ಹುಬ್ಬಳ್ಳಿ:
ರಾಜ್ಯದಲ್ಲಿರುವ ಜೈನ ಸಮಾಜದ ಜನಸಂಖ್ಯೆಯ ನಿಖರ ಮಾಹಿತಿಯನ್ನು ಸರ್ಕಾರಕ್ಕೆ ಸಲ್ಲಿಸಲು ಇಂದಿನಿಂದ (ಗುರುವಾರ) ನಾನು ಸೇರಿದಂತೆ ವಿವಿಧ ಜೈನ ಸ್ವಾಮೀಜಿಗಳು ರಾಜ್ಯಾದ್ಯಂತ ಪಾದಯಾತ್ರೆ ಮಾಡಲಿದ್ದೇವೆ ಎಂದು ವರೂರು ನವಗ್ರಹ ತೀರ್ಥದ ಆಚಾರ್ಯ ಗುಣಧರನಂದಿ ಮಹಾರಾಜರು ಹೇಳಿದರು.ನವಗ್ರಹ ತೀರ್ಥ ಕ್ಷೇತ್ರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಾತಿಗಣತಿ ಆಧರಿಸಿ ಮಾಧ್ಯಮಗಳಲ್ಲಿ ವರದಿಯಾದಂತೆ ರಾಜ್ಯದಲ್ಲಿ 1.62 ಲಕ್ಷ ಮಂದಿ ಜೈನರಿದ್ದಾರೆ ಎಂದು ಹೇಳಲಾಗುತ್ತಿದೆ. ಸಚಿವ ಜಮೀರ್ ಅಹ್ಮದ್ ಅವರು ವಿಧಾನಸಭೆಯಲ್ಲಿ ಮಾತನಾಡುವಾಗ ಜೈನರ ಜನಸಂಖ್ಯೆ 20 ಲಕ್ಷವಿದೆ ಎಂಬುದಾಗಿ ಹೇಳಿದ್ದರು ಎಂದರು.
ಜಾತಿಗಣತಿ ವೇಳೆ ನಮ್ಮನ್ನೂ ಸೇರಿದಂತೆ ಸಮಾಜದ ಬಹುತೇಕರ ಸಮೀಕ್ಷೆ ಮಾಡಿಲ್ಲ. ಜಾತಿಗಣತಿ ವರದಿಯಲ್ಲಿ ತೋರಿಸಿರುವ ಜೈನ ಸಮಾಜದ ಜನಸಂಖ್ಯೆ ಸುಳ್ಳಾಗಿದೆ. ಇದರಿಂದ ಸಮಾಜಕ್ಕೆ ಬೇಸರವಾಗಿದೆ. ಮಾಧ್ಯಮದಲ್ಲಿ ಪ್ರಕಟವಾದ ಜಾತಿಗಣತಿ ಕುರಿತ ವರದಿ ಅಧಿಕೃತವಾಗಿದ್ದಲ್ಲಿ, ಅದಕ್ಕೆ ನಮ್ಮ ವಿರೋಧವಿದೆ. ಸಮಾಜದ ಅಭಿವೃದ್ಧಿಗೆ ತೊಂದರೆಯಾದರೆ ಸಹಿಸಲ್ಲ ಎಂದರು.ನಾವೇ ಸಮೀಕ್ಷೆ ಮಾಡುವೆವು: ನಾವೇ ಸಮೀಕ್ಷೆ ಮಾಡಿ, ಜೂನ್ 8ರಂದು ಸರ್ಕಾರಕ್ಕೆ ಕಡತ ಸಲ್ಲಿಸುವೆವು. ನಂತರ ಸಮಾಜದವರ ಸಭೆ ನಡೆಸಿ ಮುಂದಿನ ಹೋರಾಟದ ನಿರ್ಧಾರ ಮಾಡಲಾಗುವುದು. ನಮ್ಮ ವರದಿಯನ್ನು ಸರ್ಕಾರ ಒಪ್ಪದಿದ್ದರೆ ರಾಜ್ಯಪಾಲರು, ರಾಷ್ಟ್ರಪತಿ ಮೊರೆ ಹೋಗುತ್ತೇವೆ. ಕಾನೂನು ಹೋರಾಟಕ್ಕೂ ಮುಂದಾಗುತ್ತೇವೆ ಎಂದರು.
ಬೆಳಗಾವಿಯ ಚಿಕ್ಕೊಡಿಯಲ್ಲೇ ಸುಮಾರು 1 ಲಕ್ಷದಷ್ಟು ಜೈನ ಸಮಾಜದವರಿದ್ದಾರೆ. ಸರ್ಕಾರ ಇದನ್ನು ಪರಿಗಣಿಸಿ, ಮತ್ತೆ ಗಣತಿ ನಡೆಸಬೇಕು. ಸಮಾಜದ ನಿಜವಾದ ಜನಸಂಖ್ಯೆ ತಿಳಿಸಬೇಕು ಎಂದು ಆಗ್ರಹಿಸಿದರು.ಮೇ 8ರಂದು ಬೆಳಗಾವಿ ಜಿಲ್ಲೆ ಅಥಣಿಯ ಐನಾಪುರದಲ್ಲಿ ಬೃಹತ್ ಸಭೆ ನಡೆಸಲಾಗುವುದು. ಪದೇ ಪದೇ ಸಮಾಜಕ್ಕಾಗುತ್ತಿರುವ ಅನ್ಯಾಯದ ವಿರುದ್ಧ ಹೋರಾಟದ ರೂಪುರೇಷೆ ನಿರ್ಧರಿಸಲಾಗುವುದು ಎಂದರು.
ವರೂರಿನ ಎಜಿಎಂ ತಾಂತ್ರಿಕ ಕಾಲೇಜ್‌ಗೆ ಬಿ++ ಮಾನ್ಯತೆಹುಬ್ಬಳ್ಳಿ:
ಇಲ್ಲಿನ ವರೂರಿನ ಎಜಿಎಂ ರೂರಲ್ ಕಾಲೇಜ್ ಆಫ್ ಎಂಜಿನೀಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜು ತನ್ನ ಉತ್ತಮ ಸೌಲಭ್ಯ ಹಾಗೂ ಕಲಿಕಾ ವಾತಾವರಣ ನಿರ್ಮಾಣಕ್ಕಾಗಿ ನ್ಯಾಕ್ ಕಮೀಟಿಯಿಂದ ಬಿ++ ಮಾನ್ಯತೆ ಪಡೆದುಕೊಂಡಿದೆ ಎಂದು ಕಾಲೇಜಿನ ಸಂಸ್ಥಾಪಕ ಮತ್ತು ವರೂರು ನವಗ್ರಹ ತೀರ್ಥ ಕ್ಷೇತ್ರದ ಶ್ರೀ ಗುಣಧರನಂದಿ ಮಹಾರಾಜರು ಹೇಳಿದರು.ನಗರದ ಬಳಿಯ ವರೂರು ನವಗ್ರಹ ತೀರ್ಥ ಕ್ಷೇತ್ರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಷಯ ಹಂಚಿಕೊಂಡರು.ನ್ಯಾಕ್ ಕಮೀಟಿಯ ಶಿಫಾರಸ್ಸಿನ ಖುಷಿಯಲ್ಲಿ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಹೊಸದಾಗಿ ಎಂಬಿಎ, ಎಂಸಿಎ ಕೋರ್ಸ್ ಹಾಗೂ ರಿಸರ್ಚ್ ಸೆಂಟರ್ ಆರಂಭಿಸಲಾಗಿದೆ. ಇದರ ಜತೆಗೆ ಈಗಿರುವ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದರು.
ಹೊಸದಾಗಿ ಆರಂಭವಾಗಿರುವ ಎಂಬಿಎ ಮತ್ತು ಎಂಸಿಎಗೆ ಕೋರ್ಸ್‌ಗಳಿಗೆ ತಲಾ 60 ವಿದ್ಯಾರ್ಥಿಗಳನ್ನು ದಾಖಲು ಮಾಡಿಕೊಳ್ಳಲಾಗುತ್ತದೆ. ಇನ್ನುಳಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಹಾಲಿ ಇರುವ ಪ್ರವೇಶಾತಿಯ ಸಂಖ್ಯೆಯನ್ನು ಹೆಚ್ಚಿಸಿ ಕಂಪ್ಯೂಟರ್ ಸೈನ್ಸ್ 180, ಸಿಎಸ್‌ಇ 60, ಇಲೆಕ್ಟ್ರಾನಿಕ್ಸ್ ಆ್ಯಂಡ್ ಎಂಜನೀಯರಿಂಗ್ 120, ಮೆಕ್ಯಾನಿಕಲ್ 60, ಕಂಪ್ಯೂಟರ್ ಸೈನ್ಸ್ 60 ಹಾಗೂ ಸಿವಿಲ್ ವಿಭಾಗದಲ್ಲಿ 30 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದರು.ಬಿಸಿಎ 100, ಬಿಬಿಎ 60, ಡಿಪ್ಲೋಮಾ ಇನ್ ಸಿವಿಲ್ ಎಂಜಿನಿಯರಿಂಗ್ 30, ಡಿಪ್ಲೋಮಾ ಇನ್ ಮೆಕ್ಯಾನಿಕಲ್ ಎಂಜಿನಿಯರಿಂಗ್ 60೦ ಹಾಗೂ ಡಿಪ್ಲೋಮಾ ಇನ್ ಇಲೆಕ್ಟ್ರಾನಿಕ್ಸ್ ಆ್ಯಂಡ್ ಕಮ್ಯುನಿಕೇಷನ್ ಎಂಜಿನೀಯರಿಂಗ್ ವಿಭಾಗದಲ್ಲಿ 60 ಜನರಿಗೆ ಅವಕಾಶ ಕಲ್ಪಿಸಲಾಗಿದೆ ಎಂದರು.
ಇಲ್ಲಿನ ವಾತಾವರಣ, ನುರಿತ ಶಿಕ್ಷಕರ ಪಾಠ ಹಾಗೂ ಅತ್ಯಂತ ಕಡಿಮೆ ಶುಲ್ಕದ ಕಾರಣಕ್ಕೆ ಅನೇಕ ವಿದ್ಯಾರ್ಥಿಗಳು ಇಂದು ಲಕ್ಷಾಂತರ ರುಪಾಯಿ ಸಂಬಳ ಪಡೆಯುತ್ತಿದ್ದಾರೆ. ಬಡ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಸ್ಕಾಲರ್ ಶಿಪ್ ಕೂಡ ನೀಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.ಉಚಿತ ಬೇಸಿಗೆ ಶಿಬಿರ: ವರೂರು ಗ್ರಾಮದ ಸುತ್ತಮುತ್ತಲಿನ ಗ್ರಾಮಗಳ ಮಕ್ಕಳಿಗಾಗಿ ಮೇ 21 ರಿಂದ 27ರ ವರೆಗೆ ಉಚಿತ ಬೇಸಿಗೆ ಶಿಬಿರ ಆಯೋಜಿಸಲಾಗಿದೆ. ಶಿಬಿರದಲ್ಲಿ ಮಕ್ಕಳಿಗೆ ಆಟೋಟ, ಯೋಗ, ಪ್ರಾಣಾಯಾಮ, ಸ್ವಿಮ್ಮಿಂಗ್ ಸೇರಿದಂತೆ ವಿವಿಧ ಬಗೆಯ ತರಬೇತಿ ನೀಡಲಾಗುವುದು. ಎಲ್ಲ ದಿನವೂ ಅವರಿಗೆ ಊಟದ ವ್ಯವಸ್ಥೆ ಮಾಡಲಾಗಿದ್ದು, 5000 ಮಕ್ಕಳು ಹೆಸರು ನೋಂದಾಯಿಸಿಕೊಂಡಿದ್ದಾರೆ ಎಂದು ಶ್ರೀ ಗುಣದರನಂದಿ ಸ್ವಾಮೀಜಿ ತಿಳಿಸಿದರು.