5 ಲಕ್ಷ ಉದ್ಯೋಗ ಸೃಷ್ಟಿಗೆ ಹೊಸ ಕೈಗಾರಿಕಾ, ಜವಳಿ ನೀತಿ

KannadaprabhaNewsNetwork |  
Published : Feb 17, 2024, 01:17 AM IST
Ramesh Chandra Lahoti | Kannada Prabha

ಸಾರಾಂಶ

ರಾಜ್ಯ ಬಜೆಟ್‌ನಲ್ಲಿ ಘೋಷಿಸಿರುವ ಹೊಸ ಕೈಗಾರಿಕಾ ನೀತಿ ಮತ್ತು ಹೊಸ ಜವಳಿ ನೀತಿಯಿಂದ ರಾಜ್ಯದಲ್ಲಿ ನೇರ ಮತ್ತು ಪರೋಕ್ಷವಾಗಿ 5ಲಕ್ಷ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

ಬೆಂಗಳೂರು ಸಮೀಪ ಇನ್ನೋವೇಶನ್‌ ಆ್ಯಂಡ್‌ ರಿಸರ್ಚ್‌ ಸಿಟಿ

2025ರ ಫೆಬ್ರವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ

ಬೆಂಗಳೂರು-ಮುಂಬೈ ಎಕನಾಮಿಕ್‌ ಕಾರಿಡಾರ್‌ಗೆ ಪೂರಕವಾಗಿ ‘ಕೈಗಾರಿಕಾ ನೋಡ್’

ಕಲಬುರಗಿ ಜಿಲ್ಲೆಯಲ್ಲಿ ‘ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌’

‘ಹೊಸ ಕೈಗಾರಿಕಾ ನೀತಿ’ ಹಾಗೂ ‘ಹೊಸ ಜವಳಿ ನೀತಿ’ ಜಾರಿ, ಬೆಂಗಳೂರು ಬಳಿ ರಿಸರ್ಚ್‌ ಸಿಟಿ ಸ್ಥಾಪನೆ ಸೇರಿ ಬೆಂಗಳೂರು-ಮುಂಬೈ ಎಕನಾಮಿಕ್‌ ಕಾರಿಡಾರ್‌ಗೆ ಪೂರಕವಾಗಿ ಕೈಗಾರಿಕಾ ನೋಡ್ ಯೋಜನೆ ಹಾಗೂ ಕಲಬುರ್ಗಿಯಲ್ಲಿ ‘ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌’ ಸ್ಥಾಪನೆಯ ಘೋಷಣೆ ಮೂಲಕ ಕೈಗಾರಿಕಾ ವಲಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಂಪರ್‌ ಬಳುವಳಿ ನೀಡಿದ್ದಾರೆ.ಸರ್ಕಾರ ಕಳೆದ ಆರ್ಥಿಕ ವರ್ಷ ಆಕರ್ಷಿಸಿರುವ ₹ 88,150 ಕೋಟಿ ಹೂಡಿಕೆಯನ್ನು ಎಲೆಕ್ಟ್ರಾನಿಕ್‌ ಸಿಸ್ಟಂ ಡಿಸೈನ್‌ ಮತ್ತು ಉತ್ಪಾದನೆ, ವಿದ್ಯುತ್ ಚಾಲಿತ ವಾಹನಗಳಿಗೆ ಲಿಥಿಯಂ ಅಯಾನ್ ಬ್ಯಾಟರಿ ತಯಾರಿಕೆ, ಆಟೊಮೊಬೈಲ್, ಡೇಟಾ ಸೆಂಟರ್ ವಲಯದಲ್ಲಿ ವ್ಯಯಿಸಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಿದ್ದಾರೆ.ರಿಸರ್ಚ್‌ ಸಿಟಿ:

ಬೆಂಗಳೂರು ಸಮೀಪ ಸುಮಾರು 2 ಸಾವಿರ ಎಕರೆ ಪ್ರದೇಶದಲ್ಲಿ ನಾಲೆಡ್ಜ್ ಹೆಲ್ತ್‌ ಕೇರ್, ಇನ್ನೋವೇಶನ್‌ ಆ್ಯಂಡ್‌ ರಿಸರ್ಚ್‌ ಸಿಟಿ ಅಭಿವೃದ್ಧಿಪಡಿಸುತ್ತೇವೆ. ಇದರಿಂದ ₹ 40 ಸಾವಿರ ಕೋಟಿ ಬಂಡವಾಳ ಹೂಡಿಕೆ, 80 ಸಾವಿರ ಜನರಿಗೆ ಉದ್ಯೋಗ ದೊರೆವ ನಿರೀಕ್ಷೆಯಿದೆ ಎಂದಿದ್ದಾರೆ.ಕೈಗಾರಿಕಾ ನೋಡ್‌:

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಜಂಟಿ ಸಹಭಾಗಿತ್ವದಲ್ಲಿ ಬೆಂಗಳೂರು-ಮುಂಬಯಿ ಎಕನಾಮಿಕ್‌ ಕಾರಿಡಾರ್‌ಗೆ ಪೂರಕವಾಗಿ ಧಾರವಾಡ ಸಮೀಪ ಸುಮಾರು 6ಸಾವಿರ ಎಕರೆ ಜಮೀನಿನಲ್ಲಿ ‘ಕೈಗಾರಿಕಾ ನೋಡ್’ ರೂಪಿಸಲಾಗುವುದು ಎಂದರು.ಹೂಡಿಕೆದಾರರ ಸಮಾವೇಶ:

ಕೈಗಾರಿಕಾ ಅಭಿವೃದ್ಧಿ ಹಾಗೂ ಹೆಚ್ಚಿನ ಬಂಡವಾಳ ಆಕರ್ಷಣೆಗಾಗಿ ಹೊಸ ಕೈಗಾರಿಕಾ ನೀತಿ ಜಾರಿಗೆ ತರಲಾಗುವುದು. 2025ರ ಫೆಬ್ರವರಿಯಲ್ಲಿ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲಾಗುವುದು. ಎಂಎಸ್ಐಎಲ್ ವತಿಯಿಂದ ಚಿಟ್‌ಫಂಡ್‌ನ್ನು ಗ್ರಾಮಾಂತರ ಪ್ರದೇಶಕ್ಕೆ ವಿಸ್ತರಿಸುತ್ತೇವೆ. ವಿವಿಧ ಜಿಲ್ಲೆಗಳ ಕೈಗಾರಿಕಾ ವಸಾಹತನ್ನು ಕೇಂದ್ರದ ಸಹಯೋಗದಲ್ಲಿ ₹ 39 ಕೋಟಿ ವೆಚ್ಚದಲ್ಲಿ ಮೇಲ್ದರ್ಜೆಗೆ ಏರಿಸಲಾಗುವುದು ಎಂದು ತಿಳಿಸಿದ್ದಾರೆ.ಟ್ರೆಡ್ಸ್ ಒಪ್ಪಂದ:

ಸರ್ಕಾರಿ ಇಲಾಖೆಗಳು, ಸಾರ್ವಜನಿಕ ಉದ್ದಿಮೆ, ಅತೀಸಣ್ಣ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳನ್ನು ಟ್ರೆಡ್ಸ್ (TReDS) ವೇದಿಕೆಯಲ್ಲಿ ತೊಡಗಿಸಿ ಅವುಗಳ ಆರ್ಥಿಕತೆ ಸಧೃಡಗೊಳಿಸುವ ಉದ್ದೇಶದಿಂದ ಒಪ್ಪಂದ ಮಾಡಿಸಲಾಗುವುದು. ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸ್ಟಾಕ್ ಎಕ್ಸ್‌ಚೇಂಜ್‌ ಐಪಿಓ ಬಿಡುಗಡೆ ಮಾಡಲು ತಗಲುವ ವೆಚ್ಚದಲ್ಲಿ ಗರಿಷ್ಠ ಮಿತಿ ₹ 25 ಲಕ್ಷಕ್ಕೆ ಒಳಪಟ್ಟು ಶೇ. 50ರಷ್ಟು ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು.ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಕೆಐಎಲ್‌ಟಿ ಡಿಪ್ಲೊಮಾ ಇನ್ ಲೆದರ್ ಅಂಡ್ ಫ್ಯಾಶನ್ ಟೆಕ್ನಾಲಜಿ ಕೋರ್ಸ್ ಮಾಡಲು ಪ್ರೋತ್ಸಾಹಧನ ಕೊಡಲಿದ್ದೇವೆ. ಮಂಡ್ಯದ ಮೈಶುಗರ್‌ ಕಾರ್ಖಾನೆಯ ಆವರಣದಲ್ಲಿ ಹೊಸ ಸಕ್ಕರೆ ಕಾರ್ಖಾನೆ ನಿರ್ಮಿಸಲಾಗುವುದು ಎಂದರು.ಡ್ರೋನ್‌ ಸರ್ವೆ:

ರಾಜ್ಯದಲ್ಲಿ ಅನಧಿಕೃತ ಗಣಿಗಾರಿಕೆ ನಿಯಂತ್ರಿಸುವ ಜತೆಗೆ ಸಂಪೂರ್ಣ ಖನಿಜ ಬಳಕೆ ಪ್ರಮಾಣವನ್ನು ಡ್ರೋನ್ ಸರ್ವೆ ಮೂಲಕ ವೈಜ್ಞಾನಿಕವಾಗಿ ಅಂದಾಜಿಸುವ ವ್ಯವಸ್ಥೆಯನ್ನು ರಾಜ್ಯಾದ್ಯಂತ ಅನುಷ್ಠಾನ ಮಾಡಲಾಗುವುದು. ಈ ಮೂಲಕ ರಾಜಸ್ವ ಸಂಗ್ರಹಣೆ ಹೆಚ್ಚಿಸಲಾಗುವುದು.ಹೊಸ ಜವಳಿ ನೀತಿ:

ರಾಜ್ಯದಲ್ಲಿ 2024-29ರ ಅವಧಿಗೆ 10 ಸಾವಿರ ಕೋಟಿ ಬಂಡವಾಳ ಹೂಡಿಕೆ ಹಾಗೂ 2 ಲಕ್ಷ ಉದ್ಯೋಗ ಸೃಷ್ಟಿ ಗುರಿಯೊಂದಿಗೆ ‘ಹೊಸ ಜವಳಿ ನೀತಿ’ ಜಾರಿಗೊಳಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಕಲಬುರಗಿ ಜಿಲ್ಲೆಯ 1000 ಎಕರೆ ಪ್ರದೇಶದಲ್ಲಿ ಪಿಪಿಪಿ ಮಾದರಿಯ ‘ಮೆಗಾ ಟೆಕ್ಸ್‌ಟೈಲ್‌ ಪಾರ್ಕ್‌’ ಸ್ಥಾಪಿಸಲಾಗುತ್ತಿದೆ. ಇದರಿಂದ 1 ಲಕ್ಷ ನೇರ ಉದ್ಯೋಗ, 2 ಜನರಿಗೆ ಪರೋಕ್ಷ ಉದ್ಯೋಗ ಸೃಷ್ಟಿಯ ನಿರೀಕ್ಷೆಯಿದೆ. ಯೋಜನೆಗೆ ಪೂರಕವಾಗಿ ಮೂಲ ಸೌಕರ್ಯಕ್ಕಾಗಿ ₹ 50 ಕೋಟಿ ಅನುದಾನ ಒದಗಿಸಲಿದ್ದೇವೆ ಎಂದರು.ರಾಯಚೂರು ಮತ್ತು ಮೈಸೂರು ವಿಭಾಗಗಳಲ್ಲಿ ನೂತನ ಜವಳಿ ಪಾರ್ಕ್‌ ಖಾಸಗಿ-ಸಾರ್ವಜನಿಕ ಸಹಭಾಗಿತ್ವದಲ್ಲಿ ಆರಂಭಿಸಲಾಗುವುದು. ಇದರಿಂದ ಸುಮಾರು 10 ಸಾವಿರ ಉದ್ಯೋಗ ಸೃಷ್ಟಿಯಾಗಲಿದೆ. ಬಳ್ಳಾರಿಯಲ್ಲಿ ‘ಜೀನ್ಸ್ ಅಪಾರೆಲ್ ಪಾರ್ಕ್ ಹಾಗೂ ಸಾಮಾನ್ಯ ಸೌಲಭ್ಯ ಕೇಂದ್ರ’ ಅಭಿವೃದ್ಧಿ ಪಡಿಸಲಾಗುವುದು ಎಂದು ಹೇಳಿದರು. ಜವಳಿ ಪಾರ್ಕ್‌ ಇಲ್ಲದಿರುವ ರಾಜ್ಯದ 25 ಜಿಲ್ಲೆಗಳಲ್ಲಿ ಮಿನಿ ಜವಳಿ ಪಾರ್ಕ್‌ ಸ್ಥಾಪಿಸಲಾಗುವುದು. ಮಹಾತ್ಮಾ ಗಾಂಧೀಜಿ ಭೇಟಿ ನೀಡಿದ್ದ ನಂಜನಗೂಡು ಬದನವಾಳು ಗ್ರಾಮದಲ್ಲಿ ಖಾದಿ ಚಟುವಟಿಕೆ ಪ್ರೋತ್ಸಾಹಿಸಲಿದ್ದೇವೆ ಎಂದರು.

==

ಧಾರವಾಡ ಬಳಿಯ ಕೈಗಾರಿಕಾ ನೋಡ್‌ ಸ್ಥಾಪನೆಯಿಂದ ಬೆಂಗಳೂರಿನ ಹೊರಗೆ ಕೈಗಾರಿಕಾ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಅನುಕೂಲಕರವಾಗಲಿದೆ. ಇದರಿಂದ ಉತ್ತರ ಕರ್ನಾಟಕದಲ್ಲಿ ಉದ್ಯೋಗವನ್ನು ಸೃಷ್ಟಿಸುವುದಕ್ಕೆ ಅನುಕೂಲವಾಗುತ್ತದೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಪಡೆಯಬೇಕಾದ ವಿವಿಧ ಸಮ್ಮತಿ ಮತ್ತು ಅನುಮತಿಗಳಿಗಾಗಿ ಸರಳೀಕೃತ ಕಾರ್ಯ ವಿಧಾನಗಳನ್ನು ಪರಿಚಯಿಸತ್ತಿರುವುದು ಕೈಗಾರಿಕೆಗಳಿಗೆ ಉತ್ತೇಜನಾ ನೀಡಿದಂತಾಗುತ್ತಿದೆ.

- ರಮೇಶ್ ಚಂದ್ರ ಲಹೋಟಿ

ಅಧ್ಯಕ್ಷರು, ಎಫ್‍ಕೆಸಿಸಿಐ------ಫೋಟೋರಮೇಶ್ ಚಂದ್ರ ಲಹೋಟಿ

PREV

Recommended Stories

ಮಾನಸಿಕ ದೈಹಿಕ ಸದೃಢತೆಗೆ ಕ್ರೀಡೆ ಸಹಕಾರಿ
ಸಭೆಯಲ್ಲಿ ಪುರಸಭೆ ಮಳಿಗೆಗಳ ಹರಾಜಿನ ಗದ್ದಲ