರಿನಲ್ಲಿ ಈ ಬಾರಿಯ ರಾಜ್ಯೋತ್ಸವ ಮೆರವಣಿಗೆಯಲ್ಲಿ ಭುವನೇಶ್ವರಿ ವಿರಾಜಮಾನ ಆಗಲಿದ್ದಾಳೆ. ಈ ಹೊಸ ಸಂಭ್ರಮ ಬಂಡಾಯದ ನೆಲದಿಂದ ಕನ್ನಡದ ಹೊಸ ಕಹಳೆ ಮೊಳಗಲಿದೆ.
ಸುತ್ತಲೂ ಬುದ್ಧ-ಬಸವ-ಅಂಬೇಡ್ಕರ್ ಹಾಗೂ ಏಕೀಕರಣಕ್ಕೆ ಶ್ರಮಿಸಿದ ಮಹನೀಯರ ಚಿತ್ರಗಳು, ಕನ್ನಡ ಮೂಲಾಕ್ಷರಗಳು, ಕನ್ನಡ ಸಂಖ್ಯೆಗಳು ಮತ್ತು ಕನ್ನಡ ನಾಣ್ಣುಡಿಗಳನ್ನು ಬರೆಯಿಸಲಾಗಿದೆ. ಕನ್ನಡ ಸಾಹಿತ್ಯ ಪರಿಷತ್ತು, ವಿಧಾನಸೌಧ, ಕರ್ನಾಟಕ ವಿದ್ಯಾವರ್ಧಕ ಸಂಘ, ನರಗುಂದ ಕೆಂಪಗಸಿ, ಮಲಪ್ರಭಾ ಅಣೆಕಟ್ಟುಗಳ ಚಿತ್ರಗಳನ್ನು ಕಾಣಬಹುದಾಗಿದೆ. ರಥದ ಮೇಲ್ಭಾಗದಲ್ಲಿ ರಾಷ್ಟ್ರ ಧ್ವಜದ ಬಣ್ಣ ಹಾಗೂ ಅದರ ಕೆಳಗಡೆ ನಾಡ ಧ್ವಜವನ್ನು ಹೊದಿಸಲಾಗಿದೆ. ಮೇಲೆ ೧೫ ಇಂಚಿನ ಕಳಸ ಇರಿಸಲಾಗಿದೆ.
ಲೋಕಾರ್ಪಣೆ: ನ. ೧ರಂದು ಕನ್ನಡ ರಥವನ್ನು ನಾಡಿನ ಹಿರಿಯ ಸಾಹಿತಿ ಶಾಂತಲಾ ಯಡ್ರಾವಿ ಅವರು ಲೋಕಾರ್ಪಣೆ ಮಾಡಲಿದ್ದಾರೆ. ಉದ್ಘಾಟಕರಾಗಿ ಶಾಸಕ ಸಿ.ಸಿ. ಪಾಟೀಲ, ಮುಖ್ಯ ಅತಿಥಿಗಳಾಗಿ ಸಂಸದ ಪಿ.ಸಿ. ಗದ್ದಿಗೌಡ್ರ, ಮಾಜಿ ಸಚಿವ ಬಿ.ಆರ್. ಯಾವಗಲ್ಲ, ತಹಸೀಲ್ದಾರ್ ಶ್ರೀಶೈಲ ತಳವಾರ, ಕ್ಷೇತ್ರ ಶಿಕ್ಷಣಾಧಿಕಾರಿ ಗುರುನಾಥ ಹೂಗಾರ, ಬಿ.ಸಿ. ಹನಮಂತಗೌಡ್ರ, ಚೆನ್ನಪ್ಪ ಬೆಳವಣಕಿ ಭಾಗವಹಿಸಲಿದ್ದಾರೆ.