ಕನಕಗಿರಿ: ರಾಜ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ತರಲು ಕಾಲಿಗೆ ಚಕ್ರ ಕಟ್ಟಿಕೊಂಡು ಸುತ್ತಾಡುತ್ತೇನೆ ಎಂದು ಮಾಜಿ ಎನ್.ಎಸ್ ಬೋಸರಾಜು ಹೇಳಿದರು.
ಇವತ್ತಿನ ರಾಜಕಾರಣಿಗಳಲ್ಲಿ ತತ್ವ,ಸಿದ್ಧಾಂತಗಳಿಲ್ಲವಾಗಿದೆ. ಅಧಿಕಾರಕ್ಕಾಗಿ ಏನುಬೇಕಾದರೂ ಮಾಡುತ್ತಾನೆ ಎನ್ನುವುದಾದರೆ ಅದು ರಾಜಕಾರಣಿ ಮಾತ್ರ. ಈ ಹಿಂದೆ ಯಾವುದೇ ಪಕ್ಷ, ಜಾತಿ ಎನ್ನುವುದು ಇರಲಿಲ್ಲ. ಪ್ರಸ್ತುತ ದಿನಗಳಲ್ಲಿ ರಾಜಕಾರಣಿಯಾಗಲು ದುಡ್ಡು ಮತ್ತು ಜಾತಿ ಇರಲೆಬೇಕು. ಈ ನಡುವೆ ಜನ ಬೆಂಬಲವೂ ಇದ್ದರೇ ಮಾತ್ರ ಆ ವ್ಯಕ್ತಿ ರಾಜ್ಯವ್ಯಾಪಿ ಬೆಳೆಯುತ್ತಾನೆ. ಇಲ್ಲವಾದರೆ ಅಳಿಯುತ್ತಾ ಹೋಗುತ್ತಾನೆ ಎಂದು ರಾಜಕಾರಣದ ಆತಂಕ ವ್ಯಪ್ತಪಡಿಸಿದ ಅವರು, ನಮ್ಮ ಪಕ್ಷ ಬಲಗೊಳಿಸುವ ನಿಟ್ಟಿನಲ್ಲಿ ಹಾಗೂ ನಮ್ಮ ಪಕ್ಷದ ಕೆಲ ಶಾಸಕರು ಬಿಜೆಪಿ, ಜೆಡಿಎಸ್‌ಗೆ ಹೋಗಬಾರದೆನ್ನುವ ಕಾರಣಕ್ಕೆ ಎಚ್ಚೆತ್ತುಕೊಂಡಿದ್ದೇವೆ. ಆಪರೇಷನ್ ಕಮಲದಿಂದ ನಮ್ಮ ಪಕ್ಷ ಏನೂ ಮಾಡಲು ಸಾಧ್ಯವಿಲ್ಲ. ಮುಂದೆ ಚುನಾವಣೆ ಇರುವುದರಿಂದ ನಾವು ಜಾಗೃತಿಯಿಂದ ಇದ್ದೇವೆ ಎಂದರು.
ನಂತರ ಎಐಸಿಸಿ ವೀಕ್ಷಕ ವಿವೇಕ್ ಬನ್ಸಲ್ ಮಾತನಾಡಿ, ಸರ್ಕಾರದ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿದ್ದು, ಕರ್ನಾಟಕದಲ್ಲಿ ಜಾರಿಗೊಳಿಸಿದಂತೆ ದೇಶದಲ್ಲಿ ಗ್ಯಾರಂಟಿ ಯೋಜನೆ ಜಾರಿಗೊಳಿಸಿದಲ್ಲಿ ಕಾಂಗ್ರೆಸ್ ಕೇಂದ್ರದ ಚುಕ್ಕಾಣಿ ಹಿಡಿಯಲಿದೆ. ಬಡವ, ಹಿಂದುಳಿದ, ಅಲ್ಪಸಂಖ್ಯಾತ ಸೇರಿ ಎಲ್ಲ ಸಮುದಾಯಗಳಿಗೆ ನ್ಯಾಯ ಕೊಡಿಸುವ ಕೆಲಸ ರಾಜ್ಯ ಸರ್ಕಾರ ಮಾಡುತ್ತಿದೆ. ಇನ್ನೂ ಹೆಚ್ಚೆಚ್ಚು ಜನಪರ ಯೋಜನೆ ಮೂಲಕ ಕರ್ನಾಟಕ ಕಾಂಗ್ರೆಸ್ ಭದ್ರಕೋಟೆಯನ್ನಾಗಿಸಬೇಕು ಎಂದರು.ಸಭೆಯ ನಂತರ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರೊಡನೆ ಗುಪ್ತವಾಗಿ ಚರ್ಚಿಸಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಥಳೀಯ ಮುಖಂಡರೊಬ್ಬರ ಹೆಸರನ್ನು ಸೂಚಿಸಿ ಪತ್ರದಲ್ಲಿ ಸಹಿ ಮಾಡಿ ವೀಕ್ಷಕರ ನೇತೃತ್ವದ ತಂಡಕ್ಕೆ ಸಲ್ಲಿಸಲಾಯಿತು.ಈ ವೇಳೆ ಕೆಪಿಸಿಸಿ ವೀಕ್ಷಕಿ ಸುಜಾತ, ಜಿಲ್ಲಾ ಮಹಿಳಾ ಸಮಿತಿಯ ಸದಸ್ಯೆ ಜ್ಯೋತಿ ಗೊಂಡಬಾಳ, ರಾಜ್ಯ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಶಾಂತಪ್ಪ, ಬ್ಲಾಕ್ ಅಧ್ಯಕ್ಷ ಗಂಗಾಧರಸ್ವಾಮಿ, ಕೃಷ್ಣ ಇಟ್ಟಂಗಿ, ಟಿ.ಜೆ.ರಾಮಚಂದ್ರ, ರಾಜಸಾಬ್ ನಂದಾಪುರ, ಶರಣೇಗೌಡ, ಶರಣಪ್ಪ ಭತ್ತದ, ರಮೇಶ ನಾಯಕ ಹುಲಿಹೈದರ, ರವಿ ಪಾಟೀಲ್, ಚಂದ್ರೇಗೌಡ, ವೆಂಕೋಬ ಭೋವಿ, ಕನಕಪ್ಪ ವ್ಯಾಗಡೆ, ರಾಮಣ್ಣ ಆಗೋಲಿ, ಮಂಜುನಾಥ ಯಾದವ್, ವೆಂಕಟೇಶ ಗೋಡಿನಾಳ, ಪ್ರಮೀಳಾ ಮಲ್ಲಿಕಾರ್ಜುನ, ಗೋವರ್ಧನಮ್ಮ ಗೆಜ್ಜೆಲ್, ಗಂಗಾಧರ ಚೌಡ್ಕಿ ಸೇರಿದಂತೆ ಇತರರಿದ್ದರು.