ರಾಜ್ಯ ಕಾರ್ಮಿಕರಿಗೆ ಕನಿಷ್ಠ ವೇತನದ ಹಕ್ಕೂ ಇಲ್ಲ!

KannadaprabhaNewsNetwork |  
Published : Nov 15, 2025, 01:45 AM ISTUpdated : Nov 15, 2025, 10:23 AM IST
Labor

ಸಾರಾಂಶ

ಉತ್ತರ ಭಾರತದ ಕಾರ್ಮಿಕರ ವಲಸೆಯಿಂದಾಗಿ ಸ್ಥಳೀಯ ಕಾರ್ಮಿಕರು ಹೆಚ್ಚಿನ ವೇತನ ಬಿಡಿ, ಕನಿಷ್ಠ ವೇತನದ ಚೌಕಾಸಿ ಶಕ್ತಿಯನ್ನೂ ಕಳೆದುಕೊಂಡಿದ್ದಾರೆ.  ಕನಿಷ್ಠ ವೇತನ ನಿಗದಿ, ಜಾರಿ ತಪಾಸಣೆ ಮಾಡಬೇಕಾದ ಕಾರ್ಮಿಕ ಇಲಾಖೆ ಕಣ್ಮುಚ್ಚಿ ಕೂತಿದೆ ಎಂಬ ಆರೋಪ ಕಾರ್ಮಿಕ ವಲಯದಿಂದ ಗಟ್ಟಿದನಿಯಲ್ಲಿ ಕೇಳಿಬರುತ್ತಿದೆ.

ಮಯೂರ್‌ ಹೆಗಡೆ

 ಬೆಂಗಳೂರು :  ಉತ್ತರ ಭಾರತದ ಕಾರ್ಮಿಕರ ವಲಸೆಯಿಂದಾಗಿ ಸ್ಥಳೀಯ ಕಾರ್ಮಿಕರು ಹೆಚ್ಚಿನ ವೇತನ ಬಿಡಿ, ಕನಿಷ್ಠ ವೇತನದ ಚೌಕಾಸಿ ಶಕ್ತಿಯನ್ನೂ ಕಳೆದುಕೊಂಡಿದ್ದಾರೆ. ಇಷ್ಟಾದರೂ ಕನಿಷ್ಠ ವೇತನ ನಿಗದಿ, ಜಾರಿ ತಪಾಸಣೆ ಮಾಡಬೇಕಾದ ಕಾರ್ಮಿಕ ಇಲಾಖೆ ಕಣ್ಮುಚ್ಚಿ ಕೂತಿದೆ ಎಂಬ ಆರೋಪ ಕಾರ್ಮಿಕ ವಲಯದಿಂದ ಗಟ್ಟಿದನಿಯಲ್ಲಿ ಕೇಳಿಬರುತ್ತಿದೆ.

ರಾಜ್ಯದ ಕಾರ್ಮಿಕ ಆಯುಕ್ತಾಲಯವು ಕಾರ್ಮಿಕರ ಕುಶಲತೆ ಮೇರೆಗೆ ಹೈಲಿ ಸ್ಕಿಲ್ಡ್‌, ಸ್ಕಿಲ್ಡ್‌, ಸೆಮಿ ಸ್ಕಿಲ್ಡ್‌ ಹಾಗೂ ಅನ್‌ ಸ್ಕಿಲ್ಡ್‌ ಎಂದು ವಿಭಾಗಿಸಿ ಜಿಬಿಎ ವ್ಯಾಪ್ತಿ (ಬೆಂಗಳೂರು ನಗರ), ಇತರೆ ಸ್ಥಳೀಯ ಸಂಸ್ಥೆ, ಎಲ್ಲಾ ಜಿಲ್ಲಾ ಕೇಂದ್ರ ಹಾಗೂ ಇತರೆ ಪ್ರದೇಶ ಎಂದು ನಾಲ್ಕು ಝೋನ್‌ಗಳಲ್ಲಿ ಆಯಾ ಪ್ರದೇಶದ ಬದುಕಿನ ಅಗತ್ಯ ಪರಿಗಣಿಸಿ ಕನಿಷ್ಠ ವೇತನ ನಿಗದಿಪಡಿಸಿದೆ. ಆದರೆ, ನಿಗದಿಯಾದ ಈ ವೇತನಕ್ಕಿಂತಲೂ ಅತ್ಯಲ್ಪ ಸಂಬಳಕ್ಕೆ ಉತ್ತರ ಭಾರತದ ಕಾರ್ಮಿಕರು ಕೆಲಸಕ್ಕೆ ಸಿಗುತ್ತಿದ್ದಾರೆ. ಇದರಿಂದ ಸ್ಥಳೀಯ ಕಾರ್ಮಿಕರನ್ನು ಬಿಟ್ಟು ಉತ್ತರ ಭಾರತದ ಕಾರ್ಮಿಕರನ್ನೇ ಮಾಲೀಕವರ್ಗ ಹೆಚ್ಚಾಗಿ ಕೆಲಸಕ್ಕೆ ನಿಯೋಜಿಸಿಕೊಳ್ಳುತ್ತಿದೆ. ಪರಿಣಾಮ ಕನಿಷ್ಠ ವೇತನ ಮಾತ್ರವಲ್ಲ, ದುಡಿವ ಸ್ಥಳದಲ್ಲಿ ಸ್ಥಳೀಯ ಕಾರ್ಮಿಕರು ತಮ್ಮ ಬೇಡಿಕೆ ಅನುಸಾರ ವೇತನ ಕೇಳಲೂ ಸಾಧ್ಯವಾಗದ ಸ್ಥಿತಿಗೆ ಸಿಲುಕಿದ್ದಾರೆ ಎಂದು ಕಾರ್ಮಿಕ ಸಂಘಟನೆಗಳ ಆರೋಪ.

ರಾಜ್ಯದ ಹಾಸ್ಪಿಟಾಲಿಟಿ ಉದ್ಯಮದಲ್ಲಿ ಶೇ.80ರಷ್ಟು ಹೊರರಾಜ್ಯದ ಕಾರ್ಮಿಕರೇ

ರಾಜ್ಯದ ಹಾಸ್ಪಿಟಾಲಿಟಿ ಉದ್ಯಮದಲ್ಲಿ ಶೇ.80ರಷ್ಟು ಹೊರರಾಜ್ಯದ ಕಾರ್ಮಿಕರೇ ತುಂಬಿದ್ದಾರೆ. ಕಟ್ಟಡ ನಿರ್ಮಾಣದಲ್ಲಿ ಉತ್ತರ ಕರ್ನಾಟಕ ಭಾಗದ ಒಂದಿಷ್ಟು ಕಾರ್ಮಿಕರಿದ್ದರೂ ಅಲ್ಲೂ ಹೊರ ರಾಜ್ಯದವರ ಸಂಖ್ಯೆಯೇ ಹೆಚ್ಚಿದೆ. ಆಯುಕ್ತಾಲಯದ ಪ್ರಕಾರ ಬೆಂಗಳೂರಲ್ಲಿ ಕೌಶಲ್ಯ ಹೊಂದಿರುವ ಅಡುಗೆಯವ, ಕಿಚನ್‌ ಮೇಲ್ಚಿಚಾರಕ ತಿಂಗಳಿಗೆ ₹19,575 (ವಿಡಿಎ ಸೇರಿ) ಕನಿಷ್ಠ ವೇತನ ನಿಗದಿಪಡಿಸಲಾಗಿದೆ. ವಾಸ್ತವದಲ್ಲಿ ಸಾಮಾನ್ಯ ಹೋಟೆಲ್‌ಗಳಲ್ಲಿ ಸ್ಥಳೀಯ ಕಾರ್ಮಿಕರು ಈ ಕೆಲಸಕ್ಕೆ ಮಾಸಿಕ ₹30000-₹60000 ಕೇಳುತ್ತಾರೆ. ಆದರೆ, ಉ.ಭಾರತದ ಕಾರ್ಮಿಕರು ₹25000ಕ್ಕೂ ಕೆಲಸಕ್ಕೆ ಸಿಗುತ್ತಿದ್ದಾರೆ ಎಂದು ಹೋಟೆಲ್‌ ಮಾಲೀಕರೊಬ್ಬರು ತಿಳಿಸಿದರು.

ಹೋಟೆಲ್‌ ಮಾತ್ರವಲ್ಲ, ಕಟ್ಟಡ ಮತ್ತು ನಿರ್ಮಾಣ, ಸ್ವಚ್ಛತೆ, ಜವಳಿ, ಮಿಲ್‌, ಜನರಲ್‌ ಎಂಜಿನಿಯರಿಂಗ್‌, ಪ್ಯಾಕೇಜಿಂಗ್‌, ಟಿಂಬರ್ ಪ್ಲೈವುಡ್‌, ಪ್ಲಾಸ್ಟಿಕ್‌, ಗಿಗ್‌ ಕಾರ್ಮಿಕರು ಸೇರಿ ಪ್ರತಿಯೊಂದು ಕ್ಷೇತ್ರಗಳಲ್ಲೂ ಹೀಗೆ ಕಡಿಮೆ ಸಂಬಳಕ್ಕೆ ಇವರು ಸಿಗುತ್ತಿದ್ದಾರೆ. ನಿಧಾನಕ್ಕೆ ಸುತ್ತಲ ಜಿಲ್ಲೆಗಳಲ್ಲಿ ಕೃಷಿ ಕ್ಷೇತ್ರದ ಕೆಲಸಕ್ಕೂ ಇವರು ದಾಂಗುಡಿ ಇಡುತ್ತಿದ್ದಾರೆ ಎಂದು ಕಾರ್ಮಿಕ ಸಂಘಟನೆಗಳು ತಿಳಿಸಿವೆ.

ಚಿಕ್ಕ ಕೊಠಡಿಗಳಲ್ಲಿ ಐದಾರು ಮಂದಿ

ಉತ್ತರದಿಂದ ಇವರನ್ನು ಕೆಲಸಕ್ಕೆ ಕರೆತರುವ ಏಜೆಂಟರು, ಮಧ್ಯವರ್ತಿಗಳು ಸೌಲಭ್ಯ ಇರದ ಅತ್ಯಂತ ಚಿಕ್ಕ ಕೊಠಡಿಗಳಲ್ಲಿ ಐದಾರು ಮಂದಿಯನ್ನು ಇರಿಸುತ್ತಾರೆ. ನಾಲ್ಕರಿಂದ 6 ತಿಂಗಳು ಕೆಲವೊಮ್ಮೆ ವರ್ಷಕ್ಕೊಮ್ಮೆ ತಮ್ಮ ಊರುಗಳಿಗೆ ತೆರಳುವ ಇವರು ಖರ್ಚಿಗೆ ಆಗಾಗ ಒಂದಿಷ್ಟು ಹಣ ಪಡೆಯುವುದು ಬಿಟ್ಟರೆ ತಮ್ಮ ರಾಜ್ಯಕ್ಕೆ ಹಿಂದಿರುಗುವಾಗ ಪೂರ್ಣ ಸಂಬಳ ಪಡೆದು ಹೋಗುತ್ತಾರೆ. ಮಧ್ಯವರ್ತಿಗಳು ಒಬ್ಬ ಕಾರ್ಮಿಕನ ಮೇಲೆ ಶೇ.20ರ ವರೆಗೆ ಕಮಿಷನ್‌ ಪಡೆಯುತ್ತಾರೆ.

ಸಂಬಳ, ರಜೆ ಸೇರಿ ಕೆಲಸದ ಸ್ಥಳದಲ್ಲಿನ ಅನ್ಯಾಯದ ವಿರುದ್ಧ ಅಲ್ಲಿನ ಕಾರ್ಮಿಕರು ಧ್ವನಿ ಎತ್ತಲ್ಲ. ಇದೇ ಅಕ್ಟೋಬರ್‌ನಲ್ಲಿ ಬಿಡದಿ ಭೀಮೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಕಾರ್ಮಿಕರ ಶೆಡ್‌ನಲ್ಲಿ ಅನಿಲ ಸೋರಿಕೆಯಿಂದ ಬೆಂಕಿ ಹೊತ್ತಿ ಪಶ್ಚಿಮ ಬಂಗಾಳದ ಏಳು ಮಂದಿ ಮೃತಪಟ್ಟ ಪ್ರಕರಣದಲ್ಲಿ ಪರಿಹಾರದ ವಿಚಾರದಲ್ಲೂ ಇದನ್ನು ನೋಡಬಹುದು ಎಂದು ಕಾರ್ಮಿಕ ಮುಖಂಡ ಅಶ್ವತ್ಥ ಮರಿಗೌಡ್ರ ಹೇಳುತ್ತಾರೆ.

ಆದರೆ, ಸ್ಥಳೀಯ ಕಾರ್ಮಿಕರ ವಿಚಾರದಲ್ಲಿ ಹೀಗಾಗುವುದಿಲ್ಲ. ಸರ್ಕಾರದ ಪರಿಹಾರ, ಮಾಲೀಕರ ವಿರುದ್ಧ ಕ್ರಮಕ್ಕೆ ದೊಡ್ಡ ಮಟ್ಟದ ಹೋರಾಟಗಳು ನಡೆಯುತ್ತವೆ. ಉ.ಭಾರತದಿಂದ ಬರುವ ಕಾರ್ಮಿಕರು ಸ್ವತಃ ಶೋಷಣೆಗೆ ಒಳಗಾಗುತ್ತಿದ್ದಾರೆ. ಆದರೆ, ಅವರು ಧ್ವನಿ ಎತ್ತುವುದಿಲ್ಲ. ಹೀಗಾಗಿ ರಾಜ್ಯದ ಕಾರ್ಮಿಕರಿಗಿಂತ ಹೊರರಾಜ್ಯದವರಿಗೆ ಬೇಡಿಕೆ ಹೆಚ್ಚುತ್ತಿದೆ ಎಂದು ಅವರು ಹೇಳಿದರು.

ಬಿಹಾರ ಮೂಲದ ಕಾರ್ಮಿಕ ಮುನಾವರ್‌ ಮಾತನಾಡಿ, ಆರು ತಿಂಗಳಿಗೊಮ್ಮೆ ರಾಜ್ಯಕ್ಕೆ ಹೋಗಿ ಒಂದು ತಿಂಗಳಿದ್ದು ಪುನಃ ಇಲ್ಲಿಗೆ ಕೆಲಸಕ್ಕೆ ವಾಪಸಾಗುತ್ತೇವೆ. ಸಂಬಳವನ್ನು ನಮ್ಮನ್ನು ಕರೆತಂದ ಸಂಬಂಧಿ (ಏಜೆಂಟ್‌) ನಿರ್ಧರಿಸಿ ಕೊಡುತ್ತಾನೆ. ನಾವು ಅದರ ಬಗ್ಗೆ ತಕರಾರು ಮಾಡಲ್ಲ ಎಂದಿದ್ದಾರೆ.

ಕಾರ್ಮಿಕ ಇಲಾಖೆ ಕೈಕಟ್ಟಿ ಕೂತಿದೆ

ಕನ್ನಡದ ಕಾರ್ಮಿಕರು ‘ನ ಘರ್‌ ಕಾ, ನ ಘಾಟ್‌ ಕಾ’ ಎಂಬಂತಾಗಿದ್ದಾರೆ. ವೇತನ ಕೇಳುವ, ಅನ್ಯಾಯ ಪ್ರಶ್ನಿಸುವ ಶಕ್ತಿಯೇ ಇಲ್ಲದಂತಾಗಿದೆ. ಇದನ್ನು ತಪಾಸಣೆ ಮಾಡಬೇಕಾದ ಕಾರ್ಮಿಕ ಇಲಾಖೆ ಕೈಕಟ್ಟಿದೆ. ದೂರು ಕೊಟ್ಟಲ್ಲಿ ಅದನ್ನು ಜೇಬು ತುಂಬಿಸಿಕೊಳ್ಳಲು ಅನುಕೂಲ ಮಾಡಿಕೊಳ್ಳುತ್ತಾರೆ.

- ಜಿ.ಆರ್‌.ಶಿವಶಂಕರ್‌, ಅಧ್ಯಕ್ಷ ಟ್ರೇಡ್‌ ಯೂನಿಯನ್‌ ಕೋ-ಆರ್ಡಿನೇಷನ್‌ ಸೆಂಟರ್‌

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.
Read more Articles on

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ