ಮಂಗಳೂರಿನಲ್ಲಿ ರಾಜ್ಯದಲ್ಲೇ ಮೊದಲ ಮಹಾಪಧಮನಿಯ ಯಶಸ್ವಿ ಶಸ್ತ್ರಚಿಕಿತ್ಸೆ

KannadaprabhaNewsNetwork | Published : Feb 1, 2024 2:03 AM

ಸಾರಾಂಶ

ಸುದ್ದಿಗೋಷ್ಠಿಯಲ್ಲಿ ಇಂಡಿಯಾನಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಹೃದ್ರೋಗ ತಜ್ಞ ಡಾ. ಯೂಸುಫ್‌ ಎ. ಕುಂಬ್ಳೆ ಮಾಹಿತಿ ನೀಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರುಮಹಾಪಧಮನಿಯ ಅತಿ ಕ್ಲಿಷ್ಟಕರವಾದ ಅಪರೂಪದ ಹೈಬ್ರಿಡ್‌ ಶಸ್ತ್ರಚಿಕಿತ್ಸೆಯನ್ನು ರಾಜ್ಯದಲ್ಲೇ ಮೊದಲ ಬಾರಿಗೆ ನಗರದ ಇಂಡಿಯಾನಾ ಹಾಸ್ಪಿಟಲ್‌ ಮತ್ತು ಹಾರ್ಟ್‌ ಇನ್ಸ್ಟಿಟ್ಯೂಟ್‌ನಲ್ಲಿ ಯಶಸ್ವಿಯಾಗಿ ನೆರವೇರಿಸಲಾಗಿದೆ.ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಇಂಡಿಯಾನಾ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ಹಾಗೂ ಹೃದ್ರೋಗ ತಜ್ಞ ಡಾ. ಯೂಸುಫ್‌ ಎ. ಕುಂಬ್ಳೆ ಮಾಹಿತಿ ನೀಡಿದರು.ಹಾಸನದ 64 ವರ್ಷದ ರೋಗಿಯೊಬ್ಬರು ತೀವ್ರ ಹೊಟ್ಟೆ ನೋವಿನಿಂದ ಬೆಂಗಳೂರಿನ ಹಲವು ಬೃಹತ್‌ ಆಸ್ಪತ್ರೆಗಳಿಗೆ ತೆರಳಿದ್ದರು. ರೋಗಿಯ ಮಹಾಪಧಮನಿಯ ದೊಡ್ಡ ರಕ್ತನಾಳ, ಎದೆಯ (ಥೊರಾಸಿಕ್‌) ಮತ್ತು ಕೆಲವು ಮೌಲ್ಯಮಾಪನ ನೋಡಿದ ಆಸ್ಪತ್ರೆಗಳು ಶಸ್ತ್ರಚಿಕಿತ್ಸೆ ಮಾಡಲು ನಿರಾಕರಿಸಿದ್ದವು. ಶಸ್ತ್ರಚಿಕಿತ್ಸೆ ಮಾಡಿದರೂ ಇತರ ಅಂಗಾಂಗ ವೈಫಲ್ಯವಾಗುವ ಸಾಧ್ಯತೆ ಹೆಚ್ಚಿರುವುದರಿಂದ ಈ ನಿರ್ಧಾರ ಕೈಗೊಂಡಿದ್ದರು. ಬಳಿಕ ರೋಗಿಯ ಸಂಬಂಧಿಕರು ಮಂಗಳೂರಿನ ಇಂಡಿಯಾನಾ ಆಸ್ಪತ್ರೆಯನ್ನು ಸಂಪರ್ಕಿಸಿ ಚಿಕಿತ್ಸೆಗೆ ಮನವಿ ಮಾಡಿದರು.

ಸವಾಲನ್ನು ಸ್ವೀಕರಿಸಿದ ಇಂಡಿಯಾನಾ ಆಸ್ಪತ್ರೆಯ ಹೃದ್ರೋಗ ತಜ್ಞ ಡಾ. ಯೂಸುಫ್‌ ಎ ಕುಂಬ್ಳೆ, ಹೃದಯ ರಕ್ತನಾಳದ ಶಸ್ತ್ರಚಿಕಿತ್ಸಕ ಡಾ. ಪ್ರಶಾಂತ್‌ ವೈಜ್ಯನಾಥ್‌, ಹೃದಯ ಶಸ್ತ್ರಚಿಕಿತ್ಸಕ ಡಾ. ಶ್ಯಾಮ್‌ ಕೆ. ಅಶೋಕ್‌ ಅವರೊಂದಿಗೆ ಹೈಬ್ರಿಡ್‌ ಆಂಟಿಗ್ರಾ ಮಾಡಲು ವೈದ್ಯರ ತಂಡವನ್ನು ರಚಿಸಿ, ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ಶಸ್ತ್ರಚಿಕಿತ್ಸೆಯಿಂದ ಗುಣಮುಖರಾಗುತ್ತಿರುವ ರೋಗಿ ಕೆಲವೇ ದಿನಗಳಲ್ಲಿ ಡಿರ್ಚಾರ್ಜ್‌ ಆಗಲಿದ್ದಾರೆ.ಇದು ಕರ್ನಾಟಕದಲ್ಲಿ ಮೊದಲ ಬಾರಿಗೆ ಅಪರೂಪದ ಮತ್ತು ಅಪಾಯಕಾರಿ ಶಸ್ತ್ರಚಿಕಿತ್ಸಾ ವಿಧಾನವಾಗಿದ್ದು, ಪೂರ್ಣ ಪ್ರಮಾಣದಲ್ಲಿ ಯಶಸ್ವಿ ಚಿಕಿತ್ಸೆ ಮಾಡಲಾಗಿದೆ ಎಂದು ಯೂಸುಫ್ ಕುಂಬ್ಳೆ ತಿಳಿಸಿದರು.ಶಸ್ತ್ರಚಿಕಿತ್ಸೆಯಲ್ಲಿ ರೋಗಿಯ ಅಪಧಮನಿಗಳನ್ನು ಮಹಾಪಧಮನಿಯಿಂದ ನೇರವಾಗಿ ಕೃತಕವಾಗಿ ತಯಾರಿಸಿದ ನಾಳೀಯ ರಚನೆಗೆ ಮರು ಅಳವಡಿಕೆ ಮಾಡಲಾಗಿದೆ. ಭಾರತದಲ್ಲಿ ಈ ಶಸ್ತ್ರಚಿಕಿತ್ಸೆಯನ್ನು ವಿರಳವಾಗಿ ಮಾಡಲಾಗುತ್ತದೆ ಎಂದರು.

ಆಸ್ಪತ್ರೆಯ ಡಾ.ಅಲಿ ಕುಂಬ್ಳೆ, ಹೃದಯ ಶಸ್ತ್ರಚಿಕಿತ್ಸಕ ಡಾ.ಶ್ಯಾಮ್‌ ಕೆ., ಹೃದ್ರೋಗ ತಜ್ಞರಾದ ಡಾ.ಸಂಧ್ಯಾ ರಾಣಿ, ಡಾ.ಲತಾ, ಡಾ.ಅಪೂರ್ವ ಮತ್ತಿತರರು ಇದ್ದರು.

Share this article